ಡ್ರಗ್ ಕಂಟ್ರೋಲ್ ಇಲಾಖೆಯಿಂದ 5 ತನಿಖಾ ತಂಡ ರಚನೆ: ನಕಲಿ ಔಷಧಿ ಜಾಲಕ್ಕೆ ಪಂಚರಾಜ್ಯ ನಂಟು
ಪ್ರಕರಣದ ಜಾಲವು ಕರ್ನಾಟಕದ ಹೊರತಾಗಿ ಐದು ರಾಜ್ಯಗಳಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಕಂಡುಬಂದಿದ್ದು, ತನಿಖೆ ಮತ್ತಷ್ಟು ವಿಸ್ತರಿಸಲಾಗಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನೈ ಹಾಗೂ ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ಔಷಧಿ ಕಂಪನಿಗಳು ಮತ್ತು ವಿತರಣೆ ವ್ಯವಸ್ಥೆಯ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ರಾಜ್ಯಗಳಲ್ಲಿರುವ ಸಂಸ್ಥೆಗಳ ಪಾತ್ರವೇನು ಎಂಬು ದನ್ನು ಪರಿಶೀಲಿಸಲಾಗುತ್ತಿದೆ.
-
ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ವಿತರಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಪ್ರಕರಣದ ಜಾಲವು ಕರ್ನಾಟಕದ ಹೊರತಾಗಿ ಐದು ರಾಜ್ಯಗಳಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಕಂಡುಬಂದಿದ್ದು, ತನಿಖೆ ಮತ್ತಷ್ಟು ವಿಸ್ತರಿಸ ಲಾಗಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ದೆಹಲಿ, ಚೆನೈ ಹಾಗೂ ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ಔಷಧಿ ಕಂಪನಿಗಳು ಮತ್ತು ವಿತರಣೆ ವ್ಯವಸ್ಥೆಯ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ರಾಜ್ಯಗಳಲ್ಲಿರುವ ಸಂಸ್ಥೆಗಳ ಪಾತ್ರವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಪ್ರಕರಣದ ವ್ಯಾಪ್ತಿ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲ್ ಇಲಾಖೆ ಯಿಂದ 5 ತನಿಖಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡವೂ ಸಂಬಂಧಿತ ರಾಜ್ಯಗಳಿಗೆ ತೆರಳಿ ಅಲ್ಲಿನ ಔಷಧಿ ಕಂಪನಿಗಳು, ಪ್ಯಾಕಿಂಗ್ ಘಟಕಗಳು ಹಾಗೂ ವಿತರಣಾ ವ್ಯವಸ್ಥೆಯ ಕುರಿತು ಮಾಹಿತಿ ಸಂಗ್ರಹಿಸಲಿದೆ.
ಕಂಪನಿಗಳ ಲೇಬಲ್ ಬಳಕೆ ಬಗ್ಗೆ ಅನುಮಾನ: ತನಿಖೆಯ ವೇಳೆ ನಕಲಿ ಔಷಧಿಗಳ ಮೇಲೆ ವಿವಿಧ ರಾಜ್ಯಗಳಲ್ಲಿರುವ ಕಂಪನಿಗಳ ಹೆಸರಿನ ಲೇಬಲ್‌ಗಳು ಬಳಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಲೇಬಲ್‌ಗಳನ್ನು ಕಂಪನಿಗಳ ಅನುಮತಿ ಪಡೆದು ಬಳಸಲಾಗಿದೆಯೇ ಅಥವಾ ಅಕ್ರಮವಾಗಿ ನಕಲು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಐದು ರಾಜ್ಯಗಳಲ್ಲಿರುವ ಸಂಬಂಧಿತ ಔಷಧಿ ಕಂಪನಿಗಳಿಂದ ಅಧಿಕೃತ ಮಾಹಿತಿ ಪಡೆಯಲು ಅಧಿಕಾರಿ ಗಳು ಮುಂದಾಗಿದ್ದಾರೆ. ಕಂಪನಿಗಳ ಲೆಟರ್ ಹೆಡ್ ಮತ್ತು ಅಧಿಕೃತ ದಾಖಲೆಗಳ ಮೂಲಕ ಮಾಹಿತಿ ಕೋರಲು ಸಿದ್ಧತೆ ನಡೆಸಲಾಗುತ್ತಿದೆ.
ಅಕ್ರಮ ಪ್ಯಾಕಿಂಗ್ ಬಗ್ಗೆ ತನಿಖೆ ಔಷಧಿಗಳ ಪ್ಯಾಕಿಂಗ್ ಮತ್ತು ಲೇಬಲಿಂಗ್ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸಂಬಂಧಿತ ಕಂಪನಿಗಳ ಹೆಸರನ್ನು ಬಳಸಿಕೊಂಡು ಅನಧಿಕೃತವಾಗಿ ಔಷಧಿಗಳನ್ನು ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆಯೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.
ಐದು ರಾಜ್ಯಗಳಲ್ಲಿ ತನಿಖೆ ನಡೆಯಲಿರುವುದರಿಂದ ನಕಲಿ ಔಷಧಿ ಜಾಲದ ಹಿಂದಿರುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ವಿತರಣಾ ಮಾರ್ಗಗಳ ಕುರಿತು ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ. ತನಿಖಾ ತಂಡಗಳು ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ದಾಖಲೆಗಳು ಮತ್ತು ಔಷಧಿ ಮಾದರಿಗಳನ್ನು ಪರಿಶೀಲಿಸಲಿವೆ.