Rajya sabha elections: ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟನೆ
ನನ್ನನ್ನು ಆಯ್ಕೆ ಮಾಡಬೇಕು ಎನ್ನುವುದು ಸ್ನೇಹಿತರು, ಹಿತೈಷಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಆಶಯವಾಗಿತ್ತು ಆದರೆ, ನಾನಾಗಲಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರಾಗಲಿ ಈ ಕುರಿತು ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. -
ಬೆಂಗಳೂರು: ತಾವು ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೆಹಲಿ ಬಿಜೆಪಿ ನಾಯಕರ ಜತೆ ಮಾತುಕತೆಯನ್ನೂ ನಡೆಸಿರಲಿಲ್ಲ. ಕಳೆದ 2014ರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನನ್ನ ನಡುವಿನ ಸಂಬಂಧ ಮುಂದುವರೆದಿದ್ದು, ರಾಜ್ಯಸಭಾ ಸದಸ್ಯ ಸ್ಥಾನಕ್ಕಾಗಿ ಅದು ಮುರಿದು ಬೀಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (HD Devegowda) ಹೇಳಿದರು.
ರಾಜ್ಯಸಭೆ ಟಿಕೆಟ್ ಸಿಗದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ದೇವೆಗೌಡರಿಗೆ ರಾಜ್ಯಸಭೆಗೆ ಆಯ್ಕೆ ಮಾಡದೆ ಬಿಜೆಪಿ ಮೋಸ ಮಾಡಿದೆ ಎಂಬ ಕಾಂಗ್ರೆಸ್ ಹೇಳಿಕೆ ಹಾಗೂ ಮಾಧ್ಯಮಗಳ ವರದಿ ಕಪೋಕಲ್ಪಿತವಾಗಿವೆ. ಅದಕ್ಕಾಗಿ ಎರಡು ದಿನ ಟಿವಿಯನ್ನೇ ಬಂದ್ ಮಾಡಿದ್ದೆ. 18 ಶಾಸಕರನ್ನು ಹೊಂದಿರುವ ಜೆಡಿಎಸ್ ರಾಜ್ಯಸಭೆಗೆ ಹೇಗೆ ಆಯ್ಕೆ ಮಾಡುತ್ತದೆ. ದೇವೇಗೌಡರನ್ನು ಆಯ್ಕೆ ಮಾಡಬೇಕು ಎನ್ನುವುದು ಸ್ನೇಹಿತರು, ಹಿತೈಷಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಆಶಯವಾಗಿತ್ತು ಅಷ್ಟೆ. ನಾನಾಗಲಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರಾಗಲಿ ಈ ಕುರಿತು ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ನರೇಂದ್ರ ಮೋದಿ ಅವರು ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿದ್ದಾರೆ. ಪಕ್ಷಕ್ಕೆ ಬಹುಮತ ಬಂದಾಗಲೂ ಮಿತ್ರ ಪಕ್ಷಗಳನ್ನು ಕಡೆಗಣಿಸಿಲ್ಲ. ಅವರ ನನ್ನ ಸಂಬಂಧ ಚೆನ್ನಾಗಿದೆ. 10 ವರ್ಷಗಳಿಂದ ಉತ್ತಮ ಒಡನಾಟ ಇಟ್ಟುಕೊಂಡಿದ್ದೇನೆ. ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಅಂತಹ ಸಂಬಂಧ ಹಾಳಾಗುತ್ತದೆಯೇ ಎಂದು ಪ್ರಶ್ನಿಸಿದರು.
ಮೋದಿ ಮತ್ತವರ ಆಡಳಿತದ ಕುರಿತು ನನ್ನ ಭಾವನೆಯನ್ನು ನಿರ್ಭಯವಾಗಿ ಹೇಳಿದ್ದೇನೆ. ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದನ್ನು ಉದಾಹರಣೆ ನೀಡಿ ಮೋದಿ ಆಡಳಿತವನ್ನು ಸಮರ್ಥನೆ ಮಾಡಿಕೊಂಡಿದ್ದೇನೆ. ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಗೋದ್ರಾ ಪ್ರಕರಣದ ಬಗ್ಗೆ ಕಠಿಣವಾದ ಅಭಿಪ್ರಾಯ ವ್ಯಕ್ತಪಡಿಸಿದ್ದೆ ಎಂದು ತಿಳಿಸಿದರು.
ರಾಜಕೀಯ ಷಡ್ಯಂತ್ರದಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: ಸಿದ್ದರಾಮಯ್ಯ ಟೀಕೆ
ಇದೇ ವೇಳೆ ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸ್ಮರಿಸಿದ ದೇವೇಗೌಡರು, 'ನಾನು ರಾಜಕಾರಣಕ್ಕೆ ಬಂದು ಎಷ್ಟು ವರ್ಷವಾಯಿತು ಎಂದು ಒಮ್ಮೆ ಯೋಚಿಸಿ. 1954-55 ರಿಂದಲೇ ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ಅಂದು ಕೇವಲ ಗುತ್ತಿಗೆ ಕೆಲಸ ಮಾಡುತ್ತಿದ್ದ ನಾನು, ಅದರ ಜೊತೆ ಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಜನರ ಮಧ್ಯೆಯೇ ಇದ್ದೇನೆ. ಹಾಗಾಗಿ, ಇಂದು ಒಂದು ಸ್ಥಾನಕ್ಕಾಗಿ ನಾನು ಹಾತೊರೆಯುವ ಅಗತ್ಯವಿಲ್ಲ ಎಂದು ಹೇಳಿದರು.