ವರ್ಷಾಂತ್ಯಕ್ಕೆ 8 ಲಕ್ಷ ಗ್ರಾಮೀಣರಿಗೆ ಇ-ಸ್ವತ್ತು: ಸಚಿವ ಖಂಡ್ರೆ ಘೋಷಣೆ
ರಾಜ್ಯದಲ್ಲಿ ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯುವಲ್ಲಿ ಸಾಕಷ್ಟು ವಿಳಂಬ ಆಗುತ್ತಿತ್ತು. ಈ ತೊಡಕು ನಿವಾರಿಸಲು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಯವರ ನೇತೃತ್ವದಲ್ಲಿ ಬೆಂಗಳೂರು ನಗರ, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯತಿಗಳ ಸಿಇಓಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿ ರಚಿಸ ಲಾಗಿತ್ತು.
-
ಬೆಂಗಳೂರು: ಗ್ರಾಮೀಣ ಆಸ್ತಿಗಳಿಗೆ ಇ-ಸ್ವತ್ತು ಹಂಚಿಕೆಯಲ್ಲಿ ವಿಳಂಬ ತಪ್ಪಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಡಿಸೆಂಬರ್ 31ರೊಳಗೆ 8 ಲಕ್ಷ ಗ್ರಾಮ ಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ(Eshwar Khandre) ತಿಳಿಸಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನ(e-property Campaign)ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1,50,69,090 ಕೋಟಿ ಗ್ರಾಮೀಣ ಆಸ್ತಿ ಇದ್ದು, ಈ ಪೈಕಿ ಈಗಾಗಲೇ 42,92,484 ಆಸ್ತಿಗಳಿಗೆ ನಮೂನೆ 11 ಹಾಗೂ 10,16,730 ಸ್ವತ್ತುಗಳಿಗೆ ನಮೂನೆ ಬಿ ವಿತರಿಸಲಾಗಿದೆ.
ಇನ್ನೂ 97,59,867 ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಾ ಗಿದ್ದು, ವ್ಯಾಜ್ಯರಹಿತ, ಸರಕಾರಿ, ಅರಣ್ಯ ಭೂಮಿಯಲ್ಲಿಲ್ಲದ 80 ಲಕ್ಷ ಗ್ರಾಮೀಣ ಆಸ್ತಿಗಳಿಗೆ ಮುಂದಿನ ವರ್ಷಾಂತ್ಯದೊಳಗೆ ಅಂದರೆ 2027ರ ಡಿಸೆಂಬರ್ 31ರ ಒಳಗಾಗಿ ಇ-ಸ್ವತ್ತು ನೀಡಲು 5927 ಗ್ರಾಮ ಪಂಚಾಯತಿಗಳಿಗೂ ಗುರಿ ನಿಗದಿ ಪಡಿಸಲಾಗಿದೆ. ನಮ್ಮ ಸರಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಭೂ ಗ್ಯಾರಂಟಿ - ಇಸ್ವತ್ತು ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇದು 6ನೇ ಗ್ಯಾರಂಟಿಯಾಗಿದೆ ಎಂದರು.
ಇದನ್ನೂ ಓದಿ: Eshwar B Khandre: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,575 ಎಕರೆ ಕೆರೆ ಭೂಮಿ ಒತ್ತುವರಿ ತೆರವಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ರಾಜ್ಯದಲ್ಲಿ ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯುವಲ್ಲಿ ಸಾಕಷ್ಟು ವಿಳಂಬ ಆಗುತ್ತಿತ್ತು. ಈ ತೊಡಕು ನಿವಾರಿಸಲು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಯವರ ನೇತೃತ್ವದಲ್ಲಿ ಬೆಂಗಳೂರು ನಗರ, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯತಿಗಳ ಸಿಇಓಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿ ರಚಿಸಲಾಗಿತ್ತು.
ಸಮಿತಿಯ ಶಿಫಾರಸಿನಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ಕ್ಕೆ ತಿದ್ದುಪಡಿ ತರಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ, ನಿಖರ, ಡಿಜಟಲೀಕರಿಸಿದ ಮತ್ತು ಭೌಗೋಳಿಕವಾಗಿ ಉಲ್ಲೇಖಿಸಲಾದ ಭೂಮಿ ಮತ್ತು ಆಸ್ತಿ ದಾಖಲೆಗಳನ್ನು ವಿತರಿಸಲು ಭೂ-ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ 5927 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಗ್ರಾಮ ಠಾಣಾ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು. ಭೂಮಿ ಇಲ್ಲದ ಸರ್ವೆ ನಂಬರ್ಗೂ ಇ-ಸ್ವತ್ತು ಕಂದಾಯ ಭೂಮಿಯಲ್ಲಿ ಅಭಿವೃದ್ಧಿಪಡಿಸ ಲಾದ ಕನ್ವರ್ಷನ್ ಆದ ಭೂಮಿ ಮತ್ತು ಕನ್ವರ್ಷನ್ ಆಗದ ಭೂಮಿಯಲ್ಲಿ ಮನೆ ನಿರ್ಮಿಸಿ ಕೊಂಡಿರು ವವರಿಗೂ ಇ-ಸ್ವತ್ತು ನೀಡಲು ಕ್ರಮ ವಹಿಸಲಾ ಗಿದೆ. ಇದರಲ್ಲಿ ಮೊದಲ ಹಂತದಲ್ಲಿ ಪರಿವರ್ತನೆ ಆದ ಭೂಮಿಯಲ್ಲಿ ಅಭಿವೃದ್ಧಿಪಡಿ ಸಲಾದ ಬಿ ಖರಾಬು ಭೂಮಿ ಇಲ್ಲದ ಸರ್ವೆ ನಂಬರ್ ಸ್ವತ್ತುಗಳಿಗೂ ಇ-ಸ್ವತ್ತು ನೀಡಲಾಗುವುದು.
ನಂತರ ಭೂಪರಿವರ್ತನೆ ಆಗದ ಭೂಮಿಯ ಸ್ವತ್ತಿಗೂ ಇ-ಸ್ವತ್ತು ನೀಡಲು ಕೆಲವೇ ತಿಂಗಳುಗಳಲ್ಲಿ ನಿಯಮಗಳಿಗೆ ಮಾರ್ಪಾಡು ಮಾಡಿ, ಕ್ರಮ ವಹಿಸಲಾಗುವುದು. ಹಲವರು ತಲೆಮಾರುಗಳಿಂದ, ದಶಕಗಳಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ತಮ್ಮ ಆಸ್ತಿಯ ವಾಸಿಸುತ್ತಿದ್ದಾರೆ. ಆದರೆ ಇವರ ಆಸ್ತಿಯ ದಾಖಲೆಗಳು ಪ್ರವಾಹ, ಮಳೆ, ಬೆಂಕಿ ಅನಾಹುತದಲ್ಲಿ ಹಾಳಾಗಿದ್ದರೆ, ಮತ್ತೆ ಕೆಲವರ ಆಸ್ತಿ ದಾಖಲೆ ಗೆದ್ದಲು ತಿಂದು ಹೋಗಿದೆ.
ದಾಖಲೆಗಳು ಲಭ್ಯವಿಲ್ಲದವರಿಗೆ 07.04.2025ರ ಪೂರ್ವದಲ್ಲಿನ ವಿದ್ಯುತ್ ಬಿಲ್ ಆಧಾರದ ಮೇಲೆ ಮತ್ತು ಸ್ಥಳ ಮಹಜರು ಮಾಡಿ, ಆಕ್ಷೇಪಣೆ ಸಲ್ಲಿಸಲು 21 ದಿನ ಅವಕಾಶ ನೀಡಿ ನಂತರ ಇ-ಸ್ವತ್ತು ನೀಡಲಾಗುವುದು ಎಂದು ಭರವಸೆ ನೀಡಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತರಾದ ವೆಂಕಟರಾಜಾ, ಬೆಳಗಾವಿ ಸಿಇಓ ರಾಹುಲ್ ಶಿಂಧೆ ಮತ್ತು ಇ-ಆಡಳಿತ ನಿರ್ದೇಶಕರಾದ ಗಿರೀಶ್ ದಿಲೀಪ್ ಬದೋಲೆ ಮತ್ತಿತರರು ಪಾಲ್ಗೊಂಡಿದ್ದರು.
ಕಣಮನೆ, ಮನದಳ ಆಸ್ತಿಗೂ ಇ-ಸ್ವತ್ತು ಮಲೆನಾಡು ಭಾಗದ ಜನರ ವಾಸಸ್ಥಳಗಳ ಸ್ವರೂಪ ಗಮನದಲ್ಲಿಟ್ಟುಕೊಂಡು, ಕಣ ಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ, ನಿಯಮಾನುಸಾರ ಇ-ಸ್ವತ್ತು ದಾಖಲೆ ಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. 4000 ಚದರಡಿಯವರೆಗಿನ ಸ್ವತ್ತಿಗೆ ಈ ಸೌಲಭ್ಯ ಲಭಿಸಲಿದೆ. ಇ-ಸ್ವತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ತೊಡಕಾದರೆ ಅವರು ಸಹಾಯವಾಣಿ 9483476000 ನ್ನು ಸಂಪರ್ಕಿಸಬಹುದು ಎಂದರು.
ಇ-ಸ್ವತ್ತು 3.0 ತಂತ್ರಾಂಶ ಶೀಘ್ರ ಇ-ಸ್ವತ್ತು ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಇ-ಸ್ವತ್ತು 2.0 ತಂತ್ರಾಂಶ ಜಾರಿಯಲ್ಲಿದೆ. ಆದರೆ ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಸುರಕ್ಷಿತಗೊಳಿಸಲು ಮತ್ತು ಸರಕಾರಿ ಆಸ್ತಿಗೆ, ಬಿ ಖರಾಬು ಭೂಮಿಗೆ ಇ-ಸ್ವತ್ತು ನೀಡುವುದನ್ನು ತಡೆಯಲು ಕಂದಾಯ ಇಲಾಖೆಯ ತಂತ್ರಾಂಶದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯುವಂತೆ ಇ-ಸ್ವತ್ತು 03 ತಂತ್ರಾಂಶ ಅಭಿವೃದ್ದಿ ಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಜಮೀನುಗಳ ಅಳತೆ ಅಂದರೆ ಸರ್ವೆಯಲ್ಲಿಯೂ ಸಮಸ್ಯೆ ಇದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಲ್ಲಿಯೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸಲು ಮತ್ತು ಸಿಬ್ಬಂದಿಗೆ ತರಬೇತಿ ನೀಡಿ ರೋವರ್ ಗಳ ಮೂಲಕ ಸರ್ವೆ ಮಾಡಲು ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಇದನ್ನು ಶೀಘ್ರವೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು.
![]()
ಗ್ರಾಮೀಣ ಜನರಿಗೆ ಅವರ ಆಸ್ತಿಯ ಹಕ್ಕು ಕೊಡಿಸಲು ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿದ್ದು, ಜನರಿಗೆ ಸಮಸ್ಯೆ ಆಗದಂತೆ ಮತ್ತು ಸರಕಾರಿ ಆಸ್ತಿಯ ಸಂರಕ್ಷಣೆಯ ಜವಾಬ್ದಾರಿ ಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪ್ರಾಮಾಣಿಕತೆ, ದಕ್ಷತೆ ಮತ್ತು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
-ಈಶ್ವರ ಖಂಡ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
![]()
ಬೆಂಗಳೂರು ನಗರದಲ್ಲಿ 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸ್ ಆಪ್ ಮೂಲಕ ಉಚಿತ ಇ-ಖಾತಾ ವಿತರಣೆ ಮಾಡಲಾಗಿದೆ. ವಾಟ್ಸ್ ಆಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್ನಲ್ಲಿ ಲಿಂಕ್ ಕೂಡ ನೀಡಲಾಗುತ್ತಿದ್ದು, ಇ-ಪಿಐಡಿ ಸಂಖ್ಯೆ ಬಳಸಿಕೊಂಡು ಆನ್ಲೈನ್ ಮೂಲಕ ಇ-ಖಾತಾದಲ್ಲಿ ತಿದ್ದುಪಡಿ ಹಾಗೂ ಮಾಲೀಕತ್ವ ಬದಲಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
-ಮಹೇಶ್ವರ್ ರಾವ್, ಜಿಬಿಎ ಮುಖ್ಯ ಆಯುಕ್ತ