ರಾಜ್ಯದಲ್ಲಿ ಜಲ ಸಂಕಷ್ಟ; ಮೇಕೆದಾಟು ಯೋಜನೆ ಡಿಪಿಆರ್‌ಗೆ ತುರ್ತಾಗಿ ಅನುಮೋದನೆ ನೀಡುವಂತೆ ಪ್ರಧಾನಿ ಮೋದಿಗೆ ಎಚ್.ಡಿ.ದೇವೇಗೌಡರ ಪತ್ರ
Karnataka Water Crisis: ಬರ ಪರಿಸ್ಥಿತಿಯಲ್ಲಿ ತಮಿಳುನಾಡಿನ ನೀರಾವರಿಗಿಂತ ಬೆಂಗಳೂರಿನ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಸಿಗಬೇಕು. ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸುವ ಮೂಲಕ ಸಂಕಷ್ಟದಲ್ಲಿರುವ ಕರ್ನಾಟಕದ ರಾಜ್ಯದ ರೈತರು ಹಾಗೂ ಜನಸಾಮಾನ್ಯರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ದೇವೇಗೌಡರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
-
ಬೆಂಗಳೂರು: ಕುಡಿಯುವ ನೀರು ಹಾಗೂ ನೀರಾವರಿಗೆ ಕಾವೇರಿ ಜಲಾನಯನ ಪ್ರದೇಶ ಸೇರಿ ಕರ್ನಾಟಕದಲ್ಲಿ ಎದುರಾಗಿರುವ ಜಲಸಂಕಷ್ಟದ (Karnataka Water Crisis) ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ರ ಬರೆದು, ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವು ಶೀಘ್ರ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
ಮನವಿಯಲ್ಲಿ ಪತ್ರದಲ್ಲಿ ಏನಿದೆ?
ಸುಪ್ರೀಂ ಕೋರ್ಟ್ ಮಾರ್ಪಡಿಸಿರುವ ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಸುಗಮವಾಗಿ ಜಾರಿಗೊಳಿಸುವ ಜವಾಬ್ದಾರಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೊಂದಿದೆ. ಆದರೆ, ಪ್ರಸಕ್ತ ವರ್ಷ ಕರ್ನಾಟಕಕ್ಕೆ ನೀರಿನ ಅಭಾವದ ವರ್ಷವಾಗಿದೆ. ರಾಜ್ಯದಲ್ಲಿ ವಾಡಿಕೆ ಮಳೆಯ ಶೇ.60ರಷ್ಟು ಮಾತ್ರ ದಾಖಲಾಗಿದೆ. ಸುಮಾರು ಶೇ.35ರಿಂದ 40ರಷ್ಟು ಮಳೆ ಕೊರತೆಯಿಂದಾಗಿ ಕರ್ನಾಟಕದ ಜಲಾಶಯಗಳು ತಮ್ಮ ಒಟ್ಟು ಸಾಮರ್ಥ್ಯದ ಶೇ.50ರಿಂದ 55ರಷ್ಟು ಮಾತ್ರ ಭರ್ತಿಯಾಗಿವೆ. ಪರಿಣಾಮವಾಗಿ ನೀರಾವರಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ಭಾರಿ ಕೊರತೆ ಎದುರಾಗಿದೆ.
ಕರ್ನಾಟಕದ ಜಲಾಶಯಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿದ್ದರೂ, ತಮಿಳುನಾಡಿನ ಬೇಡಿಕೆಗೆ ಮಣಿದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ಪದೇಪದೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡುತ್ತಿದೆ. ಮುಂಬರುವ ಬೇಸಿಗೆಯಲ್ಲಿ ಬೆಂಗಳೂರು ಮತ್ತು ನೆರೆಹೊರೆಯ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಜಲಾಶಯಗಳಲ್ಲಿ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ಕಾಯ್ದಿರಿಸಬೇಕೆಂದು ಕರ್ನಾಟಕವು ಪ್ರಾಧಿಕಾರದ ಮುಂದೆ ಮಾಡಿದ ಎಲ್ಲಾ ಮನವಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. CWMA ನಿರ್ದೇಶನಗಳನ್ನು ಪಾಲಿಸಿದರೆ, ಕರ್ನಾಟಕದ ಎಲ್ಲಾ ಜಲಾಶಯಗಳು ಶೀಘ್ರದಲ್ಲೇ ಖಾಲಿಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ, ತಮಿಳುನಾಡಿಗೆ ನೀರಿನ ಅಗತ್ಯವಿರುವುದು ನೀರಾವರಿಗಾಗಿ. ಆದರೆ ಕರ್ನಾಟಕವು ತನ್ನ ಜಲಾಶಯಗಳಲ್ಲಿ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಕಾಯ್ದಿರಿಸಲು ಬಯಸುತ್ತಿದೆ. ರಾಷ್ಟ್ರೀಯ ಜಲ ನೀತಿಯ ಪ್ರಕಾರ ಕುಡಿಯುವ ನೀರಿಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಹೀಗಿರುವಾಗ CWMA ಕರ್ನಾಟಕದ ಅಹವಾಲುಗಳನ್ನು ಆಲಿಸಿ, ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಬೇಡಿಕೆಯನ್ನು ತಿರಸ್ಕರಿಸಬೇಕಿತ್ತು ಎಂದವರು ಅಭಿಪ್ರಾಯಪಟ್ಟಿದ್ದಾರೆ.
I have written a long letter to Prime Minister @narendramodi avaru on the long term water and irrigation interests of Karnataka. I hope to meet the Prime Minister soon and convince him on the points I have raised. @PMOIndia https://t.co/bb7chOvOVz
— H D Devegowda (@H_D_Devegowda) November 16, 2026
ಮನವಿ ಪತ್ರದ ಪ್ರಮುಖ ಅಂಶಗಳು
- ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಅನುಮೋದನೆ ನೀಡಿ: ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ, ತಮಿಳುನಾಡು ಗಡಿಯ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ‘ಮೇಕೆದಾಟು ಕುಡಿಯುವ ನೀರು ಪೂರೈಕೆ ಯೋಜನೆ (ಸಮತೋಲನ ಜಲಾಶಯ)’ ನಿರ್ಮಿಸಲು ಕರ್ನಾಟಕ ಪ್ರಸ್ತಾಪಿಸಿದೆ. ಈ ಸಂಬಂಧ ಅಗತ್ಯವಾದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) 2019ರ ಜನವರಿಯಲ್ಲಿ ಕೇಂದ್ರ ಜಲ ಆಯೋಗಕ್ಕೆ (CWC) ಸಲ್ಲಿಸಲಾಗಿತ್ತು. ನಂತರCWC ಕೇಳಿದ್ದ ಅಗತ್ಯ ಸ್ಪಷ್ಟೀಕರಣಗಳೊಂದಿಗೆ ಕರ್ನಾಟಕವು 2026ರ ಆಗಸ್ಟ್ 13ರಂದು ಪರಿಷ್ಕೃತ DPR ಅನ್ನು ಮರುಸಲ್ಲಿಸಿತ್ತು. ಹೀಗಾಗಿ ಮೇಕೆದಾಟು ಯೋಜನೆಯ DPRಗೆ ಕೇಂದ್ರ ಜಲ ಆಯೋಗವು ಅತ್ಯಂತ ಆದ್ಯತೆಯ ಮೇರೆಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
- ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆಗೆ ಡಿಪಿಆರ್ ಅಂತಿಮಗೊಳಿಸಿ: ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆ ವಿಚಾರವಾಗಿಯೂ ಪ್ರಸ್ತಾಪಿಸಿರುವ ಅವರು, ಈ ಯೋಜನೆಯ ಪ್ರಸ್ತಾಪದ ಪ್ರಕಾರ ಗೋದಾವರಿ ನದಿಯಿಂದ 147 ಟಿಎಂಸಿ ನೀರನ್ನು ಕಾವೇರಿ ನದಿಗೆ ಹರಿಸುವ ಉದ್ದೇಶವಿದೆ. NWDA ಈಗಾಗಲೇ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿದೆ. ಹೀಗಾಗಿ ಫಲಾನುಭವಿ ರಾಜ್ಯಗಳ ಸಮ್ಮತಿಯನ್ನು ಪಡೆದುಕೊಂಡು ಆದಷ್ಟು ಬೇಗ ಡಿಪಿಆರ್ ಅಂತಿಮಗೊಳಿಸಬೇಕು. ಗೋದಾವರಿ-ಕಾವೇರಿ ನದಿ ಜೋಡಣೆಯಲ್ಲಿ (147 ಟಿಎಂಸಿಯಲ್ಲಿ ಕೇವಲ 15.9 ಟಿಎಂಸಿ ಮಾತ್ರ ಹಂಚಿಕೆ) ಕರ್ನಾಟಕಕ್ಕೆ ನ್ಯಾಯಯುತ ಪಾಲು ಹೆಚ್ಚಿಸಬೇಕು ಎಂದು ಕೋರಿದ್ದಾರೆ.
- ಇನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ 13-11-2025 ರ ಆದೇಶದನ್ವಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಅಧಿಕಾರಗಳು ಮತ್ತು ಕಾರ್ಯಗಳನ್ನು ಪರಿಷ್ಕರಿಸಬೇಕು. CWMA ಸಂವಿಧಾನಬಾಹಿರವಾಗಿ ರಾಜ್ಯದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು.
- ತಮಿಳುನಾಡಿನ ಕೋರಿಕೆಯ ಮೇರೆಗೆ ಹೊಸ ನ್ಯಾಯಾಧಿಕರಣ ರಚಿಸಲು ನಿರ್ಧರಿಸಿದ ಕೂಡಲೇ, ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಮರುಪರಿಶೀಲನೆ ವಿಚಾರವನ್ನು ಹೊಸ ನ್ಯಾಯಾಧಿಕರಣ ಮುಂದಿಡಬೇಕು. ಬರ ಪರಿಸ್ಥಿತಿಯಲ್ಲಿ ತಮಿಳುನಾಡಿನ ನೀರಾವರಿಗಿಂತ ಬೆಂಗಳೂರಿನ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಸಿಗಬೇಕು. 50 ವರ್ಷಗಳ ಹಳೆಯ ದತ್ತಾಂಶ ಆಧರಿಸಿದ ಕಾವೇರಿ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ದೇವೇಗೌಡರು ಪತ್ರದಲ್ಲಿ ಕೋರಿದ್ದಾರೆ.