ಧರ್ಮಸ್ಥಳ ಪ್ರಕರಣ; ಯೂಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ
ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿ ಕಾಲ್ಪನಿಕ ವಿಚಾರಗಳನ್ನು ಆಧರಿಸಿ ವಿಡಿಯೊ ಹರಿಬಿಟ್ಟ ಸಂಬಂಧ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ ಎಂ.ಡಿ. ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ತನಿಖೆಗೆ ತಡೆ ನೀಡಿದೆ.
ಎಂ.ಡಿ.ಸಮೀರ್. -
ಬೆಂಗಳೂರು: ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿ ಕಾಲ್ಪನಿಕ ವಿಚಾರಗಳನ್ನು ಆಧರಿಸಿ, ಕೃತಕ ಬುದ್ದಿಮತ್ತೆ ನೆರವಿನಿಂದ ವಿಡಿಯೊ ಮಾಡಿ ಹರಿಬಿಟ್ಟ ಸಂಬಂಧ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ಬುಧವಾರ ತಡೆ ನೀಡಿದೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಎಂ.ಡಿ. ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಧರ್ಮಸ್ಥಳ ಠಾಣೆಯಲ್ಲಿ ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ತಡೆ ನೀಡಿದೆ. ಅಲ್ಲದೇ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ವಿಚಾರಣೆ ಮುಂದೂಡಿದೆ.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಅಸ್ಮಾ ಕೌಸರ್ ವಾದ ಮಂಡಿಸಿ, ಸಮೀರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣವಲ್ಲ. ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದ್ದಾಗಿದೆ. ಸಾಕ್ಷಿ ದೂರುದಾರನನ್ನು ಸಂರಕ್ಷಿಸಿದ್ದ ಪ್ರಕರಣ ಇದಾಗಿದ್ದು, ಆದಾಗ್ಯೂ ಕೃತಕ ಬುದ್ದಿಮತ್ತೆ ನೆರವಿನಿಂದ ಸಮೀರ್ ವಿಡಿಯೊ ಮಾಡಿದ್ದಾರೆ. ಕೆಲವು ಶವಗಳನ್ನು ಅಲ್ಲಿ ಹೂಳಲಾಗಿದ್ದು, ಕೆಲವನ್ನು ಅಲ್ಲಿ ಸಂಸ್ಕಾರ ಮಾಡಲಾಗಿದೆ ಎಂದು ವಿಡಿಯೊದಲ್ಲಿ ತೋರಿಸಲಾಗಿದೆ. ಸಮೀರ್ ವಿರುದ್ಧ ಐದು ಪ್ರಕರಣ ದಾಖಲಾಗಿವೆ. ಸಾರ್ವಜನಿಕರನ್ನು ದಾರಿ ತಪ್ಪಿಸಿ, ದ್ವೇಷದ ವಾತಾವರಣ ಸೃಷ್ಟಿಸುವ ಕೆಲಸ ಸಮೀರ್ ಮಾಡಿದ್ದಾನೆ, ತನಿಖೆ ನಡೆಯಲಿ, ಸತ್ಯ ಹೊರಬರಲಿದೆ ಎಂದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್, ಸಮೀರ್ ವಿರುದ್ಧ ತನಿಖೆಗೆ ತಡೆ ನೀಡಿದೆ.
ಶಬರಿಮಲೆ ಚಿನ್ನ ಕಳುವು ಕೇಸ್; ಎಲ್‌ಡಿಎಫ್, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಪ್ರಕರಣದ ಹಿನ್ನೆಲೆ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿದ ಪ್ರಕರಣದ ಕುರಿತು ಕಾಲ್ಪನಿಕ ವಿಚಾರಗಳನ್ನು ಸೃಷ್ಟಿಸಿ, ಕೃತಕ ಬುದ್ದಿಮತ್ತೆಯ ನೆರವಿನಿಂದ ಏಂ.ಡಿ.ಸಮೀರ್ ವಿಡಿಯೊ ಹರಿಬಿಟ್ಟಿದ್ದ. ಹೀಗಾಗಿ ದೊಂಬಿ, ಸಾರ್ವಜನಿಕ ಶಾಂತಿಗೆ ಭಂಗ ತರುವ ಕೃತ್ಯ ಎಸಗಿದ್ದಾನೆ ಎಂದು ಧರ್ಮಸ್ಥಳದ ಪೊಲೀಸರು ಸ್ವಯಂಪ್ರೇರಿತವಾಗಿ 2025ರ ಜುಲೈ 12ರಂದು ಬಿಎನ್‌ಎಸ್ ಸೆಕ್ಷನ್ 240, 192, 353(1)(b) ಅಡಿ ಸಮೀರ್ ಮತ್ತು ದೂತ ಯೂಟ್ಯೂಬ್ ಚಾನಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.