Vishweshwar Bhat: ಕನ್ನಡ ಪುಸ್ತಕಗಳಿಗೆ ಓದುಗರು ಇದ್ದೇ ಇದ್ದಾರೆ, ತಲುಪಿಸುವ ಕೆಲಸವಾಗಬೇಕು: ವಿಶ್ವೇಶ್ವರ ಭಟ್
ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಸಭಾಂಗಣದಲ್ಲಿ ವಾಗ್ದೇವಿ ವಿದ್ಯಾವರ್ಧಕ ಸಂಘ, ವಿಶ್ವವಾಣಿ ಪುಸ್ತಕ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಒಂಬತ್ತು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವವಾಣಿ ಪುಸ್ತಕ ಪ್ರಕಾಶನದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್. -
ಬೆಂಗಳೂರು: ಕನ್ನಡದಲ್ಲಿ ಖಂಡಿತವಾಗಿಯೂ ಓದುವ ಮನಸ್ಸುಗಳು ಇವೆ, ಓದುಗರು ಇದ್ದೇ ಇದ್ದಾರೆ. ನಾವು ಅವರ ಕೈಗೆ ಪುಸ್ತಕ ಇಡುವ ಕೆಲಸ ಆಗುತ್ತಿಲ್ಲ. ಕಳೆದ ಹತ್ತು ಗ್ರಂಥಾಲಯ ಸಚಿವರು ಪುಸ್ತಕವನ್ನೇ ಓದದವರು. ಇಲ್ಲಿಯತನಕ ಯಾವ ಸರ್ಕಾರವೂ ಕೂಡ ಕನ್ನಡ ಪುಸ್ತಕಗಳ ಉತ್ತೇಜನದ ಬಗ್ಗೆ ಮಾತನಾಡಿಲ್ಲ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಅವರು ಬೇಸರ ಹೊರಹಾಕಿದರು.
ವಾಗ್ದೇವಿ ವಿದ್ಯಾವರ್ಧಕ ಸಂಘ, ವಿಶ್ವವಾಣಿ ಪುಸ್ತಕ ಪ್ರಕಾಶನದ (Vishwavani Pustaka) ವತಿಯಿಂದ ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಒಂಬತ್ತು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಲು ಒಂದು ಉದ್ದೇಶ ಇದೆ. 1989ರಲ್ಲಿ ನಾನು ಬೆಂಗಳೂರಿಗೆ ಬಂದಾಗ ಇಲ್ಲಿ ಒಂದೇ ಒಂದು ಮಾಲ್ ಇರಲಿಲ್ಲ. ಆಗ ಇದ್ದಿದ್ದು ಒಂದೇ ಒಂದು ಗ್ರಂಥಾಲಯ. ಅದು ಕಬ್ಬನ್ ಪಾರ್ಕ್‌ನ ಶೇಷಾದ್ರಿ ಲೈಬ್ರರಿ. ರಾಜಧಾನಿಯಲ್ಲಿ ಕಳೆದ 35 ವರ್ಷಗಳಲ್ಲಿ ಸುಮಾರು 31 ಮಾಲ್‌ಗಳು ಆಗಿವೆ. ಆದರೆ ಶೇಷಾದ್ರಿ ಲೈಬ್ರರಿ ಒಂದೇ ಇದೆ.
ಹೀಗಾಗಿ ನಾವು ಒಂದು ಸರ್ವೆ ಮಾಡಿಸಿದ್ದೆವು. ಆ ಸರ್ವೆ ಪ್ರಕಾರ ಇಡೀ ಕರ್ನಾಟಕದಲ್ಲಿ ಎಷ್ಟು ಪುಸ್ತಕದ ಅಂಗಡಿಗಳು ಇವೆ ಎಂದರೆ, ಬೆಂಗಳೂರಿಗೆ ಹತ್ತಿರದ ಕೋಲಾರದಲ್ಲಿ ಒಂದೇ ಒಂದು ಪುಸ್ತಕದಂಗಡಿ ಇಲ್ಲ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತವಾದ ಪುಸ್ತಕದ ಅಂಗಡಿ ಇಲ್ಲ, ರಾಯಚೂರಿನಲ್ಲೂ ಪುಸ್ತಕದಂಗಡಿ ಇಲ್ಲ. ಇಡೀ ರಾಜ್ಯದಲ್ಲಿ 47 ಪುಸ್ತಕದ ಅಂಗಡಿಗಳು ಮಾತ್ರ ಇವೆ. ಆದರೆ, ರಾಜ್ಯದಲ್ಲಿ ಎಷ್ಟು ಬಾರ್‌ಗಳಿವೆ ಎಂದು ನೋಡಿದಾಗ, ಬೆಂಗಳೂರು ಒಂದರಲ್ಲೇ 4800 ಎಂಆರ್‌ಪಿ ಸ್ಟೋರ್‌ಗಳಿವೆ. ರಾಜ್ಯಾದ್ಯಂತ 26000 ವೈನ್ ಶಾಪ್ ಮತ್ತು ಬಾರ್‌ಗಳಿವೆ. ಹೀಗೆ 42 ಲೈಬ್ರರಿ vs 26000 ವೈನ್ ಶಾಪ್ ಇರುವುದು ನೋಡಿದರೆ, ಜನ ಯಾವ ರೀತಿ ಸಮಯವನ್ನು ಕಳೆಯುತ್ತಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು.
ಗ್ರಂಥಾಲಯ ಸಚಿವರು ಪುಸ್ತಕವನ್ನೇ ಓದದವರು!
ಇಲ್ಲಿಯತನಕ ಯಾವ ಸರ್ಕಾರವೂ ಕೂಡ ಕನ್ನಡ ಪುಸ್ತಕಗಳ ಉತ್ತೇಜನದ ಬಗ್ಗೆ ಮಾತನಾಡಿಲ್ಲ. ಕಳೆದ ಹತ್ತು ಗ್ರಂಥಾಲಯ ಸಚಿವರು ಪುಸ್ತಕವನ್ನೇ ಓದದವರು. ಅವರನ್ನು ಸರಸ್ವತಿಯ ಶಾಪ ಪುತ್ರರು ಎಂದು ಕರೆಯಬಹುದು. ಕಳೆದ ಗ್ರಂಥಾಲಯ ಸಚಿವರನ್ನು ಕನ್ನಡದ ಪ್ರಕಾಶಕರು ಭೇಟಿ ಮಾಡಿದಾಗ, ನಾನು ನನ್ನ ಜೀವನದಲ್ಲಿ ಯಾವುದೇ ಪುಸ್ತಕ ಓದಿಲ್ಲ, ನೀವು ಕೊಟ್ಟ ಇಷ್ಟೆಲ್ಲಾ ಪುಸ್ತಕಗಳನ್ನು ಇಟ್ಟುಕೊಳ್ಳಲು ಜಾಗವಿಲ್ಲ ಎಂದು ಹೇಳಿದರಂತೆ. ಇದು ನಮ್ಮ ಕರ್ನಾಟಕದ ಪುಸ್ತಕ ಸಂಸ್ಕೃತಿ ಎಂದು ಬೇಸರ ಹೊರಹಾಕಿದರು.
ಯಾರಿಗಾದರೂ ಗ್ರಂಥಾಲಯ ಸಚಿವ ಎಂದು ಖಾತೆ ಕೊಟ್ಟರೆ ಅದನ್ನು ಟಾರ್ಚರ್ ಎಂದು ಭಾವಿಸುತ್ತಾರೆ. ನಾನು ಗ್ರಂಥಾಲಯ ಸಚಿವ ಆಗುತ್ತೇನೆ ಎಂದು ಯಾರಾದರೂ ದೆಹಲಿಗೆ ಹೋಗಿ ಲಾಬಿ ಮಾಡಿ, ಸಚಿವರಾಗುವ ಪವಾಡ ನಡೆಯುತ್ತಾ ಸಂಭವಿಸುತ್ತಾ ಎಂಬುದನ್ನು ಕಾದುನೋಡುತ್ತಿದ್ದೇನೆ. ಆ ದಿವಸ ಖಂಡಿತವಾಗಿಯೂ ಕನ್ನಡ ಪುಸ್ತಕೋದ್ಯಮ ಬೆಳೆಯುತ್ತದೆ, ಇಲ್ಲದಿದ್ದರೆ ಹೀಗೆಯೇ ಇರುತ್ತದೆ ಎಂದು ಹೇಳಿದರು.
ಕನ್ನಡ ಪುಸ್ತಕಗಳಿಗೆ ಓದುಗರೂ ಇದ್ದೇ ಇದ್ದಾರೆ
ಅನಂತಮೂರ್ತಿ ಅವರು ಇದ್ದಾಗಲೂ ಒಂದು ಕನ್ನಡ ಪುಸ್ತಕ ಮುದ್ರಣವಾದರೆ ಅದು ಒಂದು ಸಾವಿರ ಪುಸ್ತಕ ಮಾರಾಟವಾದರೆ ಹೆಚ್ಚು ಎನ್ನಲಾಗುತ್ತಿತ್ತು. ಆದರೆ, ನಾವು ಅನೇಕ ಬಾರಿ ಇದನ್ನು ತಪ್ಪು ಎಂದು ಸಾಬೀತುಮಾಡಿದ್ದೇವೆ. ಲೇಖಕ ಎಸ್.ಷಡಕ್ಷರಿ ಅವರು ಬರೆದಿರುವ ಒಂದು ಪುಸ್ತಕ 4 ಲಕ್ಷ ಪ್ರತಿ ಮಾರಾಟವಾಗಿದೆ. ಹೀಗಾಗಿ ಕನ್ನಡ ಪುಸ್ತಕವನ್ನು ಬರೆದು, ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಗಳಿಸಬಹುದು ಎಂಬುದಕ್ಕೆ ಷಡಕ್ಷರಿ ಅವರು ಉದಾಹರಣೆ. ಕನ್ನಡದಲ್ಲಿ ಖಂಡಿತವಾಗಿಯೂ ಓದುವ ಮನಸ್ಸುಗಳು ಇವೆ, ಓದುಗರು ಇದ್ದೇ ಇದ್ದಾರೆ. ನಾವು ಅವರ ಕೈಗೆ ಪುಸ್ತಕ ಇಡುವ ಕೆಲಸ ಆಗುತ್ತಿಲ್ಲ. ಆ ಕಾರ್ಯ ಆಗಿದ್ದೇ ಆದರೆ ಖಂಡಿತವಾಗಿಯೂ ಕನ್ನಡ ಪುಸ್ತಕ ಕನಿಷ್ಠ 5 ಲಕ್ಷ ಪ್ರತಿಗಳಾದರೂ ಮಾರಾಟವಾಗುತ್ತವೆ. ಹೀಗಾಗಿ ಕನ್ನಡದಲ್ಲಿ ಈ ರೀತಿಯ ಒಂದು ಅಭಿಯಾನ ಆಗಬೇಕಾಗಿದೆ.
ರಾಜ್ಯದ ಯಾವುದೇ ಹಳ್ಳಿಯ, ಯಾವುದೇ ಮನೆಗೆ ಹೋದರೂ ಒಂದು ಲೈಬ್ರರಿ ಇರುತ್ತದೆ. ಹೊಸ ಪುಸ್ತಕಗಳು ಖರೀದಿಸದಿದ್ದರೂ ಸೇರದಿದ್ದರೂ ಪುಸ್ತಕ ಓದುವವರು ಇದ್ದೇ ಇದ್ದಾರೆ. ಹೀಗಾಗಿ ಕನ್ನಡದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯಬೇಕಾದ ಅವಶ್ಯಕತೆ ಇದೆ.
ನಾವು ಪ್ರಸ್ತುತ ಚಾಟ್ ಜಿಪಿಟಿ, ಜೆಮಿನಿ, ಕ್ಲೌಡ್ ಎನ್ನುವ ವಿಚಿತ್ರ ವಾತಾವರಣದಲ್ಲಿ ಇದ್ದೇವೆ. ಕನ್ನಡದ ಬರಹಗಾರರ ಅಸ್ತಿತ್ವಕ್ಕೆ ಧಕ್ಕೆ ಬರುವ ಕಾಲದಲ್ಲಿ ನಾವು ಇದ್ದೇವೆ. ರೀಲ್ಸ್‌ಗಳು ನಮ್ಮ ಬಹುತೇಕ ಸಮಯವನ್ನು ತಿನ್ನುತ್ತಿದೆ. ಬಹಳ ಜನ ಎರಡು-ಮೂರು ತಾಸು ರೀಲ್ಸ್ ನೋಡುವುದರಲ್ಲೇ ಕಳೆಯುತ್ತಾರೆ. ರೀಲ್ಸ್ ಬಂದ ಆರಂಭದಲ್ಲಿ ಸರಾಸರಿ ಸಮಯ 18 ನಿಮಿಷ ಇತ್ತು. ಇವತ್ತು ಪ್ರತಿಯೊಬ್ಬ ಮನುಷ್ಯ ಸರಾಸರಿ 57 ನಿಮಿಷಗಳ ಕಾಲ ರೀಲ್ಸ್ ನೋಡುತ್ತಿದ್ದಾರೆ. ಕೆಲವರು ನಾಲ್ಕು, ಎಂಟು ತಾಸು ರೀಲ್ಸ್ ನೋಡುತ್ತಿದ್ದಾರೆ. ಇವೆಲ್ಲದರ ನಡುವೆ ಪುಸ್ತಕ ಓದುವುದನ್ನು ಹೆಚ್ಚಿಸುವ ವಾತಾವರಣ ನಿರ್ಮಿಸಬೇಕಿದೆ. ಹೀಗಾಗಿ ನಾವು ಪ್ರತಿವರ್ಷ 25 ಪುಸ್ತಕಗಳನ್ನು ಬಹಳ ಶ್ರದ್ಧೆಯಿಂದ ಪ್ರಕಟಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಅನಂತ್ ನಾಗ್ ಅವರು ಅಪರೂಪದ ನಟ
ಅನಂತ್ ನಾಗ್ ಅವರನ್ನು ನಾನು ಹೆಚ್ಚು ಬಾರಿ ಭೇಟಿ ಮಾಡಿಲ್ಲ. ಆದರೂ ಅವರನ್ನು ಭೇಟಿ ಮಾಡಿಲ್ಲ ಎಂದು ಅನಿಸಿಯೇ ಇಲ್ಲಾ. ಅವರನ್ನು ಕಾರ್ಯಕ್ರಮಕ್ಕೆ ಕರೆದಾಗ ಅವರು ಬರ್ತೀನಿ ಎಂದು ಹೇಳಿದರು. ಅನಂತ್ ನಾಗ್ ಮತ್ತು ನನಗೆ ಗುರು ಸಮಾನರಾದವರು ಹಾಗೂ ಮೆಂಟರ್ ಒಬ್ಬರೇ ಆಗಿದ್ದರು, ಅವರೇ ವೈಎನ್‌ಕೆ (ವೈ.ಎನ್. ಕೃಷ್ಣಮೂರ್ತಿ). ವೈಎನ್‌ಕೆ ಅವರ ಕೊನೆಯ 9 ವರ್ಷಗಳಲ್ಲಿ ನಾನು ಅವರನ್ನು ಪ್ರತಿದಿನ ಭೇಟಿಯಾಗುತ್ತಿದ್ದೆ. ಅನಂತ್‌ನಾಗ್ ಅವರನ್ನು ಕಂಡರೆ ಅವರಿಗೆ ಬಹಳ ಇಷ್ಟ. ಅವರಂತಹ ವ್ಯಕ್ತಿ ಯಾರೂ ಇಲ್ಲ ಎಂದು ಹೇಳುತ್ತಿದ್ದರು. ಅವರು ಅನಗತ್ಯವಾಗಿ ಯಾರನ್ನೂ ಹೊಗಳುತ್ತಿರಲಿಲ್ಲ. ಅಂತಹ ವ್ಯಕ್ತಿ ಇಂದು ಕಾರ್ಯಕ್ರಮಕ್ಕೆ ಬಂದಿರುವುದು ಬಹಳ ಖುಷಿ ತಂದಿದೆ ಎಂದು ವಿಶ್ವೇಶ್ವರ ಭಟ್ ಹೇಳಿದರು.
ಅನಂತ್ ನಾಗ್ ಅವರು ಅಪರೂಪದ ನಟ. ಅವರ ಬಗ್ಗೆ ವಿಶೇಷವಾದ ಗೌರ, ಅಭಿಮಾನವಿದೆ. ಅದಕ್ಕೆ ಕಾರಣ, 2014ಕ್ಕಿಂತ ಮುಂಚೆ ರಾಷ್ಟ್ರೀಯತೆ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಎಲ್ಲರೂ ಪಲಾಯನ ಮಾಡುವಂತವರಾಗಿದ್ದರು. ಆಗ ಮೋದಿ ಅವರ ಬಗ್ಗೆ ಅನಂತ್ ನಾಗ್ ಅವರು ಮಾತನಾಡಿದ ಮಾತು ಇಂದಿಗೂ ನೆನಪಿದೆ. ಬಹಶಃ ಕನ್ನಡ ಚಿತ್ರರಂಗದ ಯಾವ ನಟ ಕೂಡ ಅಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದು ಪ್ರಶಂಸಿದರು.
ನಮ್ಮ ದೇಶದಲ್ಲಿ ನಟರು, ಕ್ರಿಕೆಟ್ ಪಟುಗಳು ನಮಗೆ ದೊಡ್ಡ ಆದರ್ಶ. ಆದರೆ, ಅವರು ಯಾವ ಸಂದರ್ಭದಲ್ಲಿ ಮಾತನಾಡಬೇಕೋ ಆಗ ಮಾತನಾಡಲ್ಲ. ಆ ರೀತಿಯ ಕೊರತೆ ನಮಗೆ ಕಾಡುತ್ತಿದ್ದ ಸಂದರ್ಭದಲ್ಲಿ ಅನಂತ್ ನಾಗ್ ಅವರು ಗಟ್ಟಿಯಾಗಿ ಮಾತನಾಡಿದ್ದರು. ಅವರು ಬೆಳೆದುಬಂದ ರಾಜಕೀಯ ಹಿನ್ನೆಲೆ ಬೇರೆಯಾಗಿದ್ದರೂ ಆ ಸಂದರ್ಭದಲ್ಲಿ ಆಡಿದ ಮಾತು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ತಮಗೆ ಅನಿಸಿದ್ದನ್ನು ನಿರ್ಭೀತಿಯಿಂದ ಮಾತನಾಡುವುದು ಅವರ ಗುಣ. ಹೀಗಾಗಿ ಅವರು ಕಾರ್ಯಕ್ರಮಕ್ಕೆ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಮೋದಿಗಿಂತ ಅನುಭವಿ ಯಾರಾದ್ರೂ ಇದ್ದಾರಾ?:
ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ಟರ ಮಾತಿಗೆ ಪ್ರತಿಕ್ರಿಯಿಸಿದ ನಟ ಅನಂತ್ ನಾಗ್ ಅವರು, ಮೋದಿ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು. ಈ ದೇಶದಲ್ಲಿ ಆಡಳಿತ ಎಂದರೆ ಏನು?, ಗವರ್ನೆನ್ಸ್ ಎಂದರೆ ಏನು? ಎಂಬ ಬಗ್ಗೆ ಪ್ರಧಾನಿ ಮೋದಿಗಿಂತ ಹೆಚ್ಚು ಗೊತ್ತಿದ್ದವರು ಯಾರಾದರೂ ಇದ್ದಾರಾ?, 14 ವರ್ಷ ಸಿಎಂ ಆಗಿ, 12 ವರ್ಷ ಪಿಎಂ ಆಗಿದ್ದಾರೆ. ಇಂತಹವರು ಯಾರಾದರೂ ಇದ್ದರೆ ಇನ್ನೊಬ್ಬರನ್ನು ತೋರಿಸಿ, ಇನ್ನೊಬ್ಬ ಹುಟ್ಟೋದಿಲ್ಲ. ಅದಕ್ಕೆ ಅವರಿಗೆ ಆ ಭಗವಂತ ದೀರ್ಘಾಯುಷ್ಯ ಕೊಡಲಿ ಎಂದು ಹಾರೈಸಿದರು.
ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಕ್ಕಿಂತ ಹೆಚ್ಚು ಕೆಲಸ ಮಾಡಿದ್ದಾರೆ
ವಾಗ್ಮಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಬಗ್ಗೆ ಹೇಳಬೇಕೆಂದರೆ ಅವರು, ಮಾತನಾಡಿದ್ದಕ್ಕಿಂತ ಹೆಚ್ಚು ಕೆಲಸ ಮಾಡಿದ್ದಾರೆ. ಅವರು ಇವತ್ತು ಇಲ್ಲಿ ಮಾತನಾಡುತ್ತಿದ್ದಾರೆ, ನಾಳೆ ಎಲ್ಲೋ ಕೆರೆಯನ್ನು ಸ್ವಚ್ಛ ಮಾಡುತ್ತಿರುತ್ತಾರೆ, ಹೀಗೆ ಒಂದಷ್ಟು ಜನ ಹುಡುಗರನ್ನು ಕಟ್ಟಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ.
ನಾನು ವಿಜಯ ಕರ್ನಾಟಕ ಸಂಪಾದಕನಾಗಿದ್ದಾಗ ಚಕ್ರವರ್ತಿ ಸೂಲಿಬೆಲೆ ಅವರು ರಾಜೀವ್ ದೀಕ್ಷಿತ್ ಅವರ ವಿಚಾರಗಳು, ಆಜಾದಿ ಬಚಾವೋ ಆಂದೋಲನದ ಬಗ್ಗೆ ಪತ್ರಿಕೆಯ ಅಂಕಣಗಳಲ್ಲಿ ಬರೆಯುತ್ತಿದ್ದರು. ಅವರ ಅಂಕಣ ನಿಂತಾಗ ಓದುಗರು ಸೂಲಿಬೆಲೆ ಅವರ ಅಂಕಣ ಮುಂದುವರಿಸಿ ಎಂದು ಕೇಳುತ್ತಿದ್ದರು. ಕಳೆದ 26 ವರ್ಷಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಬೆಳೆದಿರುವ ರೀತಿ ನಿಜಕ್ಕೂ ಒಂದು ಚಕ್ರವರ್ತೀತನವೇ. ಬರವಣಿಗೆ, ರಾಷ್ಟ್ರಕಾರಣ, ಸಾಮಾಜಿಕ ಕಾರ್ಯ ಅಥವಾ ಸಾಮಾಜಿಕ ಚಿಂತನೆ ಇರಬಹುದು, ಈ ಎಲ್ಲಾ ವಲಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಎಂದು ವಿಶ್ವೇಶ್ವರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಗ.ನಾ.ಭಟ್ಟ ಅವರು ಅದ್ಭುತ ಕಲಾವಿದರು, ತಾಳಮದ್ದಳೆ ಅರ್ಥದಾರಿಗಳು. ಅವರು ಬಹಳ ಅಪರೂಪದ ವಿಮರ್ಶಕರು ಹಾಗೂ ಲೇಖಕರು. ಅವರು ಕೂಡ ಇಂದಿನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿದ್ದಾರೆ ಎಂದರು.
"ಹೊಸ ಪೀಳಿಗೆಯ ಭಾಷೆ, ಸಂಸ್ಕಾರ ದಾರಿ ತಪ್ಪುತ್ತಿದೆ"; ಚಕ್ರವರ್ತಿ ಸೂಲಿಬೆಲೆ
ಪತ್ರಕರ್ತನಿಗೆ ʼಸಂಪಾದಕʼ ಎಂಬುವುದೇ ದೊಡ್ಡ ಹುದ್ದೆ
ನನ್ನ ಜೀವನದಲ್ಲಿ ಬಹಳ ದೊಡ್ಡ ತಿರುವು ನೀಡಿದ ಪುಣ್ಯಾತ್ಮ ವಿಜಯ್ ಸಂಕೇಶ್ವರ್ ಅವರು. ನನಗೆ ಕೇವಲ 32 ವರ್ಷ, ಯಾವುದೇ ಅನುಭವ ಇರಲಿಲ್ಲ, ಆದರೂ ಕೂಡ ನನ್ನನ್ನು ಕರೆದುಕೊಂಡು ಬಂದು ಸಂಪಾದಕರನ್ನಾಗಿ ಮಾಡಿದರು. ಅವರು ನನ್ನನ್ನು ನಿಯುಕ್ತಿ ಮಾಡಿದ ದಿನದಿಂದ ಇಂದಿನವರೆಗೂ ಅಂದರೆ ಕಳೆದ 27 ವರ್ಷಗಳಿಂದ ಸಂಪಾದಕನಾಗಿದ್ದೇನೆ. ಮಧ್ಯದಲ್ಲಿ ನನಗೆ ರಾಜ್ಯಸಭಾ ಸ್ಥಾನದ ಆಫರ್ ಬಂದಿತ್ತು. ಆದರೆ ನಾನು ಅದನ್ನು ಒಪ್ಪಿರಲಿಲ್ಲ. ಯಾಕೆಂದರೆ ಪತ್ರಕರ್ತನಾದವನಿಗೆ ಸಂಪಾದಕ ಎಂಬುವುದೇ ದೊಡ್ಡ ಹುದ್ದೆ, ಅದಕ್ಕಿಂತ ದೊಡ್ಡ ಹುದ್ದೆ ಯಾವುದೂ ಇಲ್ಲ. ಕರಿಯರ್‌ನಲ್ಲಿ ಅತ್ಯುನ್ನತ ಸ್ಥಾನದಲ್ಲಿ ಇರುವುದರಿಂದ ಇದೇ ಸುರಕ್ಷಿತ ಎಂದು ಅನಿಸಿ, ಇಲ್ಲೇ ಇದ್ದೇನೆ ಎಂದು ತಿಳಿಸಿದರು.