ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಧರ್ಮಸ್ಥಳ ಕೇಸ್‌- ಹೈಕೋರ್ಟ್‌ ಮೆಟ್ಟಿಲೇರಿದ್ದ ತಿಮರೋಡಿ ಗ್ಯಾಂಗ್‌ಗೆ ಬಿಗ್‌ ಶಾಕ್‌!

ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ರದ್ದುಪಡಿಸಲಾಗಿದೆ. ಈ ಹಿನ್ನೆಲೆ ಪ್ರಕರಣದ ತನಿಖೆ ಪುನರಾರಂಭವಾಗಲಿದ್ದು, ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ. ಜಯಂತ್ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದೆ.

FIR ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಬುರುಡೆ ಗ್ಯಾಂಗ್‌ಗೆ ಹಿನ್ನಡೆ

FIR ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ ತಿಮರೋಡಿ ಗ್ಯಾಂಗ್‌ ಅರ್ಜಿ ವಜಾಗೊಂಡಿದೆ(ಸಂಗ್ರಹ ಚಿತ್ರ) -

Profile
Sushmitha Jain Nov 12, 2025 4:45 PM

ಬೆಂಗಳೂರು: ಧರ್ಮಸ್ಥಳದಲ್ಲಿ(Dharmasthala) ನೂರಾರು ಶವಗಳನ್ನು ಹೂತುಹಾಕಿದ್ದಾಗಿ ದೂರುದಾರ ಸಿಎನ್‌ ಚಿನ್ನಯ್ಯ ನೀಡಿದ ದೂರಿನ ಮೇಲೆ ನಡೆಯುತ್ತಿರುವ ತನಿಖೆ ಸಂಬಂಧ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ (ಎಸ್ಐಟಿ(SIT)) ಮೇಲೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ, ತನಿಖೆಯನ್ನು ನಿಲ್ಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಮಾನ್ಯ ಉಚ್ಛ ನ್ಯಾಯಾಲಯ ತೆರವುಗೊಳಿಸಿದೆ. ಈ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದ ಗಿರೀಶ್ ಮಟ್ಟಣ್ಣನವರ್​, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠ್ಠಲಗೌಡನಿಗೆ ಭಾರೀ ಮುಖಭಂಗವಾಗಿದ್ದು, ಮತ್ತೆ ಎಸ್​ಐಟಿ ತನಿಖೆಗೆ ಒಳಗಾಗಬೇಕಿದೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶವನ್ನು ನೀಡಿದ್ದು, ಧರ್ಮಸ್ಥಳ ಪ್ರಕರಣದ ಮೂಲವಾಗಿರುವ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಒಟ್ಟು ನಾಲ್ವರು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ತೆರ್ವುಗೊಳಿಸಿ ತನಿಖೆಗೆ ಅನುಮತಿ ನೀಡಿದೆ.

ವಿಚಾರಣೆ ಸಂದರ್ಭದಲ್ಲಿ, ಸರ್ಕಾರದ ಪರ ವಾದಿಸಿದ್ದ ವಕೀಲರು “ಅರ್ಜಿದಾರರಿಗೆ ಈ ಹಿಂದೆ ಹಲವು ಬಾರಿ ನೋಟಿಸ್‌ ನೀಡಲಾಗಿತ್ತು ಹಾಗೂ ಆ ವೇಳೆ ಅವರುಗಳನ್ನು ಈ ಪ್ರಕರಣದಲ್ಲಿ ಸಾಕ್ಷಿಗಳನ್ನಾಗಿ ಪರಿಗಣಿಸಲ್ಪಟ್ಟಿತ್ತು. ಆದರೀಗ ಅದೇ ಅರ್ಜಿದಾರರನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಪರಿಗಣಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ” ಎಂದು ಪೀಠಕ್ಕೆ ತಿಳಿಸಿದ್ದಾರೆ. ಈ ಹಿನ್ನಲೆ ವಾದ ಆಲಿಸಿದ ಪೀಠ, ಧರ್ಮಸ್ಥಳ ಠಾಣೆಯ ಎಫ್ಐಆರ್ 39/2025 ತನಿಖೆಗೆ ಅ.30ರಂದು ನೀಡಿದ್ದ ತಡೆಯಾಜ್ಞೆಯನ್ನ ತೆರವುಗೊಳಿಸಿದೆ.

ಈ ಸುದ್ದಿಯನ್ನೂ ಓದಿ: Dharmasthala: ನವೆಂಬರ್‌ 15ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ: ಮಂಜುನಾಥನ ಸನ್ನಿಧಿಯಲ್ಲಿ ಮೇಳೈಸಲಿದೆ ಸುಜ್ಞಾನ ಬೆಳಕಿನ ವೈಭವ

ಇನ್ನು ಎಸ್‌ಐಟಿ ಪರ ವಕೀಲರು, ''ಅರ್ಜಿದಾರರ ಪ್ರಚೋದನೆಯಿಂದಲೇ ಚಿನ್ನಯ್ಯ ದೂರು ನೀಡಿದ್ದಾನೆ ಎಂಬ ವಿಷಯವನ್ನು ಪೀಠದ ಮುಂದೆ ವಿವರಿಸಿದ್ದು, ಬಂಧನ ಭೀತಿಯಿಂದ 164 ಹೇಳಿಕೆ ನೀಡಿ ಅರ್ಜಿದಾರರ ಮೇಲೆ ಆರೋಪ ಮಾಡಿದ್ದಾರೆ. ಆರಂಭದಲ್ಲಿ ಸಾಕ್ಷಿಗಳಾಗಿ ಅರ್ಜಿದಾರರ ಪ್ರಚೋದನೆ ನಡೆಸಲಾಗಿತ್ತು. ಧರ್ಮಸ್ಥಳ ಗ್ರಾಮದ 20 ಕಡೆ ಅಗೆದು ಪರಿಶೀಲನೆ ನಡೆಸಲಾಯಿತು. ಆನಂತರ ಆರೋಪ ಬಹುತೇಕ ಸುಳ್ಳೆಂದು ಸಾಬೀತಾದ ಹಿನ್ನೆಲೆಯಲ್ಲಿ ದೂರುದಾರರನ್ನು ಆರೋಪಿಗಳನ್ನಾಗಿ ಮಾಡಿ ತನಿಖೆ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ'' ಎಂದು ತಿಳಿಸಿದರು. ಈ ಎಲ್ಲ ವಾದವನ್ನು ಆಲಿಸಿದ್ದ ನ್ಯಾಯಪೀಠ ಎಸ್ಐಟಿ ತನಿಖೆಗೆ ತಡೆ ನೀಡಿ ಆದೇಶಿಸಿತ್ತು.

ವಿಚಾರಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದ ಬುರುಡೆ ಗ್ಯಾಂಗ್

ಈ ಅರ್ಜಿಯಲ್ಲಿ, ಅವರು ಎಫ್‌ಐಆರ್ , ಎಸ್‌ಐಟಿ ನೀಡಿರುವ ವಿಚಾರಣಾ ನೋಟೀಸ್ ಮತ್ತು ಪ್ರಸ್ತುತ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು. ತನಿಖಾ ತಂಡವು ಈಗಾಗಲೇ ತಮ್ಮನ್ನು 100 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ. ಸಂಗ್ರಹಿಸಲಾದ 164 ಹೇಳಿಕೆಗಳಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪಗಳು ಕಂಡುಬಂದಿಲ್ಲ. ಆದರೂ, ಅಕ್ಟೋಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ನೀಡಲಾಗಿತ್ತು ಎಂದು ಅರ್ಜಿದಾರರು ದೂರಿದ್ದರು. ವಾಟ್ಸ್ಆ್ಯಪ್ ಮತ್ತು ಇ-ಮೇಲ್ ಮೂಲಕ ನೋಟಿಸ್ ಅನ್ನು ಕಳುಹಿಸಲಾಗಿದ್ದು, ಖುದ್ದಾಗಿ ಬಂದು ನೀಡಿಲ್ಲ. ಒಂದು ವೇಳೆ ವಿಚಾರಣೆಗೆ ಹಾಜರಾದರೆ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಭೀತಿಯಿಂದ ಪ್ರಕರಣವನ್ನೇ ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಹೋಗಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.