ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Youth Congress Protest: 'ಮೆಟಾ ಬಿಜೆಪಿ ಕಾ ಬೇಟಾ'; ​RSS ವೇಷದಲ್ಲಿ ಮಾರ್ಕ್ ಜುಕರ್‌ಬರ್ಗ್, ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್‌ ಬ್ಯಾನರ್‌ ಸಮರ!

Youth Congress Protest against Meta: ಯುವ ಕಾಂಗ್ರೆಸ್‌ ನಾಯಕರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮೆಟಾ ಸಂಸ್ಥೆ ನಿರ್ಬಂಧಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬ್ಯಾನರ್ ಸಮರ ಆರಂಭಿಸಿದ್ದಾರೆ. ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರನ್ನು ವ್ಯಂಗ್ಯವಾಗಿ ಬಿಂಬಿಸಿ, ‘ಮೆಟಾ ಬಿಜೆಪಿ ಕಾ ಬೇಟಾ’ ಎಂಬ ಘೋಷಣೆಯ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

RSS ವೇಷದಲ್ಲಿ ಜುಕರ್‌ಬರ್ಗ್; ಮೆಟಾ ವಿರುದ್ಧ ಕಾಂಗ್ರೆಸ್‌ ಬ್ಯಾನರ್‌ ಸಮರ!

-

Prabhakara R
Prabhakara R Nov 24, 2026 7:55 PM

ಬೆಂಗಳೂರು: ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ಸಂಪರ್ಕಿಸುವ ಮೆಟಾ ಸಂಸ್ಥೆಯ ವಿರುದ್ಧ ಯುವ ಕಾಂಗ್ರೆಸ್ (Youth Congress) ಬ್ಯಾನರ್‌ ಸಮರ ಸಾರಿದೆ. ಸಾಮಾಜಿಕ ಜಾಲತಾಣ ದಿಗ್ಗಜ ಮೆಟಾ (Meta) ಸಂಸ್ಥೆಯು ರಾಜಕೀಯ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ವಿವಿಧೆಡೆ ವಿನೂತನ ಬ್ಯಾನರ್ ಅಭಿಯಾನ ಆರಂಭಿಸಿದೆ.

‘ಮೆಟಾ ಬಿಜೆಪಿ ಕಾ ಬೇಟಾ’ ಎಂಬ ಬರಹದೊಂದಿಗೆ ನಗರದ ವಿವಿಧೆಡೆ ಬೃಹತ್ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರನ್ನು ವ್ಯಂಗ್ಯವಾಗಿ ‘ಮಾರ್ಕ್ ಬಿಜೆಪಿಬರ್ಗ್’ ಎಂದು ಉಲ್ಲೇಖಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣಗಳನ್ನು ನಿಯಂತ್ರಿಸುವಲ್ಲಿ ತಾರತಮ್ಯ, ಸುಳ್ಳು ಸುದ್ದಿಗಳ ಪ್ರಸಾರ, ರಾಜಕೀಯ ಪ್ರಭಾವ ಹಾಗೂ ಬಳಕೆದಾರರ ವೈಯಕ್ತಿಕ ಮಾಹಿತಿಯ ಗೌಪ್ಯತೆ ವಿಚಾರಗಳಲ್ಲಿ ಮೆಟಾ ಸಂಸ್ಥೆಯ ಕಾರ್ಯವೈಖರಿ ಕುರಿತು ಯುವ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತಿದೆ.

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸದೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.



ಬೆಂಗಳೂರಿನ ಸಾದಹಳ್ಳಿ ಗೇಟ್, ನ್ಯೂ ಏರ್‌ಪೋರ್ಟ್ ರಸ್ತೆ, ಟೋಲ್ ಪ್ಲಾಜಾ ಸಮೀಪ ಹಾಗೂ ಚಿಕ್ಕಜಾಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ಅಭಿಯಾನದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಮೆಟಾ ಸಂಸ್ಥೆಯ ವಿರುದ್ಧ ಯುವ ಕಾಂಗ್ರೆಸ್ ಮಾಡಿರುವ ರಾಜಕೀಯ ಪಕ್ಷಪಾತದ ಆರೋಪಗಳಿಗೆ ಸಂಬಂಧಿಸಿದಂತೆ ಸಂಸ್ಥೆಯ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

ಯುವ ಕಾಂಗ್ರೆಸ್‌ ಆಕ್ರೋಶಕ್ಕೆ ಕಾರಣವೇನು?

ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ (Uday Bhanu Chib) ಮತ್ತು ಪ್ರಧಾನ ಕಾರ್ಯದರ್ಶಿ ಮನೀಶ್ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮೆಟಾ ಸಂಸ್ಥೆಯು ಭಾರತದಲ್ಲಿ ನಿರ್ಬಂಧಿಸಿತ್ತು. ಯಾವುದೇ ಸೂಕ್ತ ಕಾರಣ ನೀಡದೆ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.

ಖಾತೆ ಸ್ಥಗಿತಗೊಂಡ ಬೆನ್ನಲ್ಲೇ, ನವೆಂಬರ್ 20ರಂದು ಹೈದರಾಬಾದ್, ಮುಂಬೈ ಮತ್ತು ಗುರುಗ್ರಾಮದಲ್ಲಿರುವ ಮೆಟಾ ಕಚೇರಿಗಳ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದರು. ಹೈದರಾಬಾದ್ ಕಚೇರಿಯ ಆವರಣಕ್ಕೆ ನುಗ್ಗಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರೆ, ಮುಂಬೈ ಕಚೇರಿಯ ಗೋಡೆಗಳ ಮೇಲೆ ಘೋಷಣೆಗಳನ್ನು ಬರೆದ ಹಿನ್ನೆಲೆಯಲ್ಲಿ ನಾಲ್ವರು ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಇದೀಗ ಬೆಂಗಳೂರಿನಲ್ಲಿ ಮೆಟಾ ವಿರುದ್ಧ ಯುವ ಕಾಂಗ್ರೆಸ್‌ ಬ್ಯಾನರ್‌ ಮೂಲಕ ಆಕ್ರೋಶ ಹೊರಹಾಕಿದೆ.