ದಿಲ್ಜಿತ್ ದೋಸಾಂಜ್ ಮ್ಯೂಸಿಕ್ ಕಾನ್ಸರ್ಟ್‌ಗೆ ಬಾಂಬ್ ಬೆದರಿಕೆ; ಎಫ್ಐಆರ್ ದಾಖಲಿಸಿದ ಬೆಂಗಳೂರು ಪೊಲೀಸರು!
ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿ ಈ ತಿಂಗಳಾಂತ್ಯಕ್ಕೆ ನಡೆಯಲಿದ್ದು, ಆ ವೇಳೆ ಐಇಡಿ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
-
ಬೆಂಗಳೂರಿನಲ್ಲಿ ನವೆಂಬರ್ 29 ರಂದು ನಡೆಯಲಿರುವ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ವೇಳೆ ಐಇಡಿ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಾರ್ಯಕ್ರಮದ ಭದ್ರತಾ ಸಿದ್ಧತೆಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ಸೈಬರ್ ಹಾಗೂ ಸ್ಥಳೀಯ ಪೊಲೀಸ್ ತಂಡಗಳು ಬೆದರಿಕೆ ಸಂದೇಶದ ಮೂಲ ಮತ್ತು ಸತ್ಯಾಸತ್ಯತೆಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿವೆ ಎಂದು ಹಿರಿಯ ಅಧಿಕಾರಿಗಳು ಮಂಗಳವಾರ (ನ.24) ತಿಳಿಸಿದ್ದಾರೆ.
ಬೆದರಿಕೆ ಮೇಲ್‌ನಲ್ಲಿ ಏನೇನಿದೆ?
ನ.29ರಂದು ಮಾದಾವರದ ನೈಸ್ ಗ್ರೌಂಡ್ಸ್‌ನಲ್ಲಿ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಿಗದಿಯಾಗಿರುವುದನ್ನು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆಡಳಿತ ಮಂಡಳಿಯೊಂದಿಗೆ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಮಾಹಿತಿಯಂತೆ, ನವೆಂಬರ್ 9ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಅಧಿಕೃತ ಇಮೇಲ್ ವಿಳಾಸಗಳಿಗೆ ಈ ಬೆದರಿಕೆ ಇಮೇಲ್ ಬಂದಿದೆ. ನವೆಂಬರ್ 29ರ ಸಂಗೀತ ಕಾರ್ಯಕ್ರಮದ ವೇಳೆ ಐಇಡಿ ಸ್ಫೋಟ ಸಂಭವಿಸಲಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರಬಾರದು, ವಾರಸುದಾರರಿಲ್ಲದ ಐಫೋನ್‌ಗಳನ್ನು ಮುಟ್ಟಬಾರದು ಹಾಗೂ ಮೆಟ್ರೋದಲ್ಲಿ ಪ್ರಯಾಣಿಸಬಾರದು ಎಂದು ಆ ಇಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಹಲವು ಸೆಕ್ಷನ್‌ಗಳಡಿ ಕೇಸ್ ದಾಖಲು
ಬೆದರಿಕೆ ಇಮೇಲ್‌ನ ಕೊನೆಯಲ್ಲಿ ʻಖಲಿಸ್ತಾನ್ ಜಿಂದಾಬಾದ್ʼ ಎಂಬ ಘೋಷಣೆಯನ್ನು ಬರೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಬೆಂಗಳೂರಿನ ಉತ್ತರ ವಿಭಾಗದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 351(4) (ಕ್ರಿಮಿನಲ್ ಬೆದರಿಕೆ) ಮತ್ತು 353(1)(b) (ಸಾರ್ವಜನಿಕ ಕಿಡಿಗೇಡಿತನಕ್ಕೆ ಪ್ರಚೋದಿಸುವ ಹೇಳಿಕೆಗಳು) ಅಡಿಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ದಿಲ್ಜತ್ ದೋಸಾಂಜ್ ಅವರ ಲೈವ್ ಕನ್ಸರ್ಟ್ ಸರಣಿಯ ಭಾಗವಾಗಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ನಡೆಯುತ್ತಿರುವ ಈ ಸರಣಿ ಕಾರ್ಯಕ್ರಮಗಳಿಗೆ ಭಾರಿ ಪೊಲೀಸ್ ಬಂದೋಬಸ್ತ್, ಸಂಚಾರ ನಿರ್ಬಂಧಗಳು ಮತ್ತು ಜನಸಂದಣಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿಯೂ ಕಾರ್ಯಕ್ರಮಕ್ಕೂ ಮುನ್ನ ಸ್ಥಳದ ಸುತ್ತಮುತ್ತ ತೀವ್ರ ನಿಗಾ ವಹಿಸಲಾಗಿದ್ದು, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ದಿಲ್ಜಿತ್ ದೋಸಾಂಜ್ ಅವರ ಲೈವ್ ಪ್ರದರ್ಶನಗಳು ಭದ್ರತಾ ಎಚ್ಚರಿಕೆಗಳು ಮತ್ತು ಆಡಳಿತಾತ್ಮಕ ನಿಗಾಕ್ಕೆ ಒಳಗಾಗುತ್ತಲೇ ಬಂದಿವೆ. ಈ ಹಿಂದೆ 2024ರ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನಡೆದಿದ್ದ ಅವರ ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಖಲಿಸ್ತಾನ್ ಪರ ಸಂಘಟನೆಯಾದ 'ಸಿಖ್ಸ್ ಫಾರ್ ಜಸ್ಟಿಸ್' ಬೆದರಿಕೆ ಹಾಕಿದ್ದರಿಂದ ಮುಂಬೈ ಪೊಲೀಸರು ಭಾರಿ ಭದ್ರತೆ ಒದಗಿಸಿದ್ದರು.