ಬೆಂಗಳೂರು-ದೆಹಲಿಗೆ ಹೊಸ ಕಂಟೇನರ್ ರೈಲು ಸೇವೆ ಆರಂಭ: ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ
ರೈಲು ಸೇವೆಯಿಂದ ಸುಮಾರು ನಾಲ್ಕರಿಂದ ಐದು ದಿನಗಳಷ್ಟು ಸಮಯ ಉಳಿತಾಯವಾಗಲಿದ್ದು, ಕೈಗಾರಿಕೆಗಳ ಉತ್ಪಾದನಾ ಮತ್ತು ಸರಕು ನಿರ್ವಹಣಾ ಯೋಜನೆಗೆ ಇದು ನೆರವಾಗಲಿದೆ ಎಂದರು. ರಸ್ತೆಗಿಂತ ಶೇ.30ರಷ್ಟು ಕಡಿಮೆ ವೆಚ್ಚ: ಕಂಟೇನರ್ ರೈಲು ಸೇವೆಯ ಪ್ರಮುಖ ಪ್ರಯೋಜನವೆಂದರೆ ಕಡಿಮೆ ಸಾರಿಗೆ ವೆಚ್ಚ. ರಸ್ತೆ ಮೂಲಕ ಸರಕು ಸಾಗಣೆಗೆ ಹೋಲಿಸಿದರೆ ರೈಲಿನ ಮೂಲಕ ಸುಮಾರು ೩೦ರಷ್ಟು ಕಡಿಮೆ ವೆಚ್ಚದಲ್ಲಿ ಸರಕು ಸಾಗಿಸಬಹುದಾಗಿದೆ
-
ಕರ್ನಾಟಕದ ಹಲವು ಕೈಗಾರಿಕಾ ಪ್ರದೇಶಗಳಿಗೆ ದೊಡ್ಡ ಅನುಕೂಲ
ಬೆಂಗಳೂರು ದಕ್ಷಿಣ ಭಾರತದ ಕೈಗಾರಿಕಾ ವಲಯಕ್ಕೆ ಮಹತ್ವದ ಕೊಡುಗೆಯಾಗಿ ವೈಟ್‌ಫೀಲ್ಡ್ ನಿಂದ ಚೆನ್ನೈನ ತೊಂಡಿಯಾರ್‌ಪೇಟೆ ಮೂಲಕ ದೆಹಲಿಯ ತುಘಲಕಾಬಾದ್ ಗೆ ಹೊಸ ಕಂಟೇನರ್ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ರಸ್ತೆ ಸಾರಿಗೆಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ, ನಿಗದಿತ ಸಮಯದಲ್ಲಿ ಸರಕುಗಳನ್ನು ತಲುಪಿಸುವ ಈ ಸೇವೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕೈಗಾರಿಕಾ ಪ್ರದೇಶಗಳಿಗೆ ದೊಡ್ಡ ಅನುಕೂಲವಾಗಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ(V Somanna) ಹೇಳಿದರು.
ಹೊಸ ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ದೂರದೃಷ್ಟಿಯಿಂದ ದಕ್ಷಿಣ ಭಾರತಕ್ಕೆ, ವಿಶೇಷವಾಗಿ ಬೆಂಗಳೂರಿಗೆ ಈ ಮಹತ್ವದ ರೈಲು ಸೇವೆ ದೊರೆತಿದೆ. ವಾರದಲ್ಲಿ ಒಂದು ದಿನ, ಶನಿವಾರ ಈ ಸೇವೆ ಕಾರ್ಯನಿರ್ವಹಿಸಲಿದ್ದು, ಸುಮಾರು 2500 ಕಿ. ಮೀ. ದೂರವನ್ನು 166 ಗಂಟೆಗಳಲ್ಲಿ, ಅಂದರೆ ಸುಮಾರು ಆರೂವರೆ ದಿನಗಳಲ್ಲಿ ಕ್ರಮಿಸಲಿದೆ. ಈ ಹಿಂದೆ ಇದೇ ಸರಕುಗಳನ್ನು ರಸ್ತೆ ಮೂಲಕ ಸಾಗಿಸಲು ಕನಿಷ್ಠ 10 ರಿಂದ 11 ದಿನಗಳ ಕಾಲ ಬೇಕಾಗುತ್ತಿತ್ತು.
ಇದನ್ನೂ ಓದಿ: V. Somanna: ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ : ಕೇಂದ್ರ ಸಚಿವ ವಿ.ಸೋಮಣ್ಣ
ರೈಲು ಸೇವೆಯಿಂದ ಸುಮಾರು ನಾಲ್ಕರಿಂದ ಐದು ದಿನಗಳಷ್ಟು ಸಮಯ ಉಳಿತಾಯವಾಗಲಿದ್ದು, ಕೈಗಾರಿಕೆಗಳ ಉತ್ಪಾದನಾ ಮತ್ತು ಸರಕು ನಿರ್ವಹಣಾ ಯೋಜನೆಗೆ ಇದು ನೆರವಾಗಲಿದೆ ಎಂದರು.
ರಸ್ತೆಗಿಂತ ಶೇ.30ರಷ್ಟು ಕಡಿಮೆ ವೆಚ್ಚ: ಕಂಟೇನರ್ ರೈಲು ಸೇವೆಯ ಪ್ರಮುಖ ಪ್ರಯೋಜನ ವೆಂದರೆ ಕಡಿಮೆ ಸಾರಿಗೆ ವೆಚ್ಚ. ರಸ್ತೆ ಮೂಲಕ ಸರಕು ಸಾಗಣೆಗೆ ಹೋಲಿಸಿದರೆ ರೈಲಿನ ಮೂಲಕ ಸುಮಾರು ೩೦ರಷ್ಟು ಕಡಿಮೆ ವೆಚ್ಚದಲ್ಲಿ ಸರಕು ಸಾಗಿಸಬಹುದಾಗಿದೆ. ಇದರಿಂದ ಉದ್ಯಮಿಗಳಿಗೆ ಸಾರಿಗೆ ವೆಚ್ಚ ಕಡಿಮೆ ಯಾಗುವುದರ ಜತೆಗೆ, ಸರಕುಗಳ ವಿತರಣೆಯ ಬಗ್ಗೆ ಮುಂಚಿತವಾಗಿ ಯೋಜನೆ ರೂಪಿಸಲು ಸಾಧ್ಯವಾಗಲಿದೆ.
ಇದರಿಂದ 15ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗಿದೆ. ಕೋಲಾರದ ತರಕಾರಿ, ತುಮಕೂರಿನ ಕೃಷಿ ಉತ್ಪನ್ನಗಳು ಸೇರಿದಂತೆ ರೈತರು ಬೆಳೆಯುವ ಉತ್ಪನ್ನಗಳನ್ನು ವೇಗವಾಗಿ ದೆಹಲಿ ಸೇರಿದಂತೆ ದೂರದ ಮಾರುಕಟ್ಟೆಗಳಿಗೆ ತಲುಪಿಸಿದರೆ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಮಾರುಕಟ್ಟೆ ಸಿಗದೆ ರೈತರು ಬೆಳೆದ ಬೆಳೆಗಳನ್ನು ನಷ್ಟಕ್ಕೆ ಮಾರಾಟ ಮಾಡುವ ಅಥವಾ ವ್ಯರ್ಥ ಗೊಳಿಸುವ ಪರಿಸ್ಥಿತಿ ತಪ್ಪಿಸಲು ವೇಗದ ಸಾರಿಗೆ ವ್ಯವಸ್ಥೆ ಅಗತ್ಯ. ರೈತ ಬೆಳೆದ ಬೆಳೆಗೆ ಸೂಕ್ತ ದರ ಸಿಗಬೇಕು. ಆತ ಹಾಕಿದ ಬಂಡವಾಳಕ್ಕಿಂತ ಹೆಚ್ಚಿನ ಆದಾಯ ಗಳಿಸಿದಾಗ ಮಾತ್ರ ಆತ ಸ್ವಾಭಿಮಾನ ದಿಂದ ಬದುಕಲು ಸಾಧ್ಯ. ಸಾರಿಗೆ ವ್ಯವಸ್ಥೆ ಉತ್ತಮವಾದರೆ ಮಾರುಕಟ್ಟೆ ವಿಸ್ತರಿಸಲು ಸಾಧ್ಯ ಎಂದರು.
ತುಮಕೂರಿನಿಂದಲೂ ನೇರ ಕಂಟೇನರ್ ಸೇವೆಗೆ ಚಿಂತನೆ ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹಂತದಲ್ಲಿ ಅಲ್ಲಿಂದಲೂ ನೇರವಾಗಿ ದೆಹಲಿಯ ತುಘಲಕಾಬಾದ್‌ಗೆ ಕಂಟೇನರ್ ರೈಲು ಸೇವೆ ಆರಂಭಿಸುವ ಉದ್ದೇಶವಿದೆ. ಏಷ್ಯಾದ ಪ್ರಮುಖ ಮಲ್ಟಿಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳಲ್ಲಿ ಒಂದನ್ನು ತುಮಕೂರಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಮೂಲಕ ಸರಕುಗಳನ್ನು ತುಮಕೂರಿಗೆ ತಂದು ಅಲ್ಲಿಂದ ರೈಲಿನ ಮೂಲಕ ನೇರವಾಗಿ ದೆಹಲಿಗೆ ಕಳುಹಿಸುವ ವ್ಯವಸ್ಥೆ ರೂಪಿಸುವ ಬಗ್ಗೆ ಚಿಂತನೆ ನಡೆದಿದೆ. ಕಂಟೇನರ್ ರೈಲು ಸೇವೆಯನ್ನು ಕೈಗಾರಿಕೆಗಳಿಗೆ ಮಾತ್ರ ಸೀಮಿತಗೊಳಿಸದೆ ಕೃಷಿ ಉತ್ಪನ್ನಗಳ ಸಾಗಣೆ ಯಲ್ಲೂ ಬಳಸುವ ಅಗತ್ಯವಿದೆ ಎಂದು ಕೇಂದ್ರ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
![]()
ದೇಶದ ವಿವಿಧ ಭಾಗಗಳನ್ನು ರೈಲು ಸಂಪರ್ಕದ ಮೂಲಕ ಜೋಡಿಸುವುದು ವಿಕಸಿತ ಭಾರತದ ನಿರ್ಮಾಣಕ್ಕೆ ಅಗತ್ಯ. ದಕ್ಷಿಣ, ಉತ್ತರ ಅಥವಾ ಮಧ್ಯ ಭಾರತ ಎಂಬ ಭೇದವಿಲ್ಲದೆ ಎಲ್ಲ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಬೇಕು ಎಂಬುದು ಕೇಂದ್ರ ಸರಕಾರದ ಉದ್ದೇಶ. ಬೆಂಗಳೂರು-ಮಂಗಳೂರು ಮಾರ್ಗದ ಜತೆಗೆ ಕರಾವಳಿ ಭಾಗದ ಕುಂದಾಪುರ, ಕಾರವಾರ ಸೇರಿದಂತೆ ಪ್ರಮುಖ ನಗರಗಳಿಗೆ ಉತ್ತಮ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
- ವಿ.ಸೋಮಣ್ಣ , ಕೇಂದ್ರ ರೈಲ್ವೆ ರಾಜ್ಯ ಸಚಿವ