ಪಾಪ ಆತನಿಗೆ ಅನುಭವ ಕಡಿಮೆ; ಮೆಟ್ರೋ ದರ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯಗೆ ಡಿ.ಕೆ. ಶಿವಕುಮಾರ್ ತಿರುಗೇಟು
DK Shivakumar: ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೂ (ಮಾಧ್ಯಮ) ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು ಎಂದು ಅವರು ಹೇಳಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಮಂಗಳೂರು/ಬೆಂಗಳೂರು, ಫೆ. 7: ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಮಂಗಳೂರಿನ ಹೊಟೇಲ್ ಬಳಿ ಹಾಗೂ ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಅವರು ಪ್ರತಿಕ್ರಿಯೆ ನೀಡಿದರು.
ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, ನಾವು ಹೇಗೆ ಕಾರಣ? ದರ ನಿಗದಿ ಮಾಡುವ ಸಮಿತಿಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ನನ್ನ ಬಳಿ ದರ ಏರಿಕೆ ಫೈಲ್ ಬಂದಿದ್ದರೆ, ನಾನು ಅದಕ್ಕೆ ಸಹಿ ಹಾಕಿದ್ದರೆ, ನಾನು ಕಾರಣ ಎಂದು ಹೇಳಬಹುದು. ನನ್ನ ಬಳಿಗೆ ಯಾವ ಫೈಲ್ ಕೂಡ ಬಂದಿಲ್ಲ. ನಾನು ಸೋಮವಾರ ಬಿಎಂಆರ್‌ಸಿಎಲ್ ಅಧಿಕಾರಿಗಳ ಜತೆ ಚರ್ಚೆ ಮಾಡುವೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಮೆಟ್ರೋಗೆ ಆರ್ಥಿಕ ಸಹಕಾರ ನೀಡದಿರುವುದಕ್ಕೆ ದರ ಏರಿಕೆಯಾಗುತ್ತಿದೆ ಎಂಬ ಬಿಜೆಪಿಗರ ಹೇಳಿಕೆ ಬಗ್ಗೆ ಕೇಳಿದಾಗ, ಬಿಜೆಪಿಯವರು ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ನಮ್ಮ ರಾಜ್ಯಕ್ಕೆ ಯಾವ ಸಹಾಯ ಮಾಡಿದ್ದಾರೆ ಹೇಳಲಿ ಎಂದರು.
ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಹೇಗೆ ದರ ಏರಿಕೆ ಮಾಡಲು ಸಾಧ್ಯ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಕೇಳಿದಾಗ, ಪಾಪ ಆತನಿಗೆ ಅನುಭವ ಕಡಿಮೆ. ಬರೀ ಟ್ವೀಟ್, ಮಾಧ್ಯಮಗಳ ಮುಂದೆ ಹೇಳಿಕೆಗಷ್ಟೇ ಆತ ಸೀಮಿತ. ಆತ ಒಂದು ದಿನವಾದರೂ ರಾಜ್ಯಕ್ಕೆ ಅನುದಾನ ತಂದಿದ್ದಾರಾ? ಕೇವಲ ಖಾಲಿ ಮಾತು ಬೇಡ. ಖಾಲಿ ಟ್ರಂಕ್ ವಿಚಾರ ಮಾತನಾಡುವುದು ಬೇಡ ಎಂದು ತಿರುಗೇಟು ನೀಡಿದರು.
ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು
ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎಂದು ಕೇಳಿದಾಗ, ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೂ (ಮಾಧ್ಯಮ) ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ
ದಲಿತ ಸಂಘಟನೆಗಳು ಪರಮೇಶ್ವರ್ ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ ಎಂದರು.
ಯತೀಂದ್ರ ನಮ್ಮ ಹೈಕಮಾಂಡ್ ಎಂದ ಡಿ.ಕೆ. ಶಿವಕುಮಾರ್; ಏನಿದರ ಮರ್ಮ?
ಸಮಯವೇ ಉತ್ತರ ನೀಡುತ್ತದೆ
ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ, ಸಮಯವೇ ಉತ್ತರ ನೀಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.