ದೆಹಲಿ, ಮುಂಬೈಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು: ಪಾಕಿಸ್ತಾನದ ಐಎಸ್‌ಐ ಜತೆ ಸಂಪರ್ಕ ಹೊಂದಿದ 9 ಮಂದಿಯ ಬಂಧನ
9 Arrested for Linked to ISI: ಪಾಕಿಸ್ತಾನ ಮೂಲದ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ಶಂಕಿಸಲಾದ ಒಂಬತ್ತು ಉಗ್ರರನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ತನಿಖಾಧಿಕಾರಿಗಳ ಪ್ರಕಾರ ಈ ಗುಂಪು, ಗಡಿಯುದ್ದಕ್ಕೂ ಇರುವ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿತ್ತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಮೇ 30: ಪಾಕಿಸ್ತಾನ (Pakistan) ಮೂಲದ ಜಾಲದೊಂದಿಗೆ ಸಂಪರ್ಕ ಹೊಂದಿರುವುದಾಗಿ ಶಂಕಿಸಲಾದ ಒಂಬತ್ತು ಉಗ್ರರನ್ನು ದೆಹಲಿ ಪೊಲೀಸ್ ವಿಶೇಷ ಘಟಕ (Delhi Police Special Cell) ಬಂಧಿಸಿದೆ. ಈ ಜಾಲವು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (Inter-Services Intelligence) ಹಾಗೂ ಮುಂಬೈ ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದೆ ಎನ್ನಲಾಗಿದೆ. ಆರೋಪಿಗಳು ದೆಹಲಿ, ಮುಂಬೈ ಮತ್ತು ಇತರ ಪ್ರಮುಖ ನಗರಗಳಲ್ಲಿನ ಪ್ರಮುಖ ಸ್ಥಾಪನೆಗಳು ಮತ್ತು ಸೇನೆ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ ಈ ಗುಂಪು, ಗಡಿಯುದ್ದಕ್ಕೂ ಇರುವ ಹ್ಯಾಂಡ್ಲರ್‌ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿತ್ತು. ಭೀತಿ ಸೃಷ್ಟಿಸಲು ಮತ್ತು ಭದ್ರತೆಯನ್ನು ಅಡ್ಡಿಪಡಿಸಲು ಗುರಿಯಿಟ್ಟು ದಾಳಿ ನಡೆಸಲು ಯೋಜನೆ ರೂಪಿಸಿತ್ತು. ನಿರ್ದಿಷ್ಟ ಗುಪ್ತಚರ ಮಾಹಿತಿಗಳನ್ನು ಪಡೆದ ನಂತರ ಈ ಜಾಲದ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಅತ್ಯಾಧುನಿಕ ಪಿಸ್ತೂಲುಗಳು, ಗ್ರೆನೇಡ್‌ಗಳು ಮತ್ತು ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಬಳಸಲು ಉದ್ದೇಶಿಸಲಾದ ಇತರ ವಸ್ತುಗಳು ಸೇರಿವೆ.
ಪಾಕಿಸ್ತಾನ ಮೂಲದ ಭಯೋತ್ಪಾದರಿಂದ ಹಲವೆಡೆ ದಾಳಿಗೆ ಸಂಚು: ನಾಲ್ವರ ಬಂಧನ
ಪ್ರಾಥಮಿಕ ತನಿಖೆಯಲ್ಲಿ, ಬಂಧಿತ ಆರೋಪಿಗಳು ಪಾಕಿಸ್ತಾನದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದು, ಸಂಭಾವ್ಯ ಗುರಿಗಳ ಕುರಿತು ಅವರಿಂದ ನಿರ್ದೇಶನಗಳನ್ನು ಪಡೆಯುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಗುಂಪು, ಪ್ರಮುಖ ಸ್ಥಾಪನೆಗಳು ಹಾಗೂ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಿದೇಶಿಗರೂ ಇದ್ದಾರೆ
ಬಂಧಿತ ವ್ಯಕ್ತಿಗಳು ದೆಹಲಿ, ಮಹಾರಾಷ್ಟ್ರ ಮತ್ತು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ. ಬಂಧಿತರಲ್ಲಿ ಕೆಲವು ವಿದೇಶಿ ಪ್ರಜೆಗಳು ಸಹ ಇದ್ದಾರೆ. ಆದರೆ ಪೊಲೀಸರು ಅವರ ಗುರುತು ಮತ್ತು ರಾಷ್ಟ್ರೀಯತೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆರೋಪಿಗಳ ಮುಂಬೈ ಭೂಗತ ಲೋಕದ ನಡುವಿನ ಸಂಪರ್ಕದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭದ್ರತಾ ಸಂಸ್ಥೆಗಳ ಪ್ರಕಾರ, ಈ ಜಾಲವು ಹಣಕಾಸು ನೆರವು ಹಾಗೂ ಇತರ ಲಾಜಿಸ್ಟಿಕ್ ವ್ಯವಸ್ಥೆಗಳಿಗಾಗಿ ಅಪರಾಧ ಜಾಲಗಳ ಮಾರ್ಗಗಳನ್ನು ಬಳಸಿಕೊಂಡಿರಬಹುದೆಂಬ ಶಂಕೆ ಇದೆ.
ದೇಶದಲ್ಲಿ ಭದ್ರತಾ ಕಳವಳಗಳು ಹೆಚ್ಚುತ್ತಿರುವ ನಡುವೆಯೇ ಶಂಕಿತರನ್ನು ಬಂಧಿಸಲಾಗಿದೆ. ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ಸಂಭವನೀಯ ಭಯೋತ್ಪಾದಕ ಸಂಚನ್ನು ತಡೆಗಟ್ಟುವಲ್ಲಿ ಮಹತ್ವದ ಪ್ರಗತಿ ಎಂದು ಬಣ್ಣಿಸಿದ್ದಾರೆ. ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಿ ವಶಪಡಿಸಿಕೊಂಡ ವಸ್ತುಗಳನ್ನು ವಿಶ್ಲೇಷಿಸಿದ ನಂತರ ಪೊಲೀಸರು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.