ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akasa Air Flight: ಬೆಂಗಳೂರು-ದೆಹಲಿ ವಿಮಾನದಲ್ಲಿ ನಾಟಕೀಯ ಬೆಳವಣಿಗೆ; ಕಂಠಪೂರ್ತಿ ಕುಡಿದುಬಂದ ಪ್ರಯಾಣಿಕನಿಂದ ಗಲಾಟೆ

Bengaluru-Delhi Flight: ಬೆಂಗಳೂರು-ದೆಹಲಿ ವಿಮಾನದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ತನ್ನ ಸೀಟ್‌ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿ ಗಲಾಟೆ ಸೃಷ್ಟಿಸಿರುವ ಘಟನೆ ಅಕ್ಟೋಬರ್‌ 20ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಂಠಪೂರ್ತಿ ಕುಡಿದುಬಂದ ಪ್ರಯಾಣಿಕನಿಂದ ವಿಮಾನದಲ್ಲಿ ಗಲಾಟೆ

-

Ramesh B Ramesh B Oct 23, 2025 4:07 PM

ಬೆಂಗಳೂರು, ಅ. 23: ಬೆಂಗಳೂರು-ದೆಹಲಿ ವಿಮಾನದಲ್ಲಿ ಅಕ್ಟೋಬರ್‌ 20ರಂದು ನಾಟಕೀಯ ಘಟನೆಯೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಂಠಪೂರ್ತಿ ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ತನ್ನ ಸೀಟ್‌ನಲ್ಲಿ ಕುಳಿತುಕೊಳ್ಳಲು ನಿರಾಕರಿಸ ಗಲಾಟೆ ಸೃಷ್ಟಿಸಿದ್ದ. ಇದೇ ಕಾರಣಕ್ಕೆ ಕೆಲಹೊತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಕಾಶ ಏರ್‌ ವಿಮಾನ (Akasa Air flight) ಟೇಕ್‌ಆಫ್‌ಗೆ ಸಿದ್ಧವಾಗುತ್ತಿದ್ದಂತೆ ಪಾನಮತ್ತ ವ್ಯಕ್ತಿ ಗಲಾಟೆ ನಡೆಸುತ್ತಿರುವುದು ವಿಡಿಯೊದಲ್ಲಿ (Viral Video) ಸೆರೆಯಾಗಿದೆ.

ಸೀಟಿನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ ವ್ಯಕ್ತಿ ಕಿರುಚಾಡಲು ಆರಂಭಿಸಿದ. ಅಲ್ಲದೆ ಸಿಬ್ಬಂದಿಯ ಮಾತನ್ನು, ಸಲಹೆ ಕಿವಿಗೆ ಹಾಕಿಕೊಳ್ಳದೆ ಗಲಾಟೆ ಮಾಡಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ವಿಮಾನ ಸಿಬ್ಬಂದಿ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Flight delayed: ಏರ್‌ ಇಂಡಿಯಾದ ವಿಮಾನದ ರೆಕ್ಕೆಯಲ್ಲಿ ಸಿಲುಕಿದ ಹುಲ್ಲು; ಬ್ಯಾಂಕಾಕ್‌ಗೆ ತೆರಳಬೇಕಿದ್ದ ವಿಮಾನ 5 ಗಂಟೆ ವಿಳಂಬ

ವಿಡಿಯೊದಲ್ಲಿ ಏನಿದೆ?

ವೈರಲ್‌ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಸೀಟಿನಲ್ಲಿ ಕುಳಿತುಕೊಳ್ಳಲು ನಿರಾಕರಿಸುತ್ತಿರುವುದು ಕಂಡುಬಂದಿದೆ. ಅಲ್ಲದೆ ಆತ ಸಿಬ್ಬಂದಿಯೊಂದಿಗೆ ಕಿರಿಕ್‌ ಮಾಡಿದ್ದಾನೆ. ಕೊನೆಗೆ ಸಿಬ್ಬಂದಿ ಧಾವಿಸಿ ಆತನನ್ನು ಕರೆದೊಯ್ದರು. ಈ ವೇಳೆ ಸಿಬ್ಬಂದಿ ಯಾವುದೇ ಗಲಾಟೆಗೆ ಆಸ್ಪದ ಕೊಡದೆ ಶಾಂತವಾಗಿ ಪರಿಸ್ಥಿತಿ ನಿಯಂತ್ರಿಸಿದ್ದು ಮೆಚ್ಚುಗೆ ಪಾತ್ರವಾಗಿದೆ. ಇಷ್ಟೆಲ್ಲ ನಾಟಕೀಯ ಬೆಳವಣಿಗೆ ನಡೆದ ಹಿನ್ನೆಲೆಯಲ್ಲಿ ವಿಮಾನದ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ಕೊನೆಗೆ ಕೆಲ ಹೊತ್ತು ತಡವಾಗಿ ವಿಮಾನ ತೆರಳಿತು.

ಈಗ ವೈರಲ್ ಆಗಿರುವ ವಿಡಿಯೊ ವೀಕ್ಷಿಸಿದ ಅನೇಕರು ವಿಮಾನ ನಿಲ್ದಾಣ ಮತ್ತು ವಿಮಾನಯಾನದ ಶಿಷ್ಟಾಚಾರಗಳನ್ನು ಪ್ರಶ್ನಿಸಿದ್ದಾರೆ. ಒಬ್ಬರು, "ದೇಶೀಯ ಟರ್ಮಿನಲ್‌ಗಳಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ. ಈ ವ್ಯಕ್ತಿ ಹೊರಗಿನಿಂದ ಕುಡಿದು ಬಂದಿದ್ದರೆ ಭದ್ರತೆಯನ್ನು ದಾಟಲು ಹೇಗೆ ಸಾಧ್ಯವಾಯಿತು?" ಎಂದು ಪ್ರಶ್ನಿಸಿದ್ದಾರೆ. ಜತೆಗೆ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

"ವಿಮಾನದ ಬಾಗಿಲಿನಲ್ಲಿರುವ ಸಿಬ್ಬಂದಿ ಪ್ರಯಾಣಿಕರು ಸ್ವಾಗತಿಸಲು ಮಾತ್ರವಲ್ಲ, ಅಪಾಯಕಾರಿಯಾಗಬಹುದಾದ ಯಾವುದೇ ಪ್ರಯಾಣಿಕರಿಗೆ ಪ್ರವೇಶವನ್ನು ನಿರಾಕರಿಸಲು ಅವರಿಗೆ ತರಬೇತಿ ನೀಡಲಾಗಿದೆ. ಅಂತಹವರಿಗೆ ಹತ್ತಲು ಅವಕಾಶ ನೀಡಬಾರದು" ಎಂದು ಹೇಳಿದ್ದಾರೆ. "ಇಂತಹ ಪ್ರಯಾಣಿಕರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಿ. ಅಂತಹವರಿಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಬಾರದು" ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಓರ್ವನ ಕೃತ್ಯದಿಂದ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗುತ್ತದೆ. ಅಂತಹವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕುʼʼ ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ.

ಆಕಾಶ QP 1599 ವಿಮಾನದಲ್ಲಿ ಈ ಘಟನೆ ನಡೆದಿದೆ. "ಅಕ್ಟೋಬರ್ 20ರಂದು ಬೆಂಗಳೂರಿನಿಂದ ದೆಹಲಿಗೆ ಕಾರ್ಯನಿರ್ವಹಿಸುತ್ತಿದ್ದ ಅಕಾಶ ಏರ್ ವಿಮಾನ QP 1599ರಲ್ಲಿ ಪ್ರಯಾಣಿಕನೊಬ್ಬ ಅಶಿಸ್ತಿನ ವರ್ತನೆ ತೋರಿದ್ದಾನೆ. ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ನಮ್ಮ ಸಿಬ್ಬಂದಿ ನಮ್ಮ ನೀತಿಗಳಿಗೆ ಅನುಗುಣವಾಗಿ ಅಗತ್ಯವಿರುವ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿದ್ದಾರೆ. ಅಶಿಸ್ತಿನ ಪ್ರಯಾಣಿಕರ ನಡವಳಿಕೆಯ ವಿರುದ್ಧ ನಾವು ಶೂನ್ಯ-ಸಹಿಷ್ಣುತೆ ನೀತಿ ಅನುಸರಿಸುತ್ತಿದ್ದೇವೆ" ಎಂದು ಅಕಾಶ ಏರ್‌ನ ವಕ್ತಾರರು ತಿಳಿಸಿದ್ದಾರೆ.