ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೃದಯ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ: 136 ಜೀವಗಳಿಗೆ ಮರುಜನ್ಮ ನೀಡಿದ ಸಾಧನೆಯ ಸಂಭ್ರಮಾಚರಣೆ ಮಾಡಿದ ನಾರಾಯಣ ಹೆಲ್ತ್

ನಾರಾಯಣ ಹೆಲ್ತ್ ಸಿಟಿಯು ಈವರೆಗೆ ಸಂಕೀರ್ಣವಾದ 136 ಜೀವ ರಕ್ಷಕ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಂದಾಗಿ ವಯಸ್ಕರು ಹಾಗೂ ಪುಟ್ಟ ಮಕ್ಕಳ ಸಂಕೀರ್ಣ ಕಸಿ ಶಸ್ತ್ರಚಿಕಿತ್ಸೆಗಳನ್ನು ಸಮರ್ಥವಾಗಿ ನಿರ್ವಹಿಸ ಲಾಗುತ್ತಿದೆ.

ಹೃದಯ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ: 136 ಜೀವಗಳಿಗೆ ಮರುಜನ್ಮ

-

Profile
Ashok Nayak Sep 23, 2026 8:46 PM

ಬೆಂಗಳೂರು: ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯು ಅಂತಿಮ ಹಂತದ ಹೃದಯ ಹಾಗೂ ಶ್ವಾಸಕೋಶ ವೈಫಲ್ಯದಿಂದ ತೀವ್ರ ಅನಿಶ್ಚಿತತೆ ಮತ್ತು ಸಾವಿನಂಚಿನಲ್ಲಿದ್ದ 136 ಮಂದಿಗೆ ಯಶಸ್ವಿ ಅಂಗಾಂಗ ಕಸಿ ಚಿಕಿತ್ಸೆಯ ಮೂಲಕ ಹೊಸ ಬದುಕು ಕಲ್ಪಿಸಿಕೊಟ್ಟಿದೆ.

ಸೆ.29ರ ವಿಶ್ವ ಹೃದಯ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಂಭ್ರಮಾಚರಣೆ ಸಮಾವೇಶದಲ್ಲಿ 40ಕ್ಕೂ ಹೆಚ್ಚು ಕಸಿ ಶಸ್ತ್ರಚಿಕಿತ್ಸಾ ಫಲಾನುಭವಿಗಳು ಹಾಗೂ ಅವರ ಕುಟುಂಬ ಸದಸ್ಯರು ಒಗ್ಗೂಡಿ ತಮ್ಮ ಮರುಜನ್ಮದ ಸಂಭ್ರಮ ವನ್ನು ಹಂಚಿಕೊಂಡರು.

ನಾರಾಯಣ ಹೆಲ್ತ್ ಸಿಟಿಯು ಈವರೆಗೆ ಸಂಕೀರ್ಣವಾದ 136 ಜೀವ ರಕ್ಷಕ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಂದಾಗಿ ವಯಸ್ಕರು ಹಾಗೂ ಪುಟ್ಟ ಮಕ್ಕಳ ಸಂಕೀರ್ಣ ಕಸಿ ಶಸ್ತ್ರಚಿಕಿತ್ಸೆಗಳನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ.

ಇದನ್ನೂ ಓದಿ: Vishwavani Health: ಅನ್ನದೊಂದಿಗೆ ಎಣ್ಣೆ, ಚಟ್ನಿ ಪುಡಿ ಸೇವನೆ ಉತ್ತಮವೇ?

ಕಸಿ ಮಾಡಿಸಿಕೊಂಡವರಲ್ಲಿ ಶೇ.95ರಷ್ಟು ರೋಗಿಗಳು ಸಂಪೂರ್ಣ ಗುಣಮುಖರಾಗಿ ಸಾಮಾನ್ಯ ಬದುಕಿಗೆ ಮರಳಿದ್ದಾರೆ. ಮಕ್ಕಳು ಶಾಲೆಗೆ ಮರಳಿರುವುದು ಹಾಗೂ ಕಸಿ ಫಲಾನುಭವಿಗಳು ಕ್ರೀಡೆಗಳಲ್ಲಿ ಮಿಂಚುತ್ತಿರುವುದು ಈ ಚಿಕಿತ್ಸೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ವೈದ್ಯರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವು ರೋಗಿಗಳು ತಮ್ಮ ಸ್ಪೂರ್ತಿದಾಯಕ ಯಶೋಗಾಥೆಗಳನ್ನು ಹಂಚಿ ಕೊಂಡರು. ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬರೋಬ್ಬರಿ 16 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ರುವ ವಿ.ಕೆ. ಅವರು ದೀರ್ಘಾಯುಷ್ಯದ ಭರವಸೆ ಮೂಡಿಸಿದರೆ, ಹೃದಯ ವೈಫಲ್ಯದಿಂದ ಚೇತರಿಸಿ ಕೊಂಡು ವರ್ಲ್ಡ್ ಟ್ರಾನ್ಸ್‌ ಪ್ಲಾಂಟ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟ ಎಸ್.ಎಸ್. ಅವರ ಸಾಧನೆ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಇನ್ನು ಕೇವಲ 14 ತಿಂಗಳ ಹಸುಗೂಸಾಗಿದ್ದಾಗ ಹೃದಯ ಕಸಿ ಮಾಡಿಸಿಕೊಂಡು ದೇಶದಲ್ಲೇ ಅತ್ಯಂತ ಕಿರಿಯ ಫಲಾನುಭವಿಯಾದ ಬೇಬಿ ಕೆ ಹಾಗೂ 68ನೇ ವಯಸ್ಸಿನಲ್ಲಿ ಸಂಯುಕ್ತ ಹೃದಯ-ಶ್ವಾಸಕೋಶ ಕಸಿ ಮಾಡಿಸಿಕೊಂಡು ಇದೀಗ 75ರ ಹರೆಯದಲ್ಲೂ ಲವಲವಿಕೆಯಿಂದಿರುವ ಕೆ.ಎಸ್. ಅವರ ಉಪಸ್ಥಿತಿ ಎಲ್ಲರ ಗಮನ ಸೆಳೆಯಿತು. 2022ರಲ್ಲಿ ಕಸಿ ಮಾಡಿಸಿಕೊಂಡ ಎ.ಎಫ್.ಎಂ ಮತ್ತು 2025ರಲ್ಲಿ ಚಿಕಿತ್ಸೆ ಪಡೆದ ಎನ್.ಎನ್ ಅವರಂತಹ ರೋಗಿಗಳು ಎರಡೂ ಅಂಗಗಳ ಕಸಿ ಮಾಡಿಸಿ ಕೊಂಡು ಹೊಸ ಜೀವನ ಕಂಡುಕೊಂಡಿದ್ದಾರೆ.

ಅಂಗದಾನಿಗಳು ಲಭ್ಯವಾಗುವವರೆಗೂ ಕಾಯಲು ಸಾಧ್ಯವಾಗದಂತಹ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ಎಕ್ಮೋ (ಎಕ್ಷ್ಟ್ರಾ ಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಷನ್) ಹಾಗೂ ವ್ಯಾಡ್ಸ್ (ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸಸ್) ನಂತಹ ಕೃತಕ ರಕ್ತಪರಿಚಲನಾ ಉಪಕರಣಗಳು ಜೀವ ರಕ್ಷಕ ಕೊಂಡಿಯಾಗಿ ನೆರವಾದವು. 24 ಗಂಟೆಗಳ ತುರ್ತು ನಿಗಾ, ಸುಧಾರಿತ ಕಾರ್ಡಿಯಾಕ್ ಇಮೇಜಿಂಗ್ ಹಾಗೂ ನಿಖರ ವೈದ್ಯಕೀಯ ಮಧ್ಯಸ್ಥಿಕೆಯು ಅನಿಶ್ಚಿತತೆಯಲ್ಲಿದ್ದ ರೋಗಿಗಳು ಸ್ಥಿರವಾಗಿರಲು ನೆರವಾಯಿತು ಎಂದು ಸಂಸ್ಥೆಯ ತಜ್ಞರು ವಿವರಿಸಿದರು.

ಇಲ್ಲಿ ಕಸಿ ಮಾಡಿಸಿಕೊಂಡ 136 ಜನರಲ್ಲಿ ಅರ್ಧದಷ್ಟು ಅಂದರೆ ಶೇ 50ರಷ್ಟು ಮಂದಿ ಹೊರ ರಾಜ್ಯಗಳವರಾಗಿದ್ದು, ದೇಶದ 19 ವಿವಿಧ ರಾಜ್ಯಗಳ ರೋಗಿಗಳು ಇಲ್ಲಿಗೆ ಆಗಮಿಸಿದ್ದಾರೆ. ಜತೆಗೆ ಸುಡಾನ್ ಸೇರಿದಂತೆ ವಿದೇಶಿ ರೋಗಿಗಳಿಗೂ ಯಶಸ್ವಿಯಾಗಿ ಕಸಿ ನೆರವೇರಿಸುವ ಮೂಲಕ ಜಾಗತಿಕ ಮಟ್ಟದ ಮನ್ನಣೆ ಗಳಿಸಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.

ಹೃದಯ ಕಸಿ ಕೇವಲ ಶಸ್ತ್ರಚಿಕಿತ್ಸೆಯಲ್ಲ, ಅದು ಇಡೀ ಕುಟುಂಬಕ್ಕೆ ಸಿಗುವ ಪುನರ್ಜನ್ಮ. ಈ ಯಶಸ್ಸು ರೋಗಿಗಳ ಅದ್ಭುತ ಚೇತರಿಕೆಯ ಶಕ್ತಿ ಮತ್ತು ಅಂಗದಾನ ಮಾಡಿದ ಕುಟುಂಬಗಳ ಅಪಾರ ನಿಸ್ವಾರ್ಥತೆಗೆ ಸಲ್ಲುವ ಗೌರವ. ಆದರೆ ಇಂದಿಗೂ ಸೂಕ್ತ ಸಮಯದಲ್ಲಿ ಅಂಗಾಂಗಗಳು ಸಿಗದೆ ದೇಶದಲ್ಲಿ ಪ್ರತಿದಿನ ನೂರಾರು ರೋಗಿಗಳು ದುರಂತಮಯವಾಗಿ ಸಾವನ್ನಪ್ಪುತ್ತಿದ್ದಾರೆ.

ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗದಾನದ ಪ್ರತಿಜ್ಞೆ ಮಾಡುವ ಮೂಲಕ ಸಾವಿನಂಚಿ ನಲ್ಲಿರುವ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದು ನಾರಾಯಣ ಹೆಲ್ತ್‌ ನ ವೈದ್ಯರ ತಂಡ ಕರೆ ನೀಡಿದೆ.