Mahatma Gandhi's martyrdom day: ಮಹಾತ್ಮಾಗಾಂಧೀಜಿ ಹುತಾತ್ಮರಾದ ದಿನಾಚರಣೆ ಅಂಗವಾಗಿ ಜಿಲ್ಲಾ ನ್ಯಾಯಾಧೀಶರಿಂದ ಸ್ವಚ್ಛತಾ ಅಭಿಯಾನ
ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗುಗಳ ನಿಯಂತ್ರಣದ, ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿದೆ. ಜಿಲ್ಲೆಯಲ್ಲಿ ವಿವಿಧೆಡೆ ನಡೆಯುವ ಜಾತ್ರೆಗಳು ಸೇರಿದಂತೆ ಜನಸಂದಣಿ ಸೇರುವ ವಿವಿಧ ಕಾರ್ಯಕ್ರಮಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ತಂಡ, ಜಿಲ್ಲಾಡಳಿತದ ಅಧಿಕಾರಿಗಳ ತಂಡ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ.
-
ಚಿಕ್ಕಬಳ್ಳಾಪುರ : ರಾಷ್ಟ್ರೀಯ ಹುತಾತ್ಮರ ದಿನಾಚರಣೆ (National Martyrs' Day)ಅಂಗವಾಗಿ ನಗರದ ಎ.ಪಿ.ಎಂ.ಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಸಾಮಾಜಿಕ ಪಿಡುಗುಗಳ ನಿಯಂತ್ರಣ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಜಿಲ್ಲಾ ವಕೀರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಚ್ಚತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು ಎನ್ನುವ ಸದುದ್ದೇಶದಿಂದ ರಾಷ್ಟ್ರೀಯ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರತಿವರ್ಷ ಮಾಡಲಾಗುತ್ತದೆ. ಅದರಂತೆ ನಗರದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು, ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು, ವಕೀಲರು, ನಗರಸಭೆಯ ಸಿಬ್ಬಂದಿ, ಪೌರ ಕಾರ್ಮಿಕರು, ಎಲ್ಲರೂ ಸೇರಿ ಕರಸುರಕ್ಷತಾ ಚೀಲಗಳನ್ನು ತೊಟ್ಟು ಘನ ತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ಸಂಗ್ರಹಣೆ ಮಾಡಿ ಸ್ವಚ್ಛತಾ ಕಾರ್ಯ ಮಾಡಿರುವುದಕ್ಕೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ: Raghavendra Chitravani: ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ; ಲೋಗೋ ಲಾಂಚ್
ಎಪಿಎಂಸಿ ಆವರಣದಲ್ಲಿ ಜನಸಂದಣಿಯು ಜಾಸ್ತಿ ಇರುವುದು ಗಮನಕ್ಕೆ ಬಂದಿದ್ದು, ಶೌಚಾಲಯ ವ್ಯವಸ್ಥೆ ಉತ್ತಮಗೊಳಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಜಿಲ್ಲಾ ನ್ಯಾಯಾಂಗ ಇಲಾಖೆ ಜಿಲ್ಲಾಡಳಿತದ ಜತೆಗೂಡಿ, ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗುಗಳ ನಿಯಂತ್ರಣದ, ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿದೆ. ಜಿಲ್ಲೆಯಲ್ಲಿ ವಿವಿಧೆಡೆ ನಡೆಯುವ ಜಾತ್ರೆಗಳು ಸೇರಿದಂತೆ ಜನಸಂದಣಿ ಸೇರುವ ವಿವಿಧ ಕಾರ್ಯಕ್ರಮಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ತಂಡ, ಜಿಲ್ಲಾಡಳಿತದ ಅಧಿಕಾರಿಗಳ ತಂಡ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ ಚಿತ್ರಾವತಿ ಜಾತ್ರೆ, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಈ ಕೆಲಸವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಈ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದರು.
ರಸ್ತೆ ಸುರಕ್ಷತಾ ಅಭಿಯಾನವನ್ನು ಕೇವಲ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾಡಿದರೆ ಸಾಲದು ಪ್ರತಿ ತಿಂಗಳು ಪ್ರತಿ ತಾಲ್ಲೂಕಿನ ಒಂದು ಹೋಬಳಿಯಲ್ಲಿ ಒಂದೊಂದು ಅರಿವು ಕಾರ್ಯಕ್ರಮವನ್ನು ಮಾಡಲು ಚಿಂತಿಸಲಾಗಿದೆ.
ಈ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕು ವಕೀಲರ ಸಂಘ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಗೆ ತಿಳಿಸಲಾಗಿದೆ. ಹೋಬಳಿ ಹಂತಕ್ಕೂ ಜಿಲ್ಲಾ ನ್ಯಾಯಾಧೀಶರು ಭೇಟಿ ನೀಡಿ ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಭ್ರೂಣಹತ್ಯೆ ಹಾಗೂ ಫೋಕ್ಸೋ ಪ್ರಕರಣ ಗಳನ್ನು ತಡೆಗಟ್ಟುವ ಆಂದೋಲನದ ಬಗ್ಗೆ ತಿಳಿಸಿಕೊಟ್ಟು ಸ್ಥಳದಲ್ಲೆ ಕಾನೂನುಗಳ, ಹಕ್ಕುಗಳ ಬಗ್ಗೆ ಅರಿವು ಹಾಗೂ ಕಾನೂನು ನೆರವು ನೀಡುವ ಕಾರ್ಯ ಮಾಡಲಾಗುವುದು ಎಂದರು.
ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಯಾರು ಕೂಡ ಮಾಡಬಾರದು. ಪರಿಸರ ಸ್ನೇಹಿ ಕೈಚೀಲಗಳನ್ನು ಎಲ್ಲರೂ ಬಳಸಬೇಕು. ಪ್ರತಿಯೊಬ್ಬರು ದ್ವಿಚಕ್ರ ಚಾಲನೆ ಮಾಡುವಾಗ ಶಿರಸ್ತ್ರಾಣ (ಹೆಲ್ಮೆಟ್) ವನ್ನು ಸಮರ್ಪಕವಾಗಿ ಬಳಸಬೇಕು. ಲಘು ವಾಹನಗಳ ಚಾಲನೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು ಎಂದು ನ್ಯಾಯಾಧೀಶರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ನ್ಯಾಯಾಧೀಶರಾದ ಎಸ್.ವಿ. ಕಾಂತರಾಜು, ಎಸ್.ಶ್ರೀಧರ್, ಎಂ. ಲತಾ ಕುಮಾರಿ, ಹೆಚ್.ಕೆ. ಉಮೇಶ್, ಬಿ.ಶಿಲ್ಪ, ಪ್ರೇಮಕುಮಾರ್, ಮಾನಸ ಶೇಖರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್, ಪ್ಯಾನಲ್ ವಕೀಲರಾದ ಸೌಜನ್ಯಗಾಂಧಿ, ಆರ್.ಶಾಲಿನಿ, ನಝೀಬಾ ತಪ್ಸಮ್, ನವೀನ್ ಕುಮಾರ್, ಶ್ರೀನಾಥ್, ಮುನಿರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ನಗರಸಭೆ ಪೌರಾಯುಕ್ತ ಮನ್ಸೂರ್ ಆಲಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.