Bengaluru Child Death: ಬೆಂಗಳೂರಿನಲ್ಲಿ ಹೀನ ಕೃತ್ಯ; ಮಗಳು ಕಪ್ಪಾಗಿದ್ದಾಳೆ ಎಂದು ಲವರ್ ಜತೆ ಸೇರಿ ಉಸಿರುಗಟ್ಟಿಸಿ ಕೊಂದ ತಾಯಿ!
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗು ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಜತೆ ಬಾಳಲು ಅಡ್ಡಿಯಾಗಿದ್ದಾಳೆ ಮತ್ತು ಕಪ್ಪಾಗಿದ್ದಾಳೆ ಎಂದು ಮಗಳನ್ನು ತಾಯಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ತಾಯಿ ಪ್ರಿಯಾಂಕಾ ಜತೆ ಮೃತ ಮಗಳು ವೆನ್ನೆಲಾ, ಆರೋಪಿ ಮೋಹನ್. -
ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಗು ಸಾವು ಪ್ರಕರಣಕ್ಕೆ (Bengaluru child death case) ದೊಡ್ಡ ಟ್ವಿಸ್ಟ್ ಸಿಕ್ಕಿದೆ. 6 ವರ್ಷದ ಮಗಳನ್ನು ಹೆತ್ತ ತಾಯಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಮಗು ಮೃತಪಟ್ಟ ಮೂರು ತಿಂಗಳ ಬಳಿಕ ತಾಯಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ವೆನ್ನೆಲಾ (6) ಕೊಲೆಯಾದ ಬಾಲಕಿ. ಪ್ರಿಯಕರನ ಜತೆ ನೆಮ್ಮದಿಯಾಗಿ ಬಾಳಲು ಮಗಳನ್ನು ತಾಯಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆ ಪ್ರವೀಣ್ ನೀಡಿದ ದೂರಿನ ಮೇರೆಗೆ ಪತ್ನಿ ಪ್ರಿಯಾಂಕ ಮತ್ತು ಆಕೆಯ ಪ್ರಿಯಕರ ಮೋಹನ್ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದಾವಣಗೆರೆ ಮೂಲದ ಪ್ರವೀಣ್ ಹಾಗೂ ಬೆಂಗಳೂರಿನ ಪ್ರಿಯಾಂಕ ದಂಪತಿಗೆ 2007 ರಲ್ಲಿ ಮದುವೆಯಾಗಿತ್ತು. ಇವರಿಗೆ 17 ವರ್ಷ ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಪ್ರಿಯಾಂಕಾಗೆ ತನ್ನ ಕಾಲೇಜು ದಿನಗಳ ಗೆಳೆಯ ಮೋಹನ್ ಎಂಬಾತ ಮತ್ತೆ ಸಿಕ್ಕಿದ್ದ. ಇಬ್ಬರ ನಡುವೆ ಪರಿಚಯ ಬೆಳೆದು, ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕೊನೆಗೆ ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇರಲು ಆರಂಭಿಸಿದ್ದರು.
ಈ ಅಕ್ರಮ ಸಂಬಂಧದ ಬಗ್ಗೆ ಪತಿ ಪ್ರವೀಣ್ ಪ್ರಶ್ನಿಸಿದಾಗ, ಪ್ರಿಯಾಂಕಾ ಡಿವೋರ್ಸ್ ನೀಡುವಂತೆ ಪಟ್ಟು ಹಿಡಿದಿದ್ದಳು. ನಂತರ ಆಕೆ ಕಾಡುಗೋಡಿಯಲ್ಲಿ ಪ್ರಿಯಕರ ಮೋಹನ್ ಜೊತೆ ವಾಸಿಸಲು ಆರಂಭಿಸಿದ್ದು, ತನ್ನೊಂದಿಗೆ ಕೊನೆಯ ಮಗಳು ವೆನ್ನೆಲಾಳನ್ನು ಕರೆದುಕೊಂಡು ಹೋಗಿದ್ದಳು.
ಕಳೆದ ಮಾರ್ಚ್ 24 ರಂದು 5 ವರ್ಷದ ಮಗು ವೆನ್ನೆಲಾ ಇದ್ದಕ್ಕಿದ್ದಂತೆ ಸಂಶಯಾಸ್ಪದವಾಗಿ ಮೃತಪಟ್ಟಿತ್ತು. ಈ ಬಗ್ಗೆ ಪತಿ ಪ್ರವೀಣ್ ವಿಚಾರಿಸಿದಾಗ ಪತ್ನಿ ಪ್ರಿಯಾಂಕಾ ಬೇರೆ ಬೇರೆ ಕಥೆಗಳನ್ನು ಹೇಳಿ ನಂಬಿಸಲು ಯತ್ನಿಸಿದ್ದಳು. ಮಗಳಿಗೆ ಬಿರಿಯಾನಿ ಕೊಡಿಸಿದ್ದೆ, ಮತ್ತೊಮ್ಮೆ ಐಸ್‌ಕ್ರೀಂ ಕೊಡಿಸಿ ಎಸಿ ಆನ್ ಮಾಡಿ ಕಾರಿನಲ್ಲಿ ಮಲಗಿಸಿದ್ದೆ. ಆದರೆ ಮನೆಗೆ ಬಂದ ಬಳಿಕ ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು ಎಂದು ಸುಳ್ಳು ಹೇಳಿದ್ದಳು.
ವಿದೇಶದ ವೈದ್ಯೆನಿಂದ ಬಯಲಾಯ್ತು ರಹಸ್ಯ
ಮಗುವಿನ ಸಾವಿನ ಬಗ್ಗೆ ತಂದೆ ಪ್ರವೀಣ್‌ಗೆ ತೀವ್ರ ಅನುಮಾನ ಕಾಡಿತ್ತು. ಹೀಗಾಗಿ ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯನ್ನು ವಿದೇಶದಲ್ಲಿದ್ದ ತನ್ನ ಸಂಬಂಧಿ ವೈದ್ಯರೊಬ್ಬರಿಗೆ ಕಳುಹಿಸಿಕೊಟ್ಟಿದ್ದರು. ವರದಿಯನ್ನು ಪರಿಶೀಲಿಸಿದ ಆ ವೈದ್ಯೆ, ಇದು ಸಹಜ ಸಾವಲ್ಲ ಎಂಬ ಸುಳಿವು ನೀಡಿದ್ದರು.
ಪ್ರಿಯಕರನ ಜತೆ ಬಾಳಲು ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಮತ್ತು ಮಗುವಿನ ಬಣ್ಣದ ವಿಚಾರವಾಗಿ ತಾಯಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸೇರಿ ಮಗುವಿಗೆ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಕಾಡುಗೋಡಿ ಪೊಲೀಸ್ ಠಾಣೆಗೆ ತಂದೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿರುವ ಕಾಡುಗೋಡಿ ಪೊಲೀಸರು, ಪ್ರಿಯಾಂಕಾ ಗೆಳೆಯ ಮೋಹನ್‌ನನ್ನು ಬಂಧಿಸಿದ್ದಾರೆ. ಆದರೆ ಮಗು ತಾಯಿ ಪ್ರಿಯಾಂಕಾ ಸದ್ಯ ತಲೆಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.