ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರ್ಕಾರದಿಂದ ಉನ್ನತಮಟ್ಟದ ತನಿಖೆ: ಡಿ.ಕೆ.ಶಿವಕುಮಾರ್
ಐಟಿ ಇಲಾಖೆಯ ಬಗ್ಗೆ ನಾನು ಹೆಚ್ಚು ಮಾತನಾಡಿದರೆ ಅದು ರಾಜಕೀಯವಾಗಿ ತಿರುವುದ ಪಡೆಯುತ್ತೆ. ಆದರೆ, ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳ ಕಿರುಕುಳವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉದ್ಯಮಿ ಸಿ.ಜೆ.ರಾಯ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ) -
ಕನಕಪುರ: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್, ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ ಮಾಡಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಯ್ ಒಬ್ಬ ಒಳ್ಳೆಯ ಉದ್ಯಮಿಯಾಗಿದ್ದರು, ಇಂತಹ ಘಟನೆ ನಡೆಯಬಾರದಿತ್ತು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದೆ ಇಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಾಗ, ಸಿ.ಜೆ. ರಾಯ್ ಅವರು ಐದು ನಿಮಿಷ ಸಮಯ ಕೊಡಿ ಎಂದು ಕೇಳಿ ಕೋಣೆಯೊಳಗೆ ಹೋಗಿದ್ದಾರೆ. ಆದರೆ ಅಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಾಳಿ ನಡೆಸಿದ ತಂಡ ಕೇರಳದಿಂದ ಬಂದಿತ್ತು ಎಂಬ ಬಗ್ಗೆ ಮಾಹಿತಿ ಇದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ದೆಹಲಿಯಿಂದಲೂ ವರದಿ ಕೇಳಲಾಗಿದೆ. ನಮ್ಮ ರಾಜ್ಯದಲ್ಲಿ ಈ ಘಟನೆ ನಡೆದಿರುವುದರಿಂದ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ.
ಸಿ.ಜೆ. ರಾಯ್ ಸಾವಿಗೆ ಕೇರಳದ ಆ ಐಟಿ ಅಧಿಕಾರಿಯೇ ಹೊಣೆ: ಸಹೋದರ ಬಾಬು ಸಿ.ಜೋಸೆಫ್ ಆರೋಪ
ಐಟಿ ಇಲಾಖೆಯ ಬಗ್ಗೆ ನಾನು ಹೆಚ್ಚು ಮಾತನಾಡಿದರೆ ಅದು ರಾಜಕೀಯವಾಗಿ ತಿರುವುದ ಪಡೆಯುತ್ತೆ. ಆದರೆ, ಅಧಿಕಾರಿಗಳ ಕಿರುಕುಳವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ತನಿಖೆಯ ಹೆಸರಿನಲ್ಲಿ ಇಂತಹ ಒತ್ತಡ ಹೇರುವುದು ಸರಿಯಲ್ಲ ಎಂದು ಕೇಂದ್ರದ ತನಿಖಾ ಸಂಸ್ಥೆಗಳ ಕಾರ್ಯವೈಖರಿ ವಿರುದ್ಧ ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿ.ಜೆ. ರಾಯ್ ಆತ್ಮಹತ್ಯೆ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದೇನು?
ಬೆಂಗಳೂರು: ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಸಂಬಂಧ ನಗರದ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಐಟಿ ಅಧಿಕಾರಿಗಳ ಜತೆ ಯಾರ‍್ಯಾರು ಇದ್ದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇರಳ ಐಟಿ ಅಧಿಕಾರಿಗಳ ತಂಡ ಕಳೆದ ಮೂರು ದಿನಗಳಿಂದ ಪರಿಶೀಲನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಸಿ.ಜೆ ರಾಯ್ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮಧ್ಯಾಹ್ನ 3 ಗಂಟೆಯಿಂದ 3:15 ರ ಸುಮಾರಿನಲ್ಲಿ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕರು ಘಟನೆ ಸಂಬಂಧ ದೂರು ಕೊಟ್ಟಿದ್ದಾರೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದಿರುವ ಅವರು, ಘಟನೆ ಬಳಿಕ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶೂಟ್ ಮಾಡಿಕೊಂಡ ಗನ್ ಯಾವುದು? ಎಂಬ ಬಗ್ಗೆಯೂ ಸೋಕೋ ಮತ್ತು ಬ್ಯಾಲೆಸ್ಟಿಕ್ ಟೀಂ ನಿಂದ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಐಟಿ ಅಧಿಕಾರಿಗಳ ಜತೆ ಬೇರೆ ಯಾರಾದರೂ ಇದ್ದರಾ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.