ಹೊರ್ಮುಜ್ ಜಲಸಂಧಿ ತೆರೆಯಲು 35 ರಾಷ್ಟ್ರಗಳನ್ನು ಒಗ್ಗೂಡಿಸುತ್ತೇವೆ: ಇಂಗ್ಲೆಂಡ್
ಇರಾನ್ ವಿರುದ್ಧ ಈಗ ಒಂದೊಂದೇ ದೇಶಗಳು ಅಮೆರಿಕದೊಂದಿಗೆ ಕೈಜೋಡಿಸಲು ಮುಂದಾಗಿವೆ. ಇದೀಗ ಇಂಗ್ಲೆಂಡ್ ಅಮೆರಿಕ ಅಧ್ಯಕ್ಷರ ಬೆದರಿಕೆಗೆ ಮಣಿದಂತಿದೆ. ಇರಾನ್ ವಿರುದ್ದದ ಸಂಘರ್ಷದಲ್ಲಿ ಅಮೆರಿಕದ ಜೊತೆ ಸೇರಲು ಇಂಗ್ಲೆಂಡ್ ಮುಂದಾಗಿದೆ. ಯುದ್ಧ ಆರಂಭವಾದ ಬಳಿಕ ಮುಚ್ಚಿರುವ ಹೊರ್ಮುಜ್ ಜಲಸಂಧಿ ತೆರೆಯಲು 35 ರಾಷ್ಟ್ರಗಳನ್ನು ಒಗ್ಗೂಡಿಸುತ್ತೇವೆ ಎಂದು ಇಂಗ್ಲೆಂಡ್ ಹೇಳಿದೆ.
ಸಂಗ್ರಹ ಚಿತ್ರ -
ಲಂಡನ್: ಕಳೆದ ಫೆಬ್ರವರಿ ತಿಂಗಳ ಕೊನೆಯಲ್ಲಿ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ (Iran war) ನಡೆಸಿದ ಬಳಿಕ ಇರಾನ್ ಪ್ರತೀಕಾರವಾಗಿ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಹಡಗುಗಳ ಸಾಗಾಟವನ್ನು ನಿರ್ಬಂಧಿಸಿತ್ತು. ಇದರಿಂದ ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಮಂಗಳವಾರ ನೀಡಿದ ಹೇಳಿಕೆಯ ಬಳಿಕ ಇದೀಗ ಇಂಗ್ಲೆಂಡ್ (England) ಇರಾನ್ ವಿರುದ್ಧ ಅಮೆರಿಕದೊಂದಿಗೆ ಕೈಜೋಡಿಸಲು ಮುಂದಾಗಿದೆ.
ಅಮೆರಿಕ ಅಧ್ಯಕ್ಷರು ಸಾಮಾಜಿಕ ಮಾಧ್ಯಮ ಟ್ರೂತ್ ಸೋಷಿಯಲ್‌ನ ಇಂಗ್ಲೆಂಡ್ ಅನ್ನು ಉದ್ದೇಶಿಸಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ಹೊರ್ಮುಜ್ ಜಲಸಂಧಿ ತೆರವು ಮಾಡಲು ಅಮೆರಿಕದ ವಿನಂತಿಗೆ ಸಹಾಯ ಮಾಡದೇ ಇರುವ ರಾಷ್ಟ್ರಗಳ ನೆರವಿಗೆ ಇನ್ನು ಮುಂದೆ ಅಮೆರಿಕ ಹೋಗುವುದಿಲ್ಲ. ನೀವು ನಿಮಗಾಗಿ ಹೋರಾಡಲು ಕಲಿಯಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈಗ ಇಂಗ್ಲೆಂಡ್ ಈಗ ಹೊರ್ಮುಜ್ ಜಲಸಂಧಿ ತೆರೆಯಲು 35 ರಾಷ್ಟ್ರಗಳನ್ನು ಒಗ್ಗೂಡಿಸುತ್ತೇವೆ ಎಂದು ಹೇಳಿದೆ.
ಇಸ್ರೇಲ್ ಮೇಲೆ ಇರಾನ್-ಹಿಜ್ಬುಲ್ಲಾ ಜತೆಗೂಡಿ 3ನೇ ಜಂಟಿ ಕಾರ್ಯಾಚರಣೆ ಘೋಷಿಸಿದ ಹೌತಿ ಪಡೆ
ಈ ಕುರಿತು ಮಾತನಾಡಿರುವ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್, ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಈ ವಾರ ಇಂಗ್ಲೆಂಡ್ ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಮ್ಮೇಳನವನ್ನು ಆಯೋಜಿಸಲಿದೆ. ಪ್ರಮುಖ ತೈಲ ಸಾಗಣೆ ಮಾರ್ಗಕ್ಕೆ ಕಡಲ ಭದ್ರತೆಯನ್ನು ಪುನಃಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿರುವ ಹೇಳಿಕೆಗೆ 35 ದೇಶಗಳು ಸಹಿ ಹಾಕಿವೆ ಎಂದು ಅವರು ತಿಳಿಸಿದರು.
ಹೊರ್ಮುಜ್ ಜಲಸಂಧಿಯಲ್ಲಿರುವ ನಿರ್ಬಂಧವನ್ನು ತೆರೆಯಲೆಂದು ನಡೆಸುವ ಸಮ್ಮೇಳನದಲ್ಲಿ ಜಲಸಂಧಿಯಲ್ಲಿ ಸಂಚಾರ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು, ಸಿಕ್ಕಿಬಿದ್ದ ಹಡಗುಗಳು ಮತ್ತು ನಾವಿಕರ ಸುರಕ್ಷತೆಯನ್ನು ಖಾತರಿಪಡಿಸಲು ಮತ್ತು ಪ್ರಮುಖ ಸರಕುಗಳ ಚಲನೆಯನ್ನು ಪುನರಾರಂಭಿಸಲು ನಾವು ತೆಗೆದುಕೊಳ್ಳಬಹುದಾದ ಎಲ್ಲಾ ವಿಧಾನಗಳ ಕುರಿತು ರಾಜತಾಂತ್ರಿಕ ಮತ್ತು ರಾಜಕೀಯ ಕ್ರಮಗಳನ್ನು ನಿರ್ಣಯಿಸುತ್ತದೆ ಎಂದು ಅವರು ತಿಳಿಸಿದರು.
ಸಂಘರ್ಷ ನಿಂತ ಬಳಿಕ ಇದನ್ನು ಹೇಗೆ ಅನುಷ್ಠಾನಗೊಳಿಸುವುದು ಎಂಬುದನ್ನು ನೋಡಲು ಮಿಲಿಟರಿ ಯೋಜಕರನ್ನು ಕೂಡ ಜೊತೆ ಸೇರಿಸಲಾಗುವುದು ಎಂದ ಅವರು ಈಗಾಗಲೇ ಸಹಿ ಹಾಕಿರುವ ದೇಶಗಳಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ನೆದರ್ಲ್ಯಾಂಡ್ಸ್ ಸೇರಿವೆ. ಯುದ್ಧದ ಪರಿಣಾಮವು 1970ರ ದಶಕದಲ್ಲಿ ಇಂಧನ ಬೆಲೆಗಳ ಹೆಚ್ಚಳಕ್ಕೆ ಹೋಲುತ್ತದೆ ಎಂದು ತಿಳಿಸಿದರು.
ಟ್ರಂಪ್ ಟೀಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಇನ್ನು ಯಾವ ರಾಷ್ಟ್ರಕ್ಕೂ ಸಹಾಯ ಮಾಡುವುದಿಲ್ಲ. ತೈಲ ಬೇಕಿದ್ದರೆ ನೀವು ಸ್ವಂತವಾಗಿ ಹುಡುಕಿಕೊಳ್ಳಿ ಎಂದು ಹೇಳಿದ ಬಳಿಕ ಸ್ಟಾರ್ಮರ್ ಈ ಹೇಳಿಕೆ ನೀಡಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ತೆರವುಗೊಳಿಸಲು ಇರಾನ್ ವಿರುದ್ಧ ಹೋರಾಡಲು ನಿರಾಕರಿಸಿದ ಇಂಗ್ಲೆಂಡ್ ನಯಂತಹ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು ಒಂದೋ ಯುಎಸ್‌ನಿಂದ ತೈಲ ಖರೀದಿ ಮಾಡಿ. ಇಲ್ಲವಾದರೆ ಸ್ವಲ್ಪ ಕಾಯುವ ಧೈರ್ಯ ಮಾಡಿ. ಜಲಸಂಧಿಗೆ ಹೋಗಿ ಅದನ್ನು ಪಡೆದುಕೊಳ್ಳಿ ಎಂದು ಹೇಳಿದ್ದರು.
ಅಲ್ಲದೇ ಇರಾನ್ ವಿರುದ್ಧದ ಯುದ್ಧದಲ್ಲಿ ಸೇರಲು ನಿರಾಕರಿಸಿದ ಯುರೋಪಿಯನ್ ದೇಶಗಳನ್ನು ಟೀಕಿಸಿದ್ದು, ಸಂಘರ್ಷದ ಕಾರಣದಿಂದ ಇಂಧನ ಬೆಲೆಗಳನ್ನು ಹೆಚ್ಚಳವಾಗಿದ್ದು, ಇದು ಅಟ್ಲಾಂಟಿಕ್ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತಿದೆ. ನಿಮಗಾಗಿ ಹೋರಾಡುವುದು ಹೇಗೆಂದು ನೀವು ಕಲಿಯಲು ಪ್ರಾರಂಭಿಸಬೇಕು ಎಂದಿದ್ದರು.
ಇರಾನ್ ವಿರುದ್ಧದ ಹೋರಾಟಕ್ಕೆ ಅಮೆರಿಕದೊಂದಿಗೆ ಕೈ ಜೋಡಿಸಲು ಯುಎಇ ಸಜ್ಜು; ಪಶ್ಚಿಮ ಏಷ್ಯಾ ಸಂಘರ್ಷ ಮತ್ತಷ್ಟು ತೀವ್ರ?
ಇರಾನ್ ಯುದ್ಧ ಆರಂಭವಾದ ಬಳಿಕ ಡೊನಾಲ್ಡ್ ಟ್ರಂಪ್ ಮತ್ತು ಸ್ಟಾರ್ಮರ್ ಸಂಬಂಧ ಹದಗೆಟ್ಟಿದ್ದು, ಇದು ಹಲವು ಬಾರಿ ಸಾರ್ವಜನಿಕವಾಗಿ ಸ್ಪಷ್ಟವಾಗಿದೆ. ಯುದ್ಧ ಆರಂಭದಲ್ಲಿ ಸ್ಟಾರ್ಮರ್ ಎರಡು ಬ್ರಿಟಿಷ್ ನೆಲೆಗಳಿಂದ ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕ ಕಳುಹಿಸಿದ ಪ್ರಸ್ತಾಪವನ್ನು ನಿರಾಕರಿಸಿದ್ದರು. ಬಳಿಕ ಬ್ರಿಟಿಷ್ ನಾಗರಿಕರು ಸೇರಿದಂತೆ ಪ್ರದೇಶದ ನಿವಾಸಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಅನುಮತಿ ನೀಡಿದರು.
ಈ ಕುರಿತು ಟ್ರಂಪ್ ಟೀಕಿಸಿದ ಬಳಿಕ ಸ್ಟಾರ್ಮರ್ ಅವರು ಯುಎಸ್ ಮತ್ತು ಇಂಗ್ಲೆಂಡ್ ನಿಕಟ ಮಿತ್ರರಾಷ್ಟ್ರಗಳಾಗಿವೆ. ನನ್ನ ಮೇಲೆ ಏನೇ ಒತ್ತಡ ಇದ್ದರೂ ಅವರು ಬ್ರಿಟಿಷ್ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ್ದರು.