ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಬೆಂಗಳೂರಿನಲ್ಲಿ ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್
ರಾಜ್ಯದಲ್ಲಿ ವರದಿಯಾಗುವ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವು 1,00,000 ಜನರಲ್ಲಿ ಸುಮಾರು 101.6 ರಷ್ಟಿದೆ. ಹೀಗಾಗಿ ಕ್ಯಾನ್ಸರ್ ಹೆಚ್ಚಿಗೆ ಇರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ. ಇತ್ತೀಚಿನ ಅಂದಾಜಿನ ಪ್ರಕಾರ, ಕರ್ನಾಟಕವೊಂದರಲ್ಲಿಯೇ ಪ್ರತಿ ವರ್ಷ ಸುಮಾರು 87,000 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ
-
ಬೆಂಗಳೂರು: ಕ್ಯಾನ್ಸರ್ ತಡೆಗಟ್ಟುವಿಕೆ, ಆರಂಭದಲ್ಲಿಯೇ ಕಾಯಿಲೆ ಪತ್ತೆಹಚ್ಚುವ ಮತ್ತು ಸಕಾಲಿಕ ತಪಾಸಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನ್ಯೂಬರ್ಗ್ ಆನಂದ್, ನಗರದಲ್ಲಿ ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿತ್ತು.
ಈ ಜಾಗೃತಿ ನಡಿಗೆಯಲ್ಲಿ ಸ್ಥಳೀಯರು ಮತ್ತು ಆರೋಗ್ಯ ಕ್ಷೇತ್ರದವರು ಉತ್ಸಾಹದಿಂದ ಭಾಗವಹಿಸಿದ್ದರು. ಇದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಾಮೂಹಿಕವಾಗಿ ಸಕಾರಾತ್ಮಕವಾಗಿ ಸ್ಪಂದಿಸುವುದರ ಮಹತ್ವದ ಸಂದೇಶವನ್ನು ಸಾರಿತು. ವೈದ್ಯರು, ಪ್ರಯೋಗಾಲಯ ವೃತ್ತಿಪರರು, ವೈದ್ಯಕೀಯ ವಿದ್ಯಾರ್ಥಿಗಳು, ಕ್ಯಾನ್ಸರ್ ನಿಂದ ಬದುಕುಳಿದವರು, ಪಾಲುದಾರ ಸಂಸ್ಥೆಗಳು ಮತ್ತು ನಗರದಾದ್ಯಂತದ ನಿವಾಸಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನರು ಈ ಜಾಗೃತಿ ನಡಿಗೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
ಶಿವಾಜಿ ನಗರದ ನ್ಯೂಬರ್ಗ್ ಆನಂದ್ ರೆಫರೆನ್ಸ್ ಲ್ಯಾಬೊರೇಟರಿಯಿಂದ ಆರಂಭವಾದ ಈ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ಬೆಂಗಳೂರು ನಗರದ ಪೂರ್ವ ವಿಭಾಗದ ಡಿಸಿಪಿ ದೇವರಾಜು, ಐಪಿಎಸ್, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನ ಮುಖ್ಯ ವೈದ್ಯಕೀಯ ನಿರ್ದೇಶಕಿ ಡಾ. ಸುಜಯ್ ಪ್ರಸಾದ್, ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನ ಗ್ರೂಪ್ ಸಿಒಒ ಐಶ್ವರ್ಯ ವಾಸುದೇವನ್ ಅವರೂ ಪಾಲ್ಗೊಂಡಿದ್ದರು.
ವಾಕಥಾನ್ ನಲ್ಲಿ ಭಾಗಿಯಾದವರು- ʼಆರಂಭಿಕ ಪತ್ತೆ ಜೀವಗಳನ್ನು ಉಳಿಸುತ್ತದೆʼ, ʼಆಶಾವಾದದೊಂದಿಗೆ ಕ್ಯಾನ್ಸರ್ ವಿರುದ್ಧ ಹೋರಾಡಿʼ, ಮತ್ತು "ನಾವು ಒಟ್ಟಾಗಿ ಕ್ಯಾನ್ಸರ್ ವಿರುದ್ಧ ಗೆಲುವು ಸಾಧಿಸಬಲ್ಲೆವುʼ ಮತ್ತಿತರ ಸಂದೇಶಗಳನ್ನು ಹೊಂದಿರುವ ಫಲಕಗಳು ಮತ್ತು ಬ್ಯಾನರ್ ಗಳನ್ನು ಹಿಡಿದುಕೊಂಡು ನಡೆದರು.
ರಾಜ್ಯದಲ್ಲಿ ವರದಿಯಾಗುವ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವು 1,00,000 ಜನರಲ್ಲಿ ಸುಮಾರು 101.6 ರಷ್ಟಿದೆ. ಹೀಗಾಗಿ ಕ್ಯಾನ್ಸರ್ ಹೆಚ್ಚಿಗೆ ಇರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ. ಇತ್ತೀಚಿನ ಅಂದಾಜಿನ ಪ್ರಕಾರ, ಕರ್ನಾಟಕವೊಂದರಲ್ಲಿಯೇ ಪ್ರತಿ ವರ್ಷ ಸುಮಾರು 87,000 ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ದೇಶದಾದ್ಯಂತ ವರದಿಯಾಗುವ ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಕರ್ನಾಟಕದ ಪಾಲು ಶೇಕಡ 6.2ರಷ್ಟಿದೆ. ಸದ್ಯಕ್ಕೆ ರಾಜ್ಯದಲ್ಲಿ 2,30,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಈ ಜಾಗೃತಿ ಉಪಕ್ರಮದ ಕುರಿತು ಮಾತನಾಡಿದ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ಸುಜಯ್ ಪ್ರಸಾದ್ ಅವರು, “ಈ ವಾಕಥಾನ್, ಕ್ಯಾನ್ಸರ್ ವಿರುದ್ಧದ ಜಾಗೃತಿಯನ್ನು ಹೆಚ್ಚಿಸಲಿದೆ. ಕ್ಯಾನ್ಸರ್ ನಿಂದ ಬದುಕುಳಿದವರು, ಆರೈಕೆದಾರರು ಮತ್ತು ಕ್ಯಾನ್ಸರ್ ಆರೈಕೆಯಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡುವ ವೈದ್ಯಕೀಯ ಸಮುದಾಯವನ್ನು ಗೌರವಿಸುವ ಗುರಿ ಹೊಂದಿದೆ. ಜಾಗೃತಿ ಹರಡುವು ದನ್ನು ಮುಂದುವರಿಸಲು, ಆರಂಭಿಕ ತಪಾಸಣೆ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಕ್ಯಾನ್ಸರ್ ನಿಂದ ಬದುಕುಳಿದವರ ಜೊತೆಗೆ ನಿಲ್ಲಲು ಸಾಮೂಹಿಕ ಪ್ರತಿಜ್ಞೆ ಕೈಗೊಳ್ಳುವ ವೇದಿಕೆಯಾಗಿದೆ. ಉತ್ತಮ ಆರೋಗ್ಯ ಫಲಿತಾಂಶ ಪಡೆಯಲು ಸಮುದಾಯ ನೇತೃತ್ವದಲ್ಲಿನ ಉಪಕ್ರಮಗಳ ಸಾಮರ್ಥ್ಯವನ್ನು ಈ ಕಾರ್ಯಕ್ರಮವು ನೆನಪಿಸಿದೆʼ ಎಂದು ಹೇಳಿದರು.
ವಾಕಥಾನ್ ಭಾಗವಾಗಿ, ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂ.ಎನ್ ಅವರು ಈ ಜಾಗೃತಿ ನಡಿಗೆಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದರು. ಕ್ಯಾನ್ಸರ್ ತಂದೊಡ್ಡುವ ಅಪಾಯಗಳನ್ನು ಕಡಿಮೆ ಮಾಡಲು ಆರಂಭದಲ್ಲಿಯೇ ರೋಗಪತ್ತೆ, ನಿಯಮಿತ ತಪಾಸಣೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮಹತ್ವವನ್ನು ಅವರು ವಿವರಿದರು.
ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಇದಕ್ಕೆ ನೆರವಾಗುವ ಸಂಪನ್ಮೂಲಗಳ ಕುರಿತ ಮಾಹಿತಿ ಒಳಗೊಂಡ ಕರಪತ್ರಗಳನ್ನು ಭಾಗವಹಿಸುವವರಿಗೆ ಮತ್ತು ಸಾರ್ವಜನಿಕರಿಗೆ ವಿತರಿಸ ಲಾಯಿತು.