ವಿವಾದಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ‘ಕರಾವಳಿ’ ಸದ್ದು: 2ನೇ ದಿನ ಪ್ರಜ್ವಲ್ ದೇವರಾಜ್ ಸಿನಿಮಾದ ಕಲೆಕ್ಷನ್ ಡಬಲ್!
ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, 2ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನಕ್ಕಿಂತ ಎರಡರಷ್ಟು ಹೆಚ್ಚಾಗಿದೆಯಂತೆ. ಕಂಬಳದ ಹಿನ್ನೆಲೆಯ ಈ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರಶಂಸೆಯಿಂದಾಗಿ ಹೆಚ್ಚುವರಿಯಾಗಿ 25 ಸ್ಕ್ರೀನ್‌ಗಳನ್ನು ಸೇರಿಸಲಾಗಿದೆ.
-
ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಕರಾವಳಿ' ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕಂಬಳದ ಹಿನ್ನೆಲೆಯ ಅದ್ಭುತ ಪ್ರಪಂಚವನ್ನು ಬೆಳ್ಳಿಪರದೆಯ ಮೇಲೆ ಕಣ್ತುಂಬಿಕೊಂಡ ಕನ್ನಡ ಸಿನಿಪ್ರಿಯರು ಚಿತ್ರಕ್ಕೆ ಭರಪೂರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಜುಲೈ 24 ರಂದು ರಾಜ್ಯದ 175 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಅಭಿನಂದನೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಭಾರಿ ಬೇಡಿಕೆಯನ್ನು ಪರಿಗಣಿಸಿ, ಎರಡನೇ ದಿನವೇ ಚಿತ್ರತಂಡ ಹೆಚ್ಚುವರಿಯಾಗಿ 25ಕ್ಕೂ ಹೆಚ್ಚು ಸ್ಕ್ರೀನ್‌ಗಳನ್ನು ಸೇರ್ಪಡೆಗೊಳಿಸಿದೆ.
ಮೊದಲ ದಿನಕ್ಕಿಂತ 2ನೇ ದಿನದ ಕಲೆಕ್ಷನ್ ಡಬಲ್!
ಮಂದಗತಿಯಲ್ಲಿದ್ದ ಕನ್ನಡ ಚಿತ್ರರಂಗಕ್ಕೆ 'ಕರಾವಳಿ' ಹೊಸ ಚೈತನ್ಯ ತುಂಬಿದೆ. ಮೊದಲ ದಿನವೇ 1 ಕೋಟಿ ರೂ,ಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಉತ್ತಮ ಆರಂಭ ಪಡೆದಿದ್ದ ಈ ಚಿತ್ರ, ಶನಿವಾರದಂದು (2ನೇ ದಿನ) ಮೊದಲ ದಿನಕ್ಕಿಂತಲೂ ಎರಡರಷ್ಟು (ಡಬಲ್) ಗಳಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಕನ್ನಡದಲ್ಲಿ ಬಿಡುಗಡೆಯಾಗಿ ಅತ್ಯುತ್ತಮ ಓಪನಿಂಗ್ ಪಡೆದುಕೊಂಡ 'ಲವ್ ಮಾಕ್‌ಟೇಲ್ 3' ಮತ್ತು 'KD' ಸಿನಿಮಾಗಳ ಸಾಲಿಗೆ ಈಗ 'ಕರಾವಳಿ' ಕೂಡ ಸೇರ್ಪಡೆಯಾಗಿದೆ. ಟಿಕೆಟ್ ಬುಕಿಂಗ್ ಆಪ್ 'ಬುಕ್ ಮೈ ಶೋ'ನಲ್ಲಿ ಶನಿವಾರದಂದು ಪ್ರತಿ ಗಂಟೆಗೆ 2,000ಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿರುವುದು ಈ ಚಿತ್ರಕ್ಕಿರುವ ಕ್ರೇಜ್‌ಗೆ ಸಾಕ್ಷಿಯಾಗಿದೆ. ಭಾನುವಾರ ರಜಾದಿನವಾಗಿರುವುದರಿಂದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಪರಭಾಷೆಯಲ್ಲೂ ಹೆಚ್ಚಿದ ಬೇಡಿಕೆ?
ಸದ್ಯ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗಿರುವ ‘ಕರಾವಳಿ’ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ನೋಡಿ ನೆರೆರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಗಿದೆಯಂತೆ. ಹೀಗಾಗಿ ಮುಂದಿನ ವಾರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.