ಬೈಕ್ ವಿಚಾರಕ್ಕೆ ಜಗಳ; ಪ್ರೇಯಸಿ ಸೇರಿ ಮೂವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ!
Bengaluru News: ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತರಬನಹಳ್ಳಿಯಲ್ಲಿ ಘಟನೆ ನಡೆದಿದೆ. ಗಾಯಗೊಂಡ ಯುವತಿ ಹಾಗೂ ಆಕೆಯ ಪೋಷಕರನ್ನು ಸ್ಥಳೀಯರು ರಕ್ಷಣೆ ಮಾಡಿ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಬೈಕ್ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ಹೋಗಿ, ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಹಾಗೂ ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತರಬನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃತ್ಯ ಎಸಗಿದ ಆರೋಪಿ ಪಾಂಡುರಂಗ (29) ಎಂಬಾತನ ಬಂಧನವಾಗಿದೆ. ಆರೋಪಿಯ ಪ್ರೇಯಸಿ ಸುಮಲತಾ, ಆಕೆಯ ತಂದೆ ಶ್ರೀರಾಮ(48) ಹಾಗೂ ತಾಯಿ ಮಂಜಮ್ಮ(42) ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾರ್ಚ್ 6ರಂದು ಬೆಂಗಳೂರಿನ ತರಬನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೂವರು ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರೇಯಸಿ ತಾಯಿ ಮಂಜಮ್ಮ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗೆ ಮದುವೆಯಾಗಿ ಮಕ್ಕಳಿದ್ದರೂ ಇನ್‌ಸ್ಟಾಗ್ರಾಂ ಮೂಲಕ ಸುಮಲತಾಳ ಪರಿಚಯ ಮಾಡಿಕೊಂಡಿದ್ದ. ಕಳೆದ ಆರು ವರ್ಷಗಳಿಂದ ಇಬ್ಬರು ಪ್ರೀತಿ-ಪ್ರೇಮ ಅಂತ ಸುತ್ತಾಡಿದ್ದಾರೆ. ಆದರೆ ಸುಮಲತಾಗೆ ಬೇರೊಬ್ಬನ ಜತೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಚಂದುನಿಂದ ಸುಮಲತಾ ದೂರವಾಗಿದ್ದಳು.
ಗಂಡನಿಗೆ ವಿಷಯ ಗೊತ್ತಾಗುತ್ತಿದ್ದಂತೆ ಸುಮಲತಾ ಚಂದು ಜೊತೆ ಹೋಗಿದ್ದಳು. ಆರಂಭದಲ್ಲಿ ಸುಮಲತಾಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ ಚಂದು ನಂತರ ಕಿರುಕುಳ ನೀಡಲು ಆರಂಭಿಸಿದ್ದ. ನಂತರ ಮತ್ತೊಬ್ಬ ಮಹಿಳೆಯನ್ನು ಕರೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡಿದ್ದಾನೆ. ಇದನ್ನು ಸುಮಲತಾ ಪ್ರಶ್ನೆ ಮಾಡಿದ್ದಾಳೆ. ಚಂದು ಜತೆ ಬಂದಿರುವ ಮಹಿಳೆಗೆ 10 ವರ್ಷದ ಮಗನಿದ್ದಾನೆ ಎಂದು ಸುಮಲತಾ ಹೇಳಿದ್ದಾಳೆ. ಇದರಿಂದ ಚಂದುವಿನಿಂದ ಸುಮಲತಾ ದೂರವಾಗಿದ್ದಳು.
ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಬೈಕ್ ವಿಚಾರವಾಗಿ ಸುಮಲತಾ ಮತ್ತು ಚಂದು ನಡುವೆ ಗಲಾಟೆಯಾಗಿದೆ. ಬೈಕ್ ಕೊಡಲ್ಲ ಎಂದು ಸುಮಲತಾ ಮತ್ತು ತಾಯಿ ಮಂಜಮ್ಮ, ತಂದೆ ಶ್ರೀರಾಮುಲು ಹೇಳಿದ್ದಾರೆ. ಇದರಿಂದ ಕೋಪಗೊಂಡ ಚಂದು ಮೂವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮಹಿಳಾ ದಿನಾಚರಣೆಯಂದೇ ಘೋರ ದುರಂತ: ನೀರಿನ ಟ್ಯಾಂಕ್‌ನಲ್ಲಿ ಮೂವರು ಬಾಲಕಿಯರ ಶವ ಪತ್ತೆ; ತಂದೆಯೇ ಕೊಲೆಗಾರ?
ಗಾಯಗೊಂಡ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶ್ರೀರಾಮುಲು ಮತ್ತು ಸುಮಲತಾ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಜಮ್ಮ ಗಂಭೀರವಾಗಿದ್ದಾರೆ.