ಖ್ಯಾತ ಪತ್ರಕರ್ತ ಪಿ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ನಿಧನ
ಪ್ರಸಿದ್ಧ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಜೂನ್ 15 ಸೋಮವಾರದಂದು ನಿಧನರಾಗಿದ್ದಾರೆ. 84 ವರ್ಷದ ಇಂದಿರಾ ವಯೋಸಹಜ ಅನಾರೋಗ್ಯ ಎದುರಿಸುತ್ತಿದ್ದರು. ಅವರು ಇಂದು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಪ್ರಸಿದ್ಧ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್ (P Lankesh) ಅವರ ಪತ್ನಿ ಇಂದಿರಾ ಲಂಕೇಶ್ (Indira Lankesh) ಅವರು ಜೂನ್ 15 ಸೋಮವಾರದಂದು ನಿಧನರಾಗಿದ್ದಾರೆ. 84 ವರ್ಷದ ಇಂದಿರಾ ವಯೋಸಹಜ ಅನಾರೋಗ್ಯ ಎದುರಿಸುತ್ತಿದ್ದರು. ಅವರು ಇಂದು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ತಮ್ಮ ಪುತ್ರಿ ಕವಿತಾ ಲಂಕೇಶ್ ಅವರ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಇಂದಿರಾ ಅವರು ಪುತ್ರ ಇಂದ್ರಜಿತ್ ಲಂಕೇಶ್ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
ಇತಿಹಾಸ ಸೃಷ್ಟಿಸಿದ್ದ ಲಂಕೇಶ್ ಪತ್ರಿಕೆಯ ಆರಂಭದ ದಿನಗಳಿಂದಲೂ ಪಿ. ಲಂಕೇಶ್ ಅವರಿಗೆ ಇಂದಿರಾ ಲಂಕೇಶ್ ಅವರು ದೊಡ್ಡ ಬೆಂಬಲವಾಗಿ ನಿಂತಿದ್ದರು. ಲಂಕೇಶ್ ಅವರ ನಿಧನದ ನಂತರವೂ ಪತ್ರಿಕೆ ಮುನ್ನಡೆಸುವಲ್ಲಿ ಹಾಗೂ ಲಂಕೇಶ್ ಪ್ರಕಾಶನದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇಂದಿರಾ ಲಂಕೇಶ್ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ವಲಯದ ಅನೇಕ ಗಣ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇಂದಿರಾ ಅವರು ಹುಳಿ ಮಾವು ಮತ್ತು ನಾನು ಎಂಬ ಆತ್ಮಕಥನವನ್ನೂ ಬರೆದಿದ್ದರು. ಇಂದಿರಾ ಲಂಕೇಶರ ಅಂತ್ಯಕ್ರಿಯೆಯು ಮಂಗಳವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿರುವ ಸ್ಮಶಾನದಲ್ಲಿ ನೆರವೇರಲಿದೆ ಎಂದು ಅವರ ಪುತ್ರಿ ಕವಿತಾ ಲಂಕೇಶ್ ಮಾಹಿತಿ ನೀಡಿದ್ದಾರೆ.
ಸ್ವಾವಲಂಬನೆ ಮತ್ತು ಉದ್ಯಮಶೀಲತೆ
ಪಿ. ಲಂಕೇಶ್ ಅವರು ವಿಶ್ವವಿದ್ಯಾಲಯದ ಪ್ರೊಫೆಸರ್ ಕೆಲಸಕ್ಕೆ ರಾಜೀನಾಮೆ ನೀಡಿದಾಗ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. "ನೀನು ಕೇವಲ ಪಿಯುಸಿ ಓದಿದ್ದಾಕೆ, ನಿನಗೆ ಯಾರು ಕೆಲಸ ಕೊಡ್ತಾರೆ?" ಎಂದು ಲಂಕೇಶರು ಲೇವಡಿ ಮಾಡಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಇಂದಿರಾ, ಬ್ಯಾಂಕ್ ಮತ್ತು ಸ್ನೇಹಿತರಿಂದ ಸಾಲ ಪಡೆದು ಬೆಂಗಳೂರಿನಲ್ಲಿ ಸೀರೆ ಅಂಗಡಿಯನ್ನು ಆರಂಭಿಸಿ ಕುಟುಂಬಕ್ಕೆ ನೆರವಾಗಿದ್ದರು. 2017 ರಲ್ಲಿ ಮಗಳು ಗೌರಿ ಲಂಕೇಶ್ ಹತ್ಯೆ ಬಳಿಕ ಕವಿತಾ ಅವರ ಜೊತೆ ವಾಸಿಸಲು ಶುರು ಮಾಡಿದ್ದ ಅವರು, ಮಗಳ ಸಾವಿನಿಂದ ಬಹಳ ನೊಂದಿದ್ದರು. ಕೆಲ ಸಂದರ್ಶನದಲ್ಲಿ ಗೌರಿ ತನ್ನ ಮಗಳಲ್ಲ ತಾಯಿ ಎಂದು ಹೇಳಿಕೊಂಡಿದ್ದರು.