ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

NICE Road Project: ನೈಸ್ ರಸ್ತೆಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆಯಲಿ: ರಾಜ್ಯ ಟ್ರಾವೆಲ್‌ ಆಪರೇಟರ್ ಸಂಘದ ಮನವಿಗೆ ಸರ್ಕಾರ ಸ್ಪಂದನೆ, ಪರಿಶೀಲನೆಗೆ ಸೂಚನೆ

ನೈಸ್–ಬಿಎಂಐಸಿಪಿ ಯೋಜನೆ ಕುರಿತು ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಗಂಭೀರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ, ಯೋಜನೆಯ ರಸ್ತೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯುವುದು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕ ಹಾಗೂ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ಮನವಿ ಸಲ್ಲಿಸಿದ್ದರು. ಇದೀಗ ಮನವಿ ಬಗ್ಗೆ ಪರಿಶೀಲಿಸಲು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನೈಸ್ ರಸ್ತೆ ಸ್ವಾಧೀನಕ್ಕೆ ಮನವಿ; ಪರಿಶೀಲನೆಗೆ ರಾಜ್ಯ ಸರ್ಕಾರ ಸೂಚನೆ

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ರಾಜ್ಯ ಟ್ರಾವೆಲ್‌ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ. -

Prabhakara R
Prabhakara R Sep 7, 2026 6:10 PM

ಬೆಂಗಳೂರು: ನೈಸ್‌ ಯೋಜನೆಯ ರಸ್ತೆ (NICE Road Project) ಮತ್ತು ಸಾರ್ವಜನಿಕ ಆಸ್ತಿಗಳನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಪಡೆಯುವಂತೆ ಹಾಗೂ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ (K Radhakrishna Holla) ಅವರು ಸಲ್ಲಿಸಿದ್ದ ಮನವಿ ಪತ್ರಕ್ಕೆ ರಾಜ್ಯ ಸರ್ಕಾರದಿಂದ ಸ್ಪಂದನೆ ದೊರೆತಿದೆ. ಈ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಸೂಚಿಸಿದ್ದಾರೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಪತ್ರ ಬರೆದಿದ್ದಾರೆ.

ಮನವಿ ಪತ್ರದಲ್ಲಿ ಏನಿದೆ?

ನೈಸ್–ಬಿಎಂಐಸಿಪಿ ಯೋಜನೆ ಕುರಿತು ಕರ್ನಾಟಕ ಹೈಕೋರ್ಟ್‌ನ 29-07-2026ರ ತೀರ್ಪಿನ ಗಂಭೀರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ, ಯೋಜನೆಯ ರಸ್ತೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯುವುದು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕ ಹಾಗೂ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ಇತ್ತೀಚೆಗೆ ಮನವಿ ಸಲ್ಲಿಸಿದ್ದರು.

ಕರ್ನಾಟಕ ಹೈಕೋರ್ಟ್‌ನ ಡಬ್ಲ್ಯು.ಎ. ಸಂಖ್ಯೆ 1214/2025 ಹಾಗೂ ಸಂಬಂಧಿತ ಪ್ರಕರಣಗಳಲ್ಲಿ ದಿನಾಂಕ 29-07-2026ರಂದು ನೀಡಿರುವ ತೀರ್ಪಿನ ಪ್ಯಾರಾಗ್ರಾಫ್ 72, 88, 92 ಮತ್ತು 93ರಲ್ಲಿ ನೈಸ್–ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಅತ್ಯಂತ ಗಂಭೀರವಾದ ಅಭಿಪ್ರಾಯಗಳನ್ನು ದಾಖಲಿಸಿದೆ. ಈ ತೀರ್ಪಿನ ಅಂಶಗಳನ್ನು ಸಮಗ್ರವಾಗಿ ಗಮನಿಸಿದಾಗ, ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಮೂಲಕ ಸ್ವಾಧೀನಪಡಿಸಿಕೊಂಡು ಯೋಜನೆಗೆ ಒದಗಿಸಲಾದ ಭೂಮಿ, ಯೋಜನಾ ಹಕ್ಕುಗಳು ಹಾಗೂ ಇತರ ಸೌಲಭ್ಯಗಳು ಮೂಲ ಉದ್ದೇಶಕ್ಕೆ ಅನುಗುಣವಾಗಿ ಬಳಕೆಯಾಗಿವೆಯೇ ಎಂಬ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ.

ನ್ಯಾಯಾಲಯದ ಗಂಭೀರ ಅಭಿಪ್ರಾಯಗಳು

ವಿಶೇಷವಾಗಿ ತೀರ್ಪಿನ ಪ್ಯಾರಾಗ್ರಾಫ್ 88ರಲ್ಲಿ, ನ್ಯಾಯಾಲಯವು ನೈಸ್ ಯೋಜನೆಯ ಕುರಿತು ಅತ್ಯಂತ ಕಠಿಣ ಪದಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. ರೈತರು ತಮ್ಮ ಭೂಮಿ ಮತ್ತು ತಲೆಮಾರುಗಳ ಜೀವನೋಪಾಯವನ್ನು ಕಳೆದುಕೊಂಡಿರುವ ಪರಿಸ್ಥಿತಿಯನ್ನೂ ನ್ಯಾಯಾಲಯ ಗಂಭೀರವಾಗಿ ಉಲ್ಲೇಖಿಸಿದೆ. ಅದೇ ಪ್ಯಾರಾಗ್ರಾಫ್‌ನಲ್ಲಿ, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು 28-07-2026ರಂದು ಸಲ್ಲಿಸಿದ ಪ್ರಮಾಣಪತ್ರದ ಮಾಹಿತಿಯಂತೆ, ಒಟ್ಟು 111 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಪೈಕಿ ಕಳೆದ ಸುಮಾರು 25–26 ವರ್ಷಗಳಲ್ಲಿ ಕೇವಲ 5 ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗಿದೆ ಎಂಬ ಅಂಶವನ್ನೂ ನ್ಯಾಯಾಲಯ ದಾಖಲಿಸಿದೆ.

ಇದರೊಂದಿಗೆ, ನೈಸ್ ಸಂಸ್ಥೆಯು 20,000 ಎಕರೆಗೂ ಹೆಚ್ಚಿನ ಬೃಹತ್ ಭೂ ಸಂಗ್ರಹವನ್ನು ಹೊಂದಿರುವುದು ಹಾಗೂ ಯೋಜನೆಗೆ ಸಂಬಂಧಿಸಿದ ಭೂಮಿ ಮತ್ತು ಆಸ್ತಿಗಳನ್ನು ಸಂಸ್ಥೆಯ ಪ್ರಯೋಜನಕ್ಕಾಗಿ ವರ್ಗಾವಣೆ ಮತ್ತು ಬಂಡವಾಳೀಕರಣ ಮಾಡಿರುವ ಕುರಿತು ನ್ಯಾಯಾಲಯ ಗಂಭೀರವಾಗಿ ಗಮನಿಸಿದೆ. ಸಾರ್ವಜನಿಕರು ಮತ್ತು ರೈತರ ಹಿತಾಸಕ್ತಿಯ ಬೆಲೆಗೆ ಸರ್ಕಾರದ ಭೂಸ್ವಾಧೀನ ಅಧಿಕಾರವನ್ನು ಬಳಸಿಕೊಂಡು ಖಾಸಗಿ ಸಂಸ್ಥೆಯ ಕೈಯಲ್ಲಿ ಸಂಪತ್ತು ಕೇಂದ್ರೀಕರಣಗೊಳ್ಳುವ ಪರಿಸ್ಥಿತಿಗೆ ರಾಜ್ಯ ಸರ್ಕಾರವು ಭಾಗಿಯಾಗಲು ಸಾಧ್ಯವಿಲ್ಲ ಎಂಬ ಅತ್ಯಂತ ಮಹತ್ವದ ಅಭಿಪ್ರಾಯವನ್ನೂ ನ್ಯಾಯಾಲಯ ದಾಖಲಿಸಿದೆ.

ಅಲ್ಲದೆ, ಇಂತಹ ಗಂಭೀರ ಪರಿಸ್ಥಿತಿಯಲ್ಲಿ ನ್ಯಾಯಾಲಯವು “ಮೌನ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಪ್ರಕರಣದ ಗಂಭೀರತೆಯನ್ನು ಸ್ಪಷ್ಟಪಡಿಸುತ್ತದೆ.

ಇದು ಕೇವಲ ರಸ್ತೆ ಅಥವಾ ಟೋಲ್ ವಿವಾದವಲ್ಲ

ತೀರ್ಪಿನ ಪ್ಯಾರಾಗ್ರಾಫ್ 72, 88, 92 ಮತ್ತು 93ರ ಅಂಶಗಳನ್ನು ಒಟ್ಟಾಗಿ ಪರಿಶೀಲಿಸಿದಾಗ, ನೈಸ್–ಬಿಎಂಐಸಿಪಿ ವಿಷಯವನ್ನು ಕೇವಲ ರಸ್ತೆ ನಿರ್ಮಾಣ ಅಥವಾ ಟೋಲ್ ಶುಲ್ಕದ ವಿವಾದವೆಂದು ಪರಿಗಣಿಸಲು ಸಾಧ್ಯವಿಲ್ಲ. 03-04-1997ರಂದು ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಮೂಲ ಒಪ್ಪಂದದಂತೆ ಯೋಜನೆ ಅನುಷ್ಠಾನಗೊಂಡಿದೆಯೇ? ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಅದೇ ಉದ್ದೇಶಕ್ಕೆ ಬಳಕೆಯಾಗಿದೆಯೇ? ಯೋಜನೆಯನ್ನು ನಿಗದಿತ ಅವಧಿಯಲ್ಲಿ ಏಕೆ ಪೂರ್ಣಗೊಳಿಸಲಾಗಿಲ್ಲ? ರೈತರಿಗೆ ನ್ಯಾಯಸಮ್ಮತ ಪರಿಹಾರ ದೊರೆತಿದೆಯೇ? ಯೋಜನೆಗೆ ನೀಡಲಾದ ಭೂಮಿ ಮತ್ತು ಆಸ್ತಿಗಳ ವರ್ಗಾವಣೆ ಹಾಗೂ ಬಂಡವಾಳೀಕರಣ ಯಾವ ರೀತಿಯಲ್ಲಿ ನಡೆದಿದೆ? ಸರ್ಕಾರದ ಮೇಲ್ವಿಚಾರಣೆ ಸಮರ್ಪಕವಾಗಿತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ.

ಸಾರ್ವಜನಿಕ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಒದಗಿಸಿದ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಸಮರ್ಪಕವಾಗಿ ಬಳಸದೆ, ಒಪ್ಪಂದದಂತೆ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದೆ ಇದ್ದಲ್ಲಿ, ಅಂತಹ ಯೋಜನೆಯ ಹೆಸರಿನಲ್ಲಿ ಸಾರ್ವಜನಿಕರಿಂದ ನಿರಂತರವಾಗಿ ಟೋಲ್ ಶುಲ್ಕ ವಸೂಲಿ ಮಾಡುವುದರ ಕಾನೂನುಬದ್ಧತೆ ಮತ್ತು ನ್ಯಾಯಸಮ್ಮತತೆಯನ್ನು ಸರ್ಕಾರ ಮರುಪರಿಶೀಲಿಸಬೇಕಾಗಿದೆ ಎಂದು ಮನವಿ ಮಾಡಲಾಗಿದೆ.

ರಾಜ್ಯ ಸರ್ಕಾರಕ್ಕೆ 8 ಅಂಶಗಳ ಮನವಿ

ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರಲ್ಲಿ ಈ ಕೆಳಗಿನ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ವಿನಮ್ರವಾಗಿ ಮನವಿ ಮಾಡುತ್ತೇವೆ:

  1. ಕರ್ನಾಟಕ ಹೈಕೋರ್ಟ್‌ನ 29-07-2026ರ ತೀರ್ಪಿನ ಪ್ಯಾರಾಗ್ರಾಫ್ 72, 88, 92 ಮತ್ತು 93ರಲ್ಲಿ ದಾಖಲಿಸಿರುವ ಅಭಿಪ್ರಾಯಗಳನ್ನು ಸರ್ಕಾರ ಉನ್ನತ ಮಟ್ಟದಲ್ಲಿ ಪರಿಶೀಲಿಸಬೇಕು.
  2. 1997ರಿಂದ 2026ರವರೆಗಿನ ನೈಸ್–ಬಿಎಂಐಸಿಪಿ ಯೋಜನೆಯ ಸಂಪೂರ್ಣ ಸ್ಥಿತಿಗತಿ ಕುರಿತು ಶ್ವೇತಪತ್ರ ಪ್ರಕಟಿಸಬೇಕು. ಸರ್ಕಾರ ನೀಡಿದ ಭೂಮಿ, ನಿರ್ಮಾಣಗೊಂಡ ರಸ್ತೆ, ಬಾಕಿ ಉಳಿದ ಕಾಮಗಾರಿ, ಯೋಜನೆಯ ವೆಚ್ಚ, ಟೋಲ್ ಆದಾಯ ಮತ್ತು ಒಪ್ಪಂದದ ಅನುಷ್ಠಾನದ ವಿವರಗಳನ್ನು ಸಾರ್ವಜನಿಕರ ಮುಂದಿಡಬೇಕು.
  3. ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಮತ್ತು ಹಸ್ತಾಂತರಿಸಲಾದ ಪ್ರತಿಯೊಂದು ಎಕರೆ ಭೂಮಿಯ ಸಮಗ್ರ ಲೆಕ್ಕಪರಿಶೋಧನೆ ನಡೆಸಬೇಕು. ಎಷ್ಟು ಭೂಮಿ ರಸ್ತೆ ನಿರ್ಮಾಣಕ್ಕೆ ಬಳಕೆಯಾಗಿದೆ, ಎಷ್ಟು ಭೂಮಿ ಇತರ ಯೋಜನೆಗಳಿಗೆ ಬಳಕೆಯಾಗಿದೆ, ಎಷ್ಟು ಭೂಮಿ ಬಳಕೆಯಾಗದೆ ಉಳಿದಿದೆ ಮತ್ತು ಯಾವುದಾದರೂ ಭೂಮಿ ವರ್ಗಾವಣೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಲ್ಪಟ್ಟಿದೆಯೇ ಎಂಬುದನ್ನು ಬಹಿರಂಗಪಡಿಸಬೇಕು.
  4. ಯೋಜನೆಯ ಭೂಮಿ, ಆಸ್ತಿಗಳು, ಟೋಲ್ ಆದಾಯ, ಹಣಕಾಸು ವ್ಯವಹಾರಗಳು, ಆಸ್ತಿಗಳ ಬಂಡವಾಳೀಕರಣ ಮತ್ತು ವರ್ಗಾವಣೆ ಸೇರಿದಂತೆ ಎಲ್ಲ ವಿಷಯಗಳ ಕುರಿತು ಸ್ವತಂತ್ರ ಹಣಕಾಸು ಹಾಗೂ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸಬೇಕು.
  5. ಮೂಲ ಒಪ್ಪಂದದಂತೆ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿರುವುದಕ್ಕೆ ಕಾರಣವೇನು, ಇದಕ್ಕೆ ಯಾರು ಹೊಣೆಗಾರರು ಮತ್ತು ಕಳೆದ ಸುಮಾರು ಮೂರು ದಶಕಗಳಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು.
  6. ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯ ದುರ್ಬಳಕೆ ಅಥವಾ ಅನಧಿಕೃತ ವಾಣಿಜ್ಯ ಬಳಕೆ ನಡೆದಿರುವುದು ಕಂಡುಬಂದಲ್ಲಿ, ಅಂತಹ ಭೂಮಿ ಮತ್ತು ಆಸ್ತಿಗಳನ್ನು ಸರ್ಕಾರ ಮರಳಿ ಪಡೆಯಲು ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕು.
  7. ನೈಸ್ ರಸ್ತೆಯನ್ನು ಸರ್ಕಾರದ ಲೋಕೋಪಯೋಗಿ ಇಲಾಖೆಯ ನಿಯಂತ್ರಣಕ್ಕೆ ಪಡೆಯಲು ಇರುವ ಕಾನೂನುಬದ್ಧ ಅವಕಾಶವನ್ನು ತಕ್ಷಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯೋಜನೆಯ ಮೂಲ ಒಪ್ಪಂದ, ನ್ಯಾಯಾಲಯದ ತೀರ್ಪು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕುರಿತು ಲೋಕೋಪಯೋಗಿ ಇಲಾಖೆಯು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.
  8. ಯೋಜನೆಯ ಭೂಮಿ, ಒಪ್ಪಂದ, ಹಣಕಾಸು ವ್ಯವಹಾರಗಳು ಮತ್ತು ಟೋಲ್ ವಸೂಲಿಗೆ ಸಂಬಂಧಿಸಿದ ಸಮಗ್ರ ತನಿಖೆ ಪೂರ್ಣಗೊಂಡು ವಾಸ್ತವಾಂಶಗಳು ಸ್ಪಷ್ಟವಾಗುವವರೆಗೆ ಸಾರ್ವಜನಿಕ ಸಾರಿಗೆ, ಪ್ರವಾಸಿ ವಾಹನಗಳು, ಕಾರ್ಮಿಕರ ಸಾರಿಗೆ ವಾಹನಗಳು ಹಾಗೂ ಇತರ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕದಿಂದ ತಾತ್ಕಾಲಿಕ ವಿನಾಯಿತಿ ನೀಡಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ವಾಹನಗಳ ಟೋಲ್ ವಸೂಲಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕಾನೂನು ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸಬೇಕು.

NICE Road: ನೈಸ್ ಕಂಪನಿಯಿಂದ ಅಕ್ರಮವಾಗಿ 2,000 ಕೋಟಿಗೂ ಹೆಚ್ಚು ಟೋಲ್ ಸಂಗ್ರಹ: ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ನ್ಯಾಯಾಲಯವೇ ಈ ಪ್ರಕರಣದಲ್ಲಿ ಮೌನ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂಬ ಗಂಭೀರ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನೈಸ್–ಬಿಎಂಐಸಿಪಿ ಯೋಜನೆಯ ಕುರಿತು ಶ್ವೇತಪತ್ರ ಪ್ರಕಟಿಸಿ, ಸಮಗ್ರ ಭೂ ಲೆಕ್ಕಪರಿಶೋಧನೆ ಮತ್ತು ಸ್ವತಂತ್ರ ತನಿಖೆ ನಡೆಸಿ, ಅಗತ್ಯವಿದ್ದಲ್ಲಿ ಯೋಜನೆಯ ರಸ್ತೆ ಹಾಗೂ ಸಾರ್ವಜನಿಕ ಉದ್ದೇಶದ ಆಸ್ತಿಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆದು, ತನಿಖೆ ಪೂರ್ಣಗೊಳ್ಳುವವರೆಗೆ ಟೋಲ್ ಶುಲ್ಕಕ್ಕೆ ತಾತ್ಕಾಲಿಕ ವಿನಾಯಿತಿ ನೀಡುವಂತೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಲ್ಲಿ ಮನವಿ ಮಾಡುತ್ತೇವೆ ಎಂದು ಕೆ. ರಾಧಾಕೃಷ್ಣ ಹೊಳ್ಳ ಅವರು ಮನವಿ ಪತ್ರದಲ್ಲಿ ಕೋರಿದ್ದಾರೆ.