ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಭುವನೇಶ್ವರ್ ಕುಮಾರ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಬಳಿಕ ಭುವನೇಶ್ವರ್ ಕುಮಾರ್ ಅವರ ಭಾರತ ತಂಡದ ಕಮ್‌ಬ್ಯಾಕ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಬಗ್ಗೆ ಸ್ವತಃ ಭುವನೇಶ್ವರ್ ಕುಮಾರ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಭುವಿ ಹೇಳಿಕೆ. -
ನವದೆಹಲಿ: ರಾಷ್ಟ್ರೀಯ ತಂಡಕ್ಕೆ ಮರಳುವುದು ಈಗ ತಮ್ಮ ಪ್ರಮುಖ ಗುರಿಯಲ್ಲ ಎಂದು ಭಾರತದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ (Bhuvneshwar Kumar) ಸ್ಪಷ್ಟಪಡಿಸಿದ್ದಾರೆ. ಟೀಮ್ ಇಂಡಿಯಾದಿಂದ ಹೊರಗಿರುವ ಜೀವನವನ್ನು ತಾವು ಒಪ್ಪಿಕೊಂಡಿದ್ದು, ಈಗ ಕೇವಲ ಕ್ರಿಕೆಟ್ ಮೇಲಿನ ಪ್ರೀತಿಯಿಂದಲೇ ಆಡುತ್ತಿರುವುದಾಗಿ ಹೇಳಿದ್ದಾರೆ. 36ರ ವಯಸ್ಸಿನ ಭುವನೇಶ್ವರ್ ಕುಮಾರ್ ಭಾರತ ಪರ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು 2022ರ ನವೆಂಬರ್‌ನಲ್ಲಿ ಆಡಿದ್ದರು. ಅವರು ಭಾರತ ಪರ ಇದುವರೆಗೆ 21 ಟೆಸ್ಟ್, 121 ಏಕದಿನ ಹಾಗೂ 87 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ದೇಶವನ್ನು ಪ್ರತಿನಿಧಿಸುವ ಕನಸನ್ನು ಈಗಾಗಲೇ ನನಸಾಗಿಸಿಕೊಂಡಿರುವ ಕಾರಣ, ಇನ್ನು ಮುಂದೆ ತಮ್ಮನ್ನು ತಾವು ಸಾಬೀತುಪಡಿಸಬೇಕೆಂಬ ಒತ್ತಡ ಇಲ್ಲ ಎಂದು ಅವರು ಹೇಳಿದ್ದಾರೆ.
ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಭುವನೇಶ್ವರ್ ಕುಮಾರ್, "ನಾನು ಐಪಿಎಲ್ ಮತ್ತು ದೇಶಿ ಕ್ರಿಕೆಟ್ ಆಡುತ್ತಿರುವುದು ಕ್ರಿಕೆಟ್ ಮೇಲಿನ ಪ್ರೀತಿಯಿಂದ. ಯುವ ಆಟಗಾರನಾಗಿದ್ದಾಗ ಭಾರತಕ್ಕಾಗಿ ಆಡಬೇಕೆಂಬ ಕನಸು ಇರುತ್ತದೆ ಮತ್ತು ಆಗಲೂ ಆಟವನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತೇವೆ. ಆದರೆ ನಿಜವಾಗಿ ಹೇಳಬೇಕೆಂದರೆ, ನಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಮಾತ್ರ ಗಮನಹರಿಸಬೇಕು. ವೃತ್ತಿಜೀವನದ ಈ ಹಂತದಲ್ಲಿ ಆಟವನ್ನು ಕೇವಲ ಅದರ ಮೇಲಿನ ನಿಜವಾದ ಆಸಕ್ತಿಯಿಂದಲೂ ಆಡಬಹುದು ಎಂಬುದನ್ನು ನಾನು ಅನುಭವಿಸುತ್ತಿದ್ದೇನೆ," ಎಂದು ಹೇಳಿದ್ದಾರೆ.
ಭಾರತದ ಟಾಪ್ 5 ಬೌಲರ್‌ಗಳನ್ನು ಆರಿಸಿ ಅಶ್ವಿನ್ ಬಳಿ ಕ್ಷಮೆ ಕೇಳಿದ ಅರ್ಷದೀಪ್ ಸಿಂಗ್!
ಭುವನೇಶ್ವರ್ ಕುಮಾರ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡುತ್ತಾ, "ನಾನು ಈಗಾಗಲೇ ಭಾರತದ ಪರ ಆಡಿದ್ದೇನೆ. ಇನ್ನು ನನಗೆ ಸಾಧಿಸಬೇಕಾದದ್ದು ಏನೂ ಇಲ್ಲ. ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕರೆ ಅದು ಖಂಡಿತ ಸಂತೋಷದ ವಿಷಯ. ಆದರೆ ಭಾರತವನ್ನು ಪ್ರತಿನಿಧಿಸಿದ ಅನುಭವವನ್ನು ನಾನು ಈಗಾಗಲೇ ಪಡೆದಿದ್ದೇನೆ," ಎಂದು ತಿಳಿಸಿದ್ದಾರೆ.
"ಈಗ ನಾನು ಮಾಡುತ್ತಿರುವ ಪ್ರತಿಯೊಂದೂ ಕ್ರಿಕೆಟ್ ಮೇಲಿನ ನನ್ನ ಪ್ರೀತಿಯಿಂದಲೇ. ನಾನು ಯಾವಾಗಲೂ ಶಿಸ್ತುಬದ್ಧವಾಗಿರಬೇಕು ಎಂಬುದು ನನಗೆ ಗೊತ್ತಿದೆ. ನಾನು ದೇಶಿ ಕ್ರಿಕೆಟ್ ಮತ್ತು ಉತ್ತರ ಪ್ರದೇಶ ಟಿ20 ಲೀಗ್‌ನಲ್ಲಿ ಆಡುತ್ತಿದ್ದೇನೆ. ಆಟದೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಾಕಷ್ಟು ಕ್ರಿಕೆಟ್ ಆಡುತ್ತೇನೆ. ಜೊತೆಗೆ ದೈಹಿಕವಾಗಿ ಚೇತರಿಸಿಕೊಳ್ಳಲು ಮತ್ತು ಹೊಸ ಉತ್ಸಾಹದಿಂದ ಮರಳಲು ಅಗತ್ಯವಿರುವಷ್ಟು ವಿಶ್ರಾಂತಿಯನ್ನೂ ಪಡೆಯುತ್ತೇನೆ," ಎಂದು ಹೇಳಿದ್ದಾರೆ.
ʻ25 ಸಿಕ್ಸರ್, 13 ಬೌಂಡರಿʼ: 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ ಅಭಿಷೇಕ್ ಶರ್ಮಾ!
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಇರುವ ಬಗ್ಗೆ ಭುವಿ ಪ್ರತಿಕ್ರಿಯೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿರುವ ತಮ್ಮ ಜೀವನದ ಬಗ್ಗೆ ಮಾತನಾಡಿದ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಯಾವುದೇ ಪಶ್ಚಾತ್ತಾಪ ಅಥವಾ ಕಹಿ ಭಾವನೆಗಳಿಲ್ಲದೆ ಮುಂದುವರಿಯಲು ತಮ್ಮ ಕುಟುಂಬದ ವಾತಾವರಣವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
"ನಾನು ಸಂಪೂರ್ಣ ನೆಮ್ಮದಿಯಲ್ಲಿದ್ದೇನೆ. ಅದಕ್ಕೆ ನನ್ನ ಕುಟುಂಬವೇ ಕಾರಣ. ನಮ್ಮ ಮನೆಯಲ್ಲಿ ನಾವು ಎಂದಿಗೂ ಕ್ರಿಕೆಟ್ ಬಗ್ಗೆ ಮಾತನಾಡುವುದಿಲ್ಲ. ನಾನು ಮತ್ತೆ ಭಾರತ ತಂಡಕ್ಕೆ ಮರಳುತ್ತೇನೆಯೇ, ನನ್ನನ್ನು ಏಕೆ ಆಯ್ಕೆ ಮಾಡಲಿಲ್ಲ ಅಥವಾ ಏನು ತಪ್ಪಾಯಿತು ಎಂಬ ಚರ್ಚೆಗಳು ನಮ್ಮ ಮನೆಯಲ್ಲಿ ನಡೆಯುವುದಿಲ್ಲ. ಇದು ನನಗೆ ತುಂಬಾ ಸಹಾಯ ಮಾಡಿದೆ. ನನಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ," ಎಂದು ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.
"ನೀವು ತಂಡದ ಪ್ರಮುಖ ಸದಸ್ಯರಾಗಿದ್ದಾಗ 'ತಂಡವೇ ಮೊದಲ ಆದ್ಯತೆ' ಎಂದು ಎಲ್ಲರೂ ಹೇಳುತ್ತಾರೆ. ಆದರೆ ಒಮ್ಮೆ ತಂಡದ ಭಾಗವಾಗಿರದಿದ್ದರೆ, ಸಹಜವಾಗಿಯೇ 'ನಾನು ಇನ್ನೂ ತಂಡದಲ್ಲಿರಬೇಕಿತ್ತು' ಎಂಬ ಭಾವನೆ ಬರುತ್ತದೆ. ಆದರೂ ನಾನು ಈಗಿರುವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ," ಎಂದು ಹೇಳಿದ್ದಾರೆ.