ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಪ್ರಧಾನಿ ನರೇಂದ್ರ ಮೋದಿ ಜೆನ್‌ ಝೀಗಳ ಕ್ಷಮೆ ಕೋರಿದ್ದು ಬೇಜಾರಾಯ್ತುʼʼ: ಅನಂತನಾಗ್‌ ಮನದಾಳ

Actor Anant Nag: ವಿಶ್ವವಾಣಿ ಪುಸ್ತಕ, ವಾಗ್ದೇವಿ ವಿದ್ಯಾ ವರ್ಧಕ ಟ್ರಸ್ಟ್ ಹಾಗೂ ವಾಗ್ದೇವಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಭಾನುವಾರ (ಆಗಸ್ಟ್‌ 2) ಬೆಂಗಳೂರಿನ ಎಫ್‌‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ 9 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಅನಂತನಾಗ್‌, ಯುವ ತಲೆಮಾರಿನಲ್ಲಿ ಓದುವ ಹವ್ಯಾಸ ಬೆಳೆಯಬೇಕು ಎಂದು ಕರೆ ನೀಡಿದರು.

ಚಿತ್ರರಂಗದಲ್ಲಿ ಕಲಾತ್ಮಕತೆ ಕಡಿಮೆಯಾಗುತ್ತಿದೆ: ಅನಂತ್‌ನಾಗ್‌ ವಿಷಾದ

ನಟ ಅನಂತನಾಗ್‌ -

Ramesh Ballamoole
Ramesh Ballamoole Aug 2, 2026 6:46 PM

ಬೆಂಗಳೂರು, ಆ. 2: ʼʼಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನಾನಿರತ ಜೆನ್‌ ಝೀಗಳ (ಯುವ ಜನತೆ) ಕ್ಷಮೆ ಕೋರಿದ್ದಾರೆ. ಇದು ಮನಸ್ಸಿಗೆ ತುಂಬ ನೋವುಂಟು ಮಾಡಿತು. ಅವರು ಕ್ಷಮೆ ಕೋರುವ ಅಗತ್ಯವಿರಲಿಲ್ಲʼʼ ಎಂದು ಹಿರಿಯ ನಟ, ಪದ್ಮಭೂಷಣ ಪುರಸ್ಕೃತ ಕಲಾವಿದ ಅನಂತನಾಗ್‌ (Actor Anant Nag) ತಿಳಿಸಿದರು. ವಿಶ್ವವಾಣಿ ಪುಸ್ತಕ (Vishwavani Pustaka), ವಾಗ್ದೇವಿ ವಿದ್ಯಾ ವರ್ಧಕ ಟ್ರಸ್ಟ್ ಹಾಗೂ ವಾಗ್ದೇವಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಭಾನುವಾರ (ಆಗಸ್ಟ್‌ 2) ಬೆಂಗಳೂರಿನ ಎಫ್‌‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ 9 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

''ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವೇಶ್ವರ ಭಟ್‌ ಕರೆ ಮಾಡಿದಾಗ ನನಗೆ ಅಚ್ಚರಿಯಾಯ್ತು. ತಕ್ಷಣವೇ ಬರ್ತೇನೆ ಎಂದು ಹೇಳಿಬಿಟ್ಟೆ. ಆಗ ನನ್ನ ಪತ್ನಿ ಬರ್ತೀನಿ ಅಂದುಬಿಟ್ರಲ್ಲ. ಹೋಗ್ತಿದ್ದೀರಾ? ಎಂದು ಕೇಳಿದ್ರು. ನಾನು ಹೋಗ್ತೇನೆ ಅಂದೆ. ಸಾಮಾನ್ಯವಾಗಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿಕೊಳ್ಳುವುದಿಲ್ಲ. ನಾನು ಒಪ್ಪಿಕೊಂಡಿದ್ದು ನೋಡಿ ಅವರಿಗೇ ಅಚ್ಚರಿಯಾಗಿತ್ತುʼʼ ಎಂದು ಅನಂತನಾಗ್‌ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಕೊಂಡಿದ್ದನ್ನು ಮೆಲುಕು ಹಾಕಿದರು.

ಕನ್ನಡ ಪುಸ್ತಕಗಳಿಗೆ ಓದುಗರು ಇದ್ದೇ ಇದ್ದಾರೆ, ತಲುಪಿಸುವ ಕೆಲಸವಾಗಬೇಕು: ವಿಶ್ವೇಶ್ವರ ಭಟ್‌

ಅಪರೂಪದ ಭೇಟಿ

ʼʼಚಿತ್ರರಂಗದಲ್ಲಿ 5 ದಶಕಗಳಿಂದ ಸಕ್ರಿಯವಾಗಿ ಇರುವುದರಿಂದ ನನಗೆ ಹಲವು ಪತ್ರಕರ್ತ ಮಿತ್ರರಿದ್ದಾರೆ. ಆದರೆ ವಿಶ್ವೇಶ್ವರ ಭಟ್‌ ಅವರನ್ನು ಭೇಟಿಯಾಗಿದ್ದು ಬಹಳ ಅಪರೂಪ. ಒಂದೆರಡು ಬಾರಿ ಭೇಟಿಯಾಗಿದ್ದು ಬಿಟ್ಟರೆ ಅವರೊಂದಿಗೆ ಹೆಚ್ಚು ಒಡನಾಟವಿರಲಿಲ್ಲ. ಆದರೆ ಅವರ ಬಗ್ಗೆ ಗೊತ್ತಿತ್ತು. ಕಾರ್ಯಕ್ರಮಕ್ಕೆ ಆಹ್ವಾನಿಸಲು ಕರೆ ಮಾಡಿದ್ದ ವಿಶ್ವೇಶ್ವರ ಭಟ್‌, ವೈಎನ್‌ಕೆ ಅವರ ಮನೆಯಲ್ಲಿ ಭೇಟಿಯಾಗಿದ್ದೆವು ನೆನಪಿದ್ಯಾ ಎಂದು ಪ್ರಶ್ನಿಸಿದ್ದರು. ಅವರ ಜತೆ ಯಾಕೆ ನಾನು ಹೆಚ್ಚೆಚ್ಚು ಸಂಪರ್ಕಕ್ಕೆ ಬಂದಿಲ್ಲ ಎಂದು ಚಿಂತಿಸಿದೆ. ಇದು ನನಗಾದ ನಷ್ಟ. ಇನ್ನುಮುಂದೆ ಅವರ ಜತೆ ಸಂಪರ್ಕದಲ್ಲಿರಲು ಯತ್ನಿಸುತ್ತೇನೆʼʼ ಎಂದು ಹೇಳಿದರು.

ಜೆನ್‌ ಝೀ ಪ್ರತಿಭಟನೆ ಬಗ್ಗೆ ಹೇಳಿದ್ದೇನು?

ʼʼಇಂದಿನ ತಲೆಮಾರಿನಂತೆ ಎತ್ತ ಹೋಗಬೇಕು, ಏನು ಮಾಡಬೇಕು ಎಂದು ತಿಳಿಯದ ಗೊಂದಲದ ಸ್ಥಿತಿಯಲ್ಲಿದ್ದೇನೆ. ನಾವು ಬಾಲ್ಯದಲ್ಲಿ ಪಟ್ಟ ಯಾವ ಕಷ್ಟವನ್ನೂ ಇಂದಿನ ತಲೆಮಾರು ಅನುಭವಿಸುತ್ತಿಲ್ಲ. ಅವರಿಗೆ ಎಲ್ಲವೂ ಸುಲಭವಾ ಗಿ ದೊರೆಯುತ್ತಿದೆ. ಮೊನ್ನೆ ನಡೆದಂತಹ ಪ್ರತಿಭಟನೆ ಯಾವುದೇ ಹಳ್ಳಿಗಳಲ್ಲಿ ಆಗುವುದಿಲ್ಲ. ಪಟ್ಟಣದಲ್ಲಿ ಹರಡುತ್ತಿರುವ ರೋಗ ಇದು. ಮೊನ್ನೆ ಪ್ರಧಾನಿ ಜೆನ್‌ ಝೀ ತಲೆಮಾರಿನ ಕ್ಷಮೆ ಕೋರಿದರು ಎಂದಾಗ ನೋವಾಯ್ತು. ನನ್ನ ಕೆನ್ನೆ ಮೇಲೆ ನಾನೇ ಹೊಡೆದುಕೊಂಡೆ. ಇವರ ಕ್ಷಮೆ ಕೋರುದಾ ಎನಿಸ್ತು. ಅದೇನೇ ಇರಲಿ ಇದು ನಮ್ಮ ಪ್ರಧಾನಿ ಅವರ ದೊಡ್ಡ ಗುಣ. ನನಗಂತೂ ಕ್ಷಮಿಸಲು ಆಗ್ತಿರಲಿಲ್ಲʼʼ ಎಂದರು.

Anant Nag

ಓದುಗರಿಗೆ ತಲುಪಲಿ

ಇಂದು ಬಿಡುಗಡೆಯಾದ ಪುಸ್ತಕಗಳು ಲಕ್ಷಾಂತರ ಮಂದಿಗೆ ತಲುಪುವಂತಾಗಲಿ ಎಂದು ಅನಂತನಾಗ್‌ ಹಾರೈಸಿದರು. ʼʼಕನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಈಗ ಕಡಿಮೆಯಾಗಿದೆ. ಆರಂಭದಲ್ಲಿ ನಾನೂ ಹೆಚ್ಚು ಕನ್ನಡ ಪುಸ್ತಕ ಓದಿರಲಿಲ್ಲ. ನಾನು ಬೆಳೆದಿದ್ದು ಕಾಸರಗೋಡು ಆನಂದಾಶ್ರಮದಲ್ಲಿ. ಸ್ವಾಮಿ ರಾಮದಾಸ್‌, ಕೃಷ್ಣ ಮಾತೆ ಅವರ ಆಶ್ರಮದಲ್ಲಿ ಇದ್ವಿ. ನಂತರ ಶಿರಾಲಿ ಚಿತ್ರಾಪುರ ಮಠಕ್ಕೆ ಹೋದ್ವಿ. ಅಲ್ಲಿ 12 ವರ್ಷ ಕಳೆದಿದ್ದೆ. ಅಲ್ಲಿನ ಪ್ರಾರ್ಥನೆ ಅಚ್ಚ ಕನ್ನಡ, ಸಂಸ್ಕೃತದಲ್ಲಿದ್ದವು. ಅದೆಲ್ಲ ಬಾಯಿ ಪಾಠವಾಗಿತ್ತು ನನಗೆ. ತಂದೆ ಸುಮಾರು 700 ಶ್ಲೋಕ ಬಾಯಿಪಾಠ ಮಾಡಿಸಿದ್ದರು. ಮಂತ್ರವೂ ಕಲಿತೆ. ಹೀಗಾಗಿ ಗುರುಗಳು ನನ್ನನ್ನೇ ಮಠಕ್ಕೆ ಶಿಷ್ಯನನ್ನಾಗಿ ನೇಮಿಸುತ್ತಾರೆ ಎನ್ನುವ ಸುದ್ದಿ ಇತ್ತುʼʼ ಎಂದು ಹಾಸ್ಯ ಚಟಾಕಿ ಹಾರಿಸಿದರು.

ʼʼಉಡುಪಿ, ಶಿರಾಲಿಯಲ್ಲಿ ಓದಿದ ಬಳಿಕ 9ನೇ ತರಗತಿಗೆ ನನ್ನನ್ನು ಮುಂಬೈ ಶಾಲೆಗೆ ಸೇರಿಸಿದರು. ಅದುವರೆಗೆ ಹಳ್ಳಿಯಲ್ಲಿ ಓದಿದ ನಾನು ಮುಂಬೈಯ ಕಾನ್ವೆಂಟ್‌ಗೆ ಸೇರಿದೆ. ತರಗತಿಗಳೆಲ್ಲವೂ ಇಂಗ್ಲಿಷ್‌ನಲ್ಲೇ ಇರುತ್ತಿದ್ದವು. ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ನಗರವೂ ನನಗೆ ಹೊಸದು. ರಸ್ತೆ ದಾಟಲೂ ಭಯವಾಗುತ್ತಿತ್ತು. ನಮ್ಮೂರೇ ಚೆನ್ನಾಗಿತ್ತು. ಇದು ನರಕ ಎನಿಸಿತ್ತು. ಹಳ್ಳಿಯಿಂದ ಬಂದಿದ್ದಾನೆ ಎಂಬ ಕರುಣೆಯಿಂದ ನನ್ನನ್ನು 9ನೇ ತರಗತಿಯಲ್ಲಿ ಪಾಸ್‌ ಮಾಡಿಸಿದರು. ಆದರೆ 10ನೇ ತರಗತಿಯಲ್ಲಿ ಫೇಲ್‌ ಆದೆ. ಇದರಿಂದ ನನಗೆ ಶಿಕ್ಷಣದತ್ತ ಆಸಕ್ತಿಯೇ ಹೊರಟು ಹೋಯ್ತು. ಬಳಿಕ ನಾಟಕ ರಂಗ ಪ್ರವೇಶಿಸಿದೆ. ಬಳಿಕ ಸುಮಾರು 50 ವರ್ಷ ಕಲಾರಂಗದಲ್ಲಿ ತೊಡಗಿಸಿಕೊಂಡಿದ್ದೇನೆʼʼ ಎಂದು ತಿಳಿಸಿದರು.

ಟೆನ್ಶನ್‌ ಆಗಿತ್ತು

ʼʼಇವತ್ತು ಮುಂಜಾನೆ 3 ಗಂಟೆಗೇ ನನಗೆ ಎಚ್ಚರವಾಯ್ತು. ಗಣ್ಯರು, ವಿದ್ವಾಂಸರು ಇರುತ್ತಾರೆ. ಏನು ಮಾತನಾಡಬೇಕು ಎನ್ನುವ ಟೆನ್ಶನ್‌ ಕಾಡುತ್ತಿತ್ತು. ಯಾಕೆಂದರೆ ನಾವೆಲ್ಲ ಬಾಯಿಪಾಠವನ್ನು ಒಪ್ಪಿಸುವವರು. ಯಾರೋ ಬರೆದಿದ್ದನ್ನು ಹೇಳುವವರು. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಚಿತ್ರದಲ್ಲಿ 15 ನಿಮಿಷಗಳ ಸಂಭಾಷಣೆಯನ್ನು ಒಂದೇ ಟೇಕ್‌ನಲ್ಲಿ ಒಪ್ಪಿಸಿದ್ದೆ. ಆದರೆ ಇಲ್ಲಿಗೆ ಬರಬೇಕು ಎಂದಾಗ ಭಯ ಕಾಡತೊಡಗಿತ್ತು. ಏನು ಮಾತನಾಡಬೇಕು ಎಂದು ತೋಚಲಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಏನು ಚರ್ಚೆ ನಡೆಯುತ್ತಿದೆ ಎನ್ನುವುದನ್ನು ಗಮನಿಸಿದೆʼʼ ಎಂದರು.

ʼ'ಯುವ ತಲೆಮಾರಿನಲ್ಲಿ ಓದುವ ಹವ್ಯಾಸ ಬೆಳೆಯಲಿʼʼ; ವಿಶ್ವವಾಣಿ ಪುಸ್ತಕ ಪ್ರಕಾಶನದ 9 ಕೃತಿಗಳನ್ನು ಬಿಡುಗಡೆಗೊಳಿಸಿ ನಟ ಅನಂತನಾಗ್‌ ಆಶಯ

ನಾಲ್ಕೈದು ದಶಕಗಳ ಹಿಂದೆ, ಬಾಲ್ಯದಲ್ಲಿ ಕಲಿತ ಗುರು ಸ್ತುತಿ, ಶ್ಲೋಕವನ್ನು ನೆನಪಿಸಿಕೊಂಡು ಅದೇ ರೀತಿ ಹೇಳಿ ಅನಂತನಾಗ್‌ ಸಭಿಕರನ್ನು ಅಚ್ಚರಿಗೆ ದೂಡಿದರು. ʼʼಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಏನು ಮಾತನಾಡುವುದು ಎಂದು ಚಿಂತಿಸುತ್ತಿದ್ದಾಗ ಸಂಸ್ಕೃತದಲ್ಲಿರುವ ಸಾಧನ ಪಂಚಕ ಹೇಳಿ ಬಿಡುವ ಎಂದುಕೊಂಡೆ. ಯಾರಾದರೂ ಇದರ ಅರ್ಥ ಕೇಳಿದರೆ ಏನು ಹೇಳೋದು ಅಂತ ಗೂಗಲ್‌ಗೆ ಹಾಕಿದೆʼʼ ಎಂದು ವಿವರಿಸಿದರು. ಬಾಲ್ಯದಲ್ಲಿ ಬಾಯಿಪಾಠ ಮಾಡಿದ್ದು ಈಗಲೂ ನೆನಪಿದೆ ಎಂದರು.

Anant Nag Book release

ಚಿತ್ರರಂಗದ ದುಸ್ಥಿತಿ ಬಗ್ಗೆ ಹೇಳಿದ್ದೇನು?

ಇದೇ ವೇಳೆ ಅನಂತನಾಗ್‌ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಮೆಕ್ಯಾನಿಸಂ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಿಂದಿನ ಕಲಾತ್ಮಕತೆ ಮರೆಯಾಗುತ್ತಿದೆ ಎಂದು ಹೇಳಿದರು. ʼʼಕನ್ನಡ ಚಿತ್ರರಂಗ ಇದೀಗ ದುಸ್ಥಿತಿಯಲ್ಲಿದೆ. ಹೀಗಾಗಿ 3 ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದೆ. ಏನಾಗ್ತಿದೆ ಎಂದು ಅರ್ಥವಾಗಲಿಲ್ಲ. ಬೇರೆ ಭಾಷೆಯ ಚಿತ್ರರಂಗಕ್ಕೆ ಹೋದರೆ ಅಲ್ಲಿಯೂ ಇದೇ ಸ್ಥಿತಿ. ಸುಂದರವಾದ ಸಂಭಾಷಣೆ ಬರೆಯುವವರಿಲ್ಲ, ಉತ್ತಮ ಫ್ರೇಮ್‌ನಲ್ಲಿ ದೃಶ್ಯ ತೆಗೆಯುವವರಿಲ್ಲ. ಎಲ್ಲೆಡೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಪ್ರಭಾವ ಬೀರಿದೆ. ʼರಾಮಾಯಣʼ ಕೂಡ ಆಧುನಿಕಗೊಂಡಿದೆ. ಯಾವುದೋ ಆಯುಧ ಅಪ್ಪಳಿಸಿ ಜಟಾಯು 3 ತುಂಡುಗಳಾಗಿ ಬೀಳುತ್ತದೆ. ಏನಾದರೂ ಮಾಡೋದು ಸುಲಭ. ಮಾಡದೇ ಇರುವುದು ಕಷ್ಟ ಎನ್ನುವ ಸತ್ಯ ತಿಳಿಯಿತುʼʼ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.