IND vs ENG: ರೋಹಿತ್ ಶರ್ಮಾ ಒಡಿಐ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಬ್ಯಾಟಿಂಗ್ ಕೋಚ್!
IND vs ENG: ಇಂಗ್ಲೆಂಡ್ ಎದುರು ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರತಾಗಿಯೂ ರೋಹಿತ್ ಶರ್ಮಾ ಅವರ ಮೇಲೆ ಯಾವುದೇ ಒತ್ತಡ ಹಾಕುತ್ತಿಲ್ಲ ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಒಡಿಐ ನಿವೃತ್ತಿಯ ವರದಿಗಳ ಬಗ್ಗೆ ಕ್ಲಾರಿಟಿ ನೀಡಿದ ಬ್ಯಾಟಿಂಗ್ ಕೋಚ್. -
ನವದೆಹಲಿ: ರೋಹಿತ್ ಶರ್ಮಾ (Rohit Sharma) ಅವರ ನಿವೃತ್ತಿ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆಯೂ ಟೀಮ್ ಮ್ಯಾನೇಜ್‌ಮೆಂಟ್ ಹಿರಿಯ ಬ್ಯಾಟ್ಸ್‌ಮನ್ ಮೇಲೆ ಯಾವುದೇ ಒತ್ತಡ ಹಾಕುತ್ತಿಲ್ಲ ಎಂದು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ (Sitanshu Kotak) ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕಾರ್ಡಿಫ್ ಪಂದ್ಯದ ಬಳಿಕ ರೋಹಿತ್ ಅವರ ನಿವೃತ್ತಿ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಇತ್ತೀಚಿನ ಎಂಟು ಏಕದಿನ ಪಂದ್ಯಗಳಲ್ಲಿ ರೋಹಿತ್, 30.1ರ ಸರಾಸರಿ ಹಾಗೂ 88.6ರ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 241 ರನ್ ಗಳಿಸಿದ್ದು, ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಕಾರ್ಡಿಫ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಲಯ ಕಂಡುಕೊಳ್ಳಲು ಪರದಾಡಿದ್ದರು. 47 ಎಸೆತಗಳಲ್ಲಿ 26 ರನ್ ಗಳಿಸಿದ ಬಳಿಕ ವಿಲ್ ಜ್ಯಾಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ, ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯವೇ ಭಾರತದ ಪರ ರೋಹಿತ್ ಅವರ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ತಿಳಿಸಿತ್ತು. ಅಲ್ಲದೆ, ಇಂಗ್ಲೆಂಡ್ ಪ್ರವಾಸದ ಬಳಿಕ ಆಯ್ಕೆ ಸಮಿತಿ ರೋಹಿತ್ ಅವರನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲ ಹಾಗೂ ಮುಂದಿನ ವರ್ಷದ ಏಕದಿನ ವಿಶ್ವಕಪ್ ಯೋಜನೆಗಳಲ್ಲೂ ಅವರಿಗೆ ಸ್ಥಾನವಿರುವ ಸಾಧ್ಯತೆ ಕಡಿಮೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
IND vs ENG: ಭಾರತದ ಎದುರು ಏಕಾಂಗಿ ಹೋರಾಟ ನಡೆಸಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟು ಜೋ ರೂಟ್!
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ರೋಹಿತ್ ಬದಲಿಗೆ ಯಶಸ್ವಿ ಜೈಸ್ವಾಲ್ ಅಥವಾ ಇಶಾನ್ ಕಿಶನ್ ಅವರಿಗೆ ಆರಂಭಿಕ ಬ್ಯಾಟರ್ ಆಗಿ ಅವಕಾಶ ನೀಡುವ ಬಗ್ಗೆ ತಂಡ ಚಿಂತಿಸುತ್ತಿದೆಯೇ ಎಂದು ಸುದ್ದಿಗೋಷ್ಠಿಯಲ್ಲಿ ಸಿತಾಂಶು ಕೊಟಕ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರೋಹಿತ್ ಅವರಂತಹ ಅನುಭವಿ ಹಾಗೂ ದೊಡ್ಡ ಆಟಗಾರರು ಇಂತಹ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಹೇಳಿದರು ಹಾಗೂ ಮೊದಲ ಎರಡು ಏಕದಿನ ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಅವರ ಫಾರ್ಮ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
England win the second ODI by 4 wickets.#TeamIndia's focus now shifts to the series decider on Sunday.
— BCCI (@BCCI) July 16, 2026
Scorecard ▶️ https://t.co/2Z0BQOPWjC #ENGvIND pic.twitter.com/CfyMZuZ71Y
ಎರಡನೇ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, “ರೋಹಿತ್ ಶರ್ಮಾ ಅವರಂತಹ ದೊಡ್ಡ ಆಟಗಾರನ ಮೇಲೆ ಯಾವುದೇ ರೀತಿಯ ಒತ್ತಡ ಇರಬಹುದು ಎಂದು ನಾನು ಭಾವಿಸುವುದಿಲ್ಲ. ಅವರು ಅಂಥಾ ಒತ್ತಡಕ್ಕೆ ಒಳಗಾಗುವ ಆಟಗಾರರಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಅವರು ರನ್ ಗಳಿಸಲು ವಿಫಲರಾದರು ಎಂಬುದು ಸತ್ಯ. ಆದರೆ ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇಂದಿನ ಪಂದ್ಯದಲ್ಲಿಯೂ ಅವರು ಉತ್ತಮ ಇನಿಂಗ್ಸ್ ಕಟ್ಟುವಂತೆ ಕಾಣುತ್ತಿತ್ತು. ಆದರೆ ಅದು ಕ್ರಿಕೆಟ್‌ನ ಭಾಗ,” ಎಂದು ಹೇಳಿದ್ದಾರೆ.
'ಲಾರ್ಡ್ಸ್‌ನಲ್ಲಿ ನೀವು ವಿಭಿನ್ನ ರೋಹಿತ್ ಶರ್ಮಾರನ್ನು ನೋಡಬಹುದು': ಕೊಟಕ್
ಕಾರ್ಡಿಫ್‌ನಲ್ಲಿ ರೋಹಿತ್ ಶರ್ಮಾ ನಿಧಾನಗತಿಯ ಇನಿಂಗ್ಸ್ ಆಡಿದ ಬಳಿಕ ಅವರ ಪರವಾಗಿ ನಿಂತ ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್, ಆರಂಭಿಕ ಬ್ಯಾಟರ್ ಲಾರ್ಡ್ಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟಕ್, “ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ, ಸಾಕಷ್ಟು ಪಂದ್ಯಗಳನ್ನು ನೋಡಿದ್ದೇನೆ. ಕೆಲವೊಮ್ಮೆ ಬ್ಯಾಟರ್‌ಗಳಿಗೆ ತಾವು ಬಯಸುವ ಫಾರ್ಮ್ ಸಿಗುವುದಿಲ್ಲ. ಅದು ಸಹಜ. ಲಾರ್ಡ್ಸ್‌ನಲ್ಲಿ ನೀವು ರೋಹಿತ್ ಶರ್ಮಾ ಅವರಿಂದ ಸಂಪೂರ್ಣ ವಿಭಿನ್ನ ರೀತಿಯ ಇನಿಂಗ್ಸ್ ನೋಡಬಹುದು,” ಎಂದು ಹೇಳಿದರು.
ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಕಮ್‌ಬ್ಯಾಕ್ ಮಾಡಲಿದ್ದಾರೆಂದ ಪಾರ್ಥಿವ್ ಪಟೇಲ್!
“ರೋಹಿತ್ ಸಂಕಷ್ಟದಲ್ಲಿದ್ದರು ಎಂಬ ಪದವನ್ನು ನಾನು ಬಳಸುವುದಿಲ್ಲ. ಸಾಮಾನ್ಯವಾಗಿ ಅವರು ಮುಂದೆ ಬಂದು ಆಡುವ ಕೆಲವು ಹೊಡೆತಗಳನ್ನು ಈ ಬಾರಿ ಆಡಲಿಲ್ಲ. ಪಿಚ್‌ನಲ್ಲಿ ಚೆಂಡು ಎರಡು ಬಾರಿ ಬೌನ್ಸ್ ಆಗುತ್ತಿದ್ದ ಕಾರಣ ಅವರಿಗೆ ಅದು ಅಷ್ಟಾಗಿ ಅನುಕೂಲಕರವಾಗಿರಲಿಲ್ಲ ಎಂದು ಭಾವಿಸುತ್ತೇನೆ. ಮತ್ತೊಂದೆಡೆ, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ವೇಗವಾಗಿ ಆಟವನ್ನು ಆರಂಭಿಸಿದರು. ಆದರೆ ರೋಹಿತ್ ಅವರಿಗೆ ತಮ್ಮ ಇಷ್ಟದ ಲೆನ್ತ್‌ನಲ್ಲಿ ಎಸೆತಗಳು ಸಿಗಲಿಲ್ಲ ಅಥವಾ ಅವರು ಲಯ ಕಂಡುಕೊಳ್ಳಲಿಲ್ಲ. ನನ್ನ ಅನಿಸಿಕೆ ಅಷ್ಟೇ. ರೋಹಿತ್ ಅವರಂತಹ ಆಟಗಾರರಿಂದ ಯಾವುದೇ ಕ್ಷಣದಲ್ಲಿ ಸಂಪೂರ್ಣ ವಿಭಿನ್ನ ಇನಿಂಗ್ಸ್ ಬರಬಹುದು. ಇಂತಹ ಸಂದರ್ಭಗಳನ್ನು ನಾನು ಹಲವು ಬ್ಯಾಟರ್‌ಗಳಲ್ಲಿ ನೋಡಿದ್ದೇನೆ. ಆದ್ದರಿಂದ ಅವರು ಸಂಕಷ್ಟದಲ್ಲಿದ್ದರು ಎಂದು ನಾನು ಹೇಳುವುದಿಲ್ಲ,” ಎಂದು ವಿವರಿಸಿದರು.
ಇಂಗ್ಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು 1-1ರಿಂದ ಸಮಬಲ ಸಾಧಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 19ರಂದು ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ.