ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳಿನ ಅಜಿತ್‌ ಕುಮಾರ್‌ ನಟನೆಯ ʻಡೇರ್‌ ಡೆವಿಲ್‌ʼ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ವಿಲನ್?‌ ಕಾಲಿವುಡ್‌ನಿಂದ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!

ಅಜಿತ್‌ ಕುಮಾರ್‌ ಅಭಿನಯದ ತಮಿಳು ಚಿತ್ರ ‘ಡೇರ್ ಡೆವಿಲ್’ನಲ್ಲಿ ಖಳನಾಯಕನಾಗಿ ಅಬ್ಬರಿಸಲು ಶಿವರಾಜ್‌ಕುಮಾರ್‌ ಸಜ್ಜಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಆಕ್ಷನ್ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿರುವುದನ್ನು ಅಜಿತ್ ಮ್ಯಾನೇಜರ್ ದೃಢಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Dare Devil Movie: ತಮಿಳು ನಟ ಅಜಿತ್ ಎದುರು ವಿಲನ್ ಆಗ್ತಾರಾ ಶಿವಣ್ಣ?

-

Avinash GR
Avinash GR Nov 16, 2026 4:40 PM

‘ಸೆಂಚುರಿ ಸ್ಟಾರ್’ ಶಿವರಾಜ್‌ಕುಮಾರ್ ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗದೆ, ಪರಭಾಷಾ ಸಿನಿಮಾಗಳಲ್ಲೂ ತಮ್ಮ ನಟನೆಯ ಛಾಪು ಮೂಡಿಸುತ್ತಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ನರಸಿಂಹನಾಗಿ ಅಬ್ಬರಿಸಿದ ಬಳಿಕ ಕಾಲಿವುಡ್‌ನಲ್ಲಿ ಶಿವಣ್ಣನಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಇದೀಗ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಡೇರ್ ಡೆವಿಲ್’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್‌ ಹೊರಬಿದ್ದಿದೆ.

ಪವರ್‌ಫುಲ್‌ ವಿಲನ್‌ ಪಾತ್ರ

ನಿರ್ದೇಶಕ ಅಧಿಕ್ ರವಿಚಂದ್ರನ್ ಆಕ್ಷನ್-ಕಟ್ ಹೇಳುತ್ತಿರುವ ಈ ಆಕ್ಷನ್ ಡ್ರಾಮಾ ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿರುವ ಕುರಿತು ಅಜಿತ್ ಕುಮಾರ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, "ಚಿತ್ರದಲ್ಲಿ ಅತ್ಯಂತ ಪವರ್‌ಫುಲ್‌ ಆದ ವಿಲನ್ ಪಾತ್ರವಿದೆ. ಈ ಪಾತ್ರಕ್ಕಾಗಿ ನಾವು ಹಲವು ಹೆಸರುಗಳನ್ನು ಪರಿಗಣಿಸಿ ಚರ್ಚಿಸಿದ್ದೆವು. ಶಿವರಾಜ್‌ಕುಮಾರ್ ಅವರ ಮೇಲೆ ಅಜಿತ್ ಅವರಿಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ಹೀಗಾಗಿ ಈ ಪವರ್‌ಫುಲ್ ಪಾತ್ರಕ್ಕೆ ಶಿವಣ್ಣ ಅವರನ್ನೇ ಸಂಪರ್ಕಿಸಲು ನಿರ್ಧರಿಸಿದೆವು" ಎಂದು ತಿಳಿಸಿದ್ದಾರೆ.

ಇದೇ ವಾರ ಶೂಟಿಂಗ್‌ನಲ್ಲಿ ಶಿವಣ್ಣ ಭಾಗಿ

ಕೆಲವು ತಿಂಗಳ ಹಿಂದೆಯೇ ಈ ಪಾತ್ರದ ಕುರಿತು ಮಾತುಕತೆ ನಡೆದಿದ್ದು, ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಖುದ್ದು ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಕಥೆ ವಿವರಿಸಿದ್ದರು. ಕಥೆ ಕೇಳಿದ ತಕ್ಷಣವೇ ಶಿವಣ್ಣ ಸಕಾರಾತ್ಮಕವಾಗಿ ಸ್ಪಂದಿಸಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದಾದ ಬಳಿಕ ಸ್ವತಃ ಅಜಿತ್ ಕುಮಾರ್ ಅವರೇ ಶಿವರಾಜ್‌ಕುಮಾರ್ ಅವರೊಂದಿಗೆ ಕರೆ ಮಾಡಿ ಮಾತನಾಡಿ ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನ.17 ಅಥವಾ 18 ರಂದು ಶಿವರಾಜ್‌ಕುಮಾರ್ ಅವರು ‘ಡೇರ್ ಡೆವಿಲ್’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುರೇಶ್ ಚಂದ್ರ ಮಾಹಿತಿ ನೀಡಿದ್ದಾರೆ.

Shivarajkumar: ‘ಜೈಲರ್ 2’ ಟ್ರೇಲರ್ ನೋಡಿ ರಜನಿಕಾಂತ್‌ ಫ್ಯಾನ್ಸ್‌ ದಿಲ್‌ಖುಷ್‌; ಮತ್ತೆ ಅಖಾಡಕ್ಕಿಳಿದ ಟೈಗರ್ ಮುತ್ತುವೇಲ್ ಪಾಂಡಿಯನ್!

ಚೆನ್ನೈನಲ್ಲಿ ಮೊದಲ ಹಂತದ ಶೂಟಿಂಗ್

‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಅಜಿತ್ ಕುಮಾರ್ ಮತ್ತು ನಿರ್ದೇಶಕ ಅಧಿಕ್ ರವಿಚಂದ್ರನ್ ಮತ್ತೊಮ್ಮೆ ಈ ಚಿತ್ರದ ಮೂಲಕ ಒಂದಾಗಿದ್ದಾರೆ. ನವೆಂಬರ್ 2ರಂದು ಚೆನ್ನೈನಲ್ಲಿ ಸರಳ ಪೂಜೆಯೊಂದಿಗೆ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲಾಗಿತ್ತು. ಈ ಮುಹೂರ್ತ ಸಮಾರಂಭಕ್ಕೆ ಅಜಿತ್ ಗೈರುಹಾಜರಾಗಿದ್ದರೂ, ಚಿತ್ರದ ನಿರ್ಮಾಪಕಿಯೂ ಆಗಿರುವ ಅಜಿತ್‌ ಪತ್ನಿ ಶಾಲಿನಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಸದ್ಯ ಚಿತ್ರತಂಡವು ಒಂದು ಆಕ್ಷನ್ ಸನ್ನಿವೇಶದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಡಿಸೆಂಬರ್‌ವರೆಗೂ ಚೆನ್ನೈನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

ಅನಿರುದ್ಧ್‌ ಸಂಗೀತ ನಿರ್ದೇಶನ

‘ಡೇರ್ ಡೆವಿಲ್’ ಚಿತ್ರದಲ್ಲಿ ಬಹುದೊಡ್ಡ ತಾರಾಗಣವೇ ಇದ್ದು, ನಟಿ ಶ್ರೀಲೀಲಾ ಹಾಗೂ ಮಲಯಾಳಂ ನಟ ಉನ್ನಿ ಮುಕುಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಿರಿಯ ನಟ ಪ್ರಭು, ಪಾರ್ಥಿಬನ್, ರೆಡಿನ್ ಕಿಂಗ್ಸ್‌ಲೇ ಮತ್ತು ಸುನಿಲ್ ಕೂಡ ಬಣ್ಣ ಹಚ್ಚಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಹಿಂದೆ ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’ ಮತ್ತು ‘ಜೈಲರ್ 2’ ಚಿತ್ರಗಳಲ್ಲಿ ನಟಿಸಿದ್ದ ಶಿವರಾಜ್‌ಕುಮಾರ್, ಸದ್ಯ ‘ಟೂರಿಸ್ಟ್ ಫ್ಯಾಮಿಲಿ’ ಖ್ಯಾತಿಯ ಅಭಿಷನ್ ಜೀವಿಂತ್ ನಾಯಕನಾಗಿರುವ ‘ಪಿಕಾಸೊ’ ಎಂಬ ತಮಿಳು ಚಿತ್ರದಲ್ಲೂ ತಂದೆಯ ಪಾತ್ರ ನಿರ್ವಹಿಸುತ್ತಿದ್ದು, ಕಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.