Bairati Suresh: ಬಸ್ ಓಡಿದರೂ, ಓಡದಿದ್ದರೂ ದುಡ್ಡು ಕೊಡಲು ಸಾಧ್ಯವೇ?: ಬೈರತಿ ಸುರೇಶ್ ಪ್ರಶ್ನೆ
ಒಟ್ಟು 4500 ಎಲೆಕ್ಟ್ರಿಕ್ ಬಸ್ ಗಳನ್ನು ಎಂಟು ವರ್ಷಗಳ ಅವಧಿಯಲ್ಲಿ ಗುತ್ತಿಗೆ ಪಡೆಯಬೇಕಾಗಿದೆ. ಈ ಬಸ್ ಗಳಿಗೆ ಕೇಂದ್ರ ಸರ್ಕಾರವೇನೂ ಸಂಪೂರ್ಣ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಒಂದು ಬಸ್ ಗೆ ಕೇವಲ 30 ರಿಂದ 35 ಲಕ್ಷ ರೂಪಾಯಿಯನ್ನು ಮಾತ್ರ ನೀಡುತ್ತದೆ. ರಾಜ್ಯ ಸರ್ಕಾರ ವಾರ್ಷಿಕ ಕಿಲೋಮೀಟರ್ ಆಧಾರದಲ್ಲಿ ಸುಮಾರು 2850 ರಿಂದ 3000 ಕೋಟಿ ರೂಪಾಯಿ ಹಣ ವನ್ನು ಬಸ್ ನೀಡುವ ಗುತ್ತಿಗೆದಾರ ಸಂಸ್ಥೆಗೆ ನೀಡಬೇಕಾಗುತ್ತದೆ
-
ಸಂಸದ ತೇಜಸ್ವಿ ಸೂರ್ಯ ಅವರಿಗೆ ತಿರುಗೇಟು
ಎಲೆಕ್ಟ್ರಿಕ್ ಬಸ್ ಗೆ ಸಂಪೂರ್ಣ ಹಣವನ್ನು ಕೇಂದ್ರ ನೀಡುವುದಿಲ್ಲ
ಕೇಂದ್ರದ ನೀತಿಯಲ್ಲಿ ಸ್ಪಷ್ಟತೆ ಇಲ್ಲ
ಜನಸಾಮಾನ್ಯರಿಗೆ ಹೊರೆಯಾಗದಂತೆ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ
ಬೆಂಗಳೂರು: ಬಸ್ ಓಡಲಿ, ಬಿಡಲಿ ನಾವು ದುಡ್ಡು ಕೊಡಲು ಸಾಧ್ಯವೇ? ಎಂದು ಸಾರಿಗೆ ಸಚಿವ ಬೈರತಿ ಸುರೇಶ್(Transport Minister Bairati Suresh) ಖಾರವಾಗಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಅನುದಾನದ ಎಲೆಕ್ಟ್ರಿಕ್ ಬಸ್ ಗಳ ಗುತ್ತಿಗೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡುತ್ತಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ(MP Tejaswi Surya) ಅವರ ತೀಕ್ಷ್ಣ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವರು, ಸಾಧಕ-ಬಾಧಕಗಳ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು ಎಂದರು.
ಒಟ್ಟು 4500 ಎಲೆಕ್ಟ್ರಿಕ್ ಬಸ್ ಗಳನ್ನು ಎಂಟು ವರ್ಷಗಳ ಅವಧಿಯಲ್ಲಿ ಗುತ್ತಿಗೆ ಪಡೆಯಬೇಕಾಗಿದೆ. ಈ ಬಸ್ ಗಳಿಗೆ ಕೇಂದ್ರ ಸರ್ಕಾರವೇನೂ ಸಂಪೂರ್ಣ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಒಂದು ಬಸ್ ಗೆ ಕೇವಲ 30 ರಿಂದ 35 ಲಕ್ಷ ರೂಪಾಯಿಯನ್ನು ಮಾತ್ರ ನೀಡುತ್ತದೆ. ರಾಜ್ಯ ಸರ್ಕಾರ ವಾರ್ಷಿಕ ಕಿಲೋಮೀಟರ್ ಆಧಾರದಲ್ಲಿ ಸುಮಾರು 2850 ರಿಂದ 3000 ಕೋಟಿ ರೂಪಾಯಿ ಹಣ ವನ್ನು ಬಸ್ ನೀಡುವ ಗುತ್ತಿಗೆದಾರ ಸಂಸ್ಥೆಗೆ ನೀಡಬೇಕಾಗುತ್ತದೆ. ಆದರೆ, ಈ ಅಂಶವನ್ನು ಹೇಳದೇ ತೇಜಸ್ವಿ ಸೂರ್ಯ ಅವರು ಎಲ್ಲವನ್ನೂ ಕೇಂದ್ರ ಸರ್ಕಾರ ನೀಡುತ್ತದೆ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ತಿರುಗೇಟು ನೀಡಿದರು.
ಇದನ್ನೂ ಓದಿ: Minister Byrati Suresh: ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಬೈರತಿ ಸುರೇಶ್
ಕೇಂದ್ರದ ನೀತಿಯಲ್ಲಿ ಸ್ಪಷ್ಟತೆ ಇಲ್ಲ
ಈ ಗುತ್ತಿಗೆಗೆ ಪಡೆಯುವ ಎಲೆಕ್ಟ್ರಿಕ್ ಬಸ್ ಗಳಿಗೆ ಕಿಲೋಮೀಟರ್ ಆಧಾರದಲ್ಲಿ ಲೆಕ್ಕ ಹಾಕಿ ರಾಜ್ಯ ಸರ್ಕಾರ ಪ್ರತಿ ವರ್ಷ 2850 ರಿಂದ 3000 ಕೋಟಿ ರೂಪಾಯಿ ಹಣವನ್ನು ಇದಕ್ಕಾಗಿ ವ್ಯಯಿಸ ಬೇಕಾಗಿದೆ. ನಮ್ಮ ರಾಜ್ಯಕ್ಕೆ ಎಲೆಕ್ಟ್ರಿಕ್ ಬಸ್ ಗಳ ಅಗತ್ಯವಿದೆ. ಆದರೆ, ಖರ್ಚು ವೆಚ್ಚಗಳನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಪರಿಸ್ಥಿತಿ ಹೀಗಿರುವಾಗ ಈ ಎಲೆಕ್ಟ್ರಿಕ್ ಬಸ್ ಗಳು ಓಡಲಿ ಬಿಡಲಿ ರಾಜ್ಯ ಸರ್ಕಾರ ದುಡ್ಡು ಕೊಡಲೇ ಬೇಕೆಂಬ ನಿಬಂಧನೆ ಹಾಕಲಾಗಿದೆ. ಅಂದರೆ, ಬಸ್ ಕೆಟ್ಟು ಹೋದರೂ ಅಥವಾ ಇನ್ನಿತರ ತಾಂತ್ರಿಕ ಕಾರಣಗಳಿಂದ ಸಂಚರಿಸದಿದ್ದರೂ ಹಣ ಕೊಡಲೇಬೇಕಾಗಿದೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಸಚಿವರು, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯಲ್ಲಿ ಅಸ್ಪಷ್ಟತೆ ಇದೆ. ಈ ಹಿನ್ನೆಲೆಯಲ್ಲಿ ಇದರ ಸಾಧಕ –ಬಾಧಕಗಳನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳ ಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪ್ರಯಾಣ ದರ ಪರಿಷ್ಕರಣೆಗೆ ಲೆಕ್ಕಾಚಾರ
ಕಳೆದ ಐದಾರು ತಿಂಗಳಲ್ಲಿ 4 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಆದರೆ, ಜನ ಸಾಮಾನ್ಯರ ಹಿತದೃಷ್ಟಿಯಿಂದ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಆದರೆ, ಇದೀಗ ಸ್ವಲ್ಪ ಮಟ್ಟಿಗೆ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಹೆಚ್ಚು ಮಾಡಬೇಕು ಎಂದು ಅಧಿಕಾರಿಗಳು ಲೆಕ್ಕಾಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಏನೇ ಆದರೂ, ನಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ ಹೆಚ್ಚು ನಷ್ಟವಾಗದಂತೆ, ಜನಸಾಮಾನ್ಯರಿಗೂ ಹೆಚ್ಚು ಹೊರೆಯಾಗದ ರೀತಿಯಲ್ಲಿ ಪ್ರಯಾಣ ದರವನ್ನು ಹೆಚ್ಚಳ ಮಾಡಬೇಕಾಗಿದೆ. ಈ ಹಿನ್ನೆಲೆ ಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಅದರ ನಿರ್ಧಾರದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
5500 ಕೋಟಿ ರೂ ಬಾಕಿ
ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಶಕ್ತಿಯಾಗಿದೆ. ಈ ಯೋಜನೆಯಿಂದ ಸಾರಿಗೆ ನಿಗಮಗಳಿಗೆ 5500 ಕೋಟಿ ರೂಪಾಯಿಗಳ ಬಾಕಿ ಉಳಿದಿದೆ. ಆದಷ್ಟೂ ಬೇಗ ಈ ಬಾಕಿಯನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಅದೇ ರೀತಿ, ನಿಗಮಗಳ ನೌಕರರಿಗೆ ಬಾಕಿ ಉಳಿದಿರುವ ವೇತನವನ್ನೂ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.