ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nice: ನೈಸ್:‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

ನ.2ಕ್ಕೆ ವಿಚಾರಣೆ ಮುಂದೂಡಿರುವ ಸುಪ್ರೀಂಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ರಾಜ್ಯ ಸರಕಾರವೂ ಪ್ರಕರಣಕ್ಕೆ ಸಂಬಂಧಿಸಿ ದಂತೆ ಅರ್ಜಿ ಸಲ್ಲಿಸಿದ್ದು, ಅದನ್ನೂ ವಿಚಾರಣೆಗೆ ಪರಿಗಣಿಸುವಂತೆ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ನೈಸ್:‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

-

Profile
Ashok Nayak Oct 6, 2026 10:23 AM

ಬೆಂಗಳೂರು: ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣದಲ್ಲಿ ನೈಸ್ ಸಂಸ್ಥೆಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆ ನೈಸ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಕ್ಷಣಕ್ಕೆ ಒಪ್ಪಿಲ್ಲ. ಈ ಹಂತದಲ್ಲಿ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸದೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ.2ಕ್ಕೆ ವಿಚಾರಣೆ ಮುಂದೂಡಿರುವ ಸುಪ್ರೀಂಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ರಾಜ್ಯ ಸರಕಾರವೂ ಪ್ರಕರಣಕ್ಕೆ ಸಂಬಂಧಿಸಿ ದಂತೆ ಅರ್ಜಿ ಸಲ್ಲಿಸಿದ್ದು, ಅದನ್ನೂ ವಿಚಾರಣೆಗೆ ಪರಿಗಣಿಸುವಂತೆ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: NICE Project: ನಾನು ನೈಸ್ ಭೂಮಿ ಖರೀದಿ ಮಾಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ: ಸಿಎಂ ಡಿಕೆಶಿಗೆ ಎಚ್‌ಡಿಕೆ ಸವಾಲು

ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ವಾದ: ಭೂಸ್ವಾಧೀನದಿಂದ ಜಮೀನು ಕಳೆದುಕೊಂಡ ಹಲವು ರೈತರಿಗೆ ಇದುವರೆಗೆ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು. ಮತ್ತೊಂದೆಡೆ, ಯೋಜನೆ ಗಾಗಿ ಈಗಾಗಲೇ ದೊಡ್ಡ ಪ್ರಮಾಣದ ಭೂಮಿ ಬಳಸಿಕೊಳ್ಳಲಾಗಿದೆ ಎಂದು ನೈಸ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು

ನೈಸ್ ಸಂಸ್ಥೆಯು ಯೋಜನೆಯ ಶೇ.25ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು 11000 ಎಕರೆ ಭೂಮಿ ಯೋಜನೆಗೆ ಬಳಸಲಾಗಿದೆ ಎಂದು ವಾದಿಸಿತು. ರೈತರಿಗೆ ಪರಿಹಾರ ನೀಡಲಾಗಿದೆ ಎಂಬುದನ್ನೂ ಸಂಸ್ಥೆಯ ಪರ ವಕೀಲರು ಪ್ರತಿಪಾದಿಸಿದರು. ಆದರೆ, ರೈತರಿಗೆ ವಾಸ್ತವವಾಗಿ ಪರಿಹಾರ ಪಾವತಿಯಾಗಿಲ್ಲ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು. ಈ ಹಂತದಲ್ಲಿ ನೈಸ್ ಸಂಸ್ಥೆಯ ವಾದವನ್ನು ಪರಿಗಣಿಸಿ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ

ಭೂಸ್ವಾಧೀನ ರದ್ದುಪಡಿಸಿದ ಹೈ

ನೈಸ್ ಯೋಜನೆಗಾಗಿ ನಡೆದ ಭೂಸ್ವಾಧೀನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, 2025ರ ಜುಲೈ 4ರಂದು ಮಹತ್ವದ ತೀರ್ಪು ನೀಡಿತ್ತು. ಸೂಕ್ತ ಪರಿಹಾರ ನೀಡದೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿತ್ತು. ನೈಸ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಸಾಧ್ಯತೆಯ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಇದಲ್ಲದೆ, ನೈಸ್ ಯೋಜನೆಯ ಭೂಸ್ವಾಧೀನ ಮತ್ತು ಅದಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಆದೇಶ ಪ್ರಶ್ನಿಸಿ ನೈಸ್ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.

ಏನಿದು ನೈಸ್ ವಿವಾದ?

ಬೆಂಗಳೂರು-ಮೈಸೂರು ಇನ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಸೂಕ್ತ ಪರಿಹಾರ ನೀಡಿಲ್ಲ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದೆ ಮತ್ತು ಯೋಜನೆಯ ಉದ್ದೇಶಕ್ಕೆ ವಿರುದ್ಧವಾಗಿ ಭೂಮಿಯನ್ನು ಬಳಸಲಾಗಿದೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಈ ಕುರಿತು ನ್ಯಾಯಾಲಯ ಗಳಲ್ಲಿ ಹಲವು ಸುತ್ತಿನ ವಿಚಾರಣೆಗಳು ನಡೆದಿವೆ.