ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಿಂಚಿತ್ ಅಮಲು ಪದಾರ್ಥ ಬೆರೆಸಿದರೂ ರಾಜ್ಯದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ನಿಷೇಧ: ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

ಮಾದಕ ದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ. ಅದಕ್ಕಾಗಿ ನಾವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮಾದಕ ವ್ಯಸನ ತಡೆಯುವಿಕೆ ದೊಡ್ಡ ಸವಾಲಾಗಿದ್ದು, ನಾವೆಲ್ಲರೂ ಒಂದಾಗಿ ಸೇರಿ, ಯುವ ಪೀಳಿಗೆ ಈ ವ್ಯಸನದ ಸುಳಿಗೆ ಸಿಲುಕದಂತೆ ತಡೆಯೋಣ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕರೆ ನೀಡಿದ್ದಾರೆ.

ಕಿಂಚಿತ್ ಅಮಲು ಪದಾರ್ಥ ಬೆರೆಸಿದರೂ ಪಾನ್ ಮಸಾಲಾ, ಗುಟ್ಕಾ ನಿಷೇಧ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ 31ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌. -

Prabhakara R
Prabhakara R Jun 28, 2026 4:15 PM

ಬೆಂಗಳೂರು, ಜೂ. 28: ಕಿಂಚಿತ್ ಅಮಲು ಪದಾರ್ಥ ಬೆರಕೆ ಮಾಡಿದರೂ ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಮಾರಾಟ ನಿಷೇಧ ಮಾಡುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಣದಲ್ಲಿ ಏರ್ಪಡಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 31 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಪಾನ್ ಮಸಾಲಾ, ಗುಟ್ಕಾ, ಅಡಿಕೆ ಮತ್ತಿತರ ಪದಾರ್ಥಗಳಲ್ಲಿ ಅಮಲು ಬರುವ ವಸ್ತುಗಳನ್ನು ಬೆರಕೆ ಮಾಡಿ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ನಿಜವೇ ಆಗಿದ್ದರೆ, ತಕ್ಷಣ ನಿಲ್ಲದಿದ್ದರೆ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಪದಾರ್ಥಗಳ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾದಕ ದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ

ಮಾದಕ ದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ. ಅದಕ್ಕಾಗಿ ನಾವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಇಂದು ನೀವೆಲ್ಲರೂ ಸೇರಿ ನಶೆ ಮುಕ್ತ ಭಾರತ ಸಮಾವೇಶ ಹಮ್ಮಿಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ನೀವೆಲ್ಲರೂ ಇದರ ರಾಯಭಾರಿಗಳು. ಮಾದಕ ವ್ಯಸನ ತಡೆಯುವಿಕೆ ದೊಡ್ಡ ಸವಾಲಾಗಿದ್ದು, ನಾವೆಲ್ಲರೂ ಒಂದಾಗಿ ಸೇರಿ, ಯುವ ಪೀಳಿಗೆ ಈ ವ್ಯಸನದ ಸುಳಿಗೆ ಸಿಲುಕದಂತೆ ತಡೆಯೋಣ. ಇದು ಎಲ್ಲರ ಕರ್ತವ್ಯವಾಗಿದೆ. ನೀವು ಜೀವ ರಕ್ಷಣೆಯ ವೃತ್ತಿ ಆಯ್ಕೆ ಮಾಡಿಕೊಂಡಿದ್ದು, ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ತಿಳಿಸಿದರು.

ರಾಜೀವ್ ಗಾಂಧಿ ವಿವಿಯನ್ನು ಆರಂಭಿಸಿದ ವೀರಪ್ಪ ಮೊಯ್ಲಿಗೆ ಧನ್ಯವಾದ

"ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದೇಶದಲ್ಲೇ ಅತಿ ದೊಡ್ಡ ಆರೋಗ್ಯ ವಿವಿಯಾಗಿದ್ದು, ಅತಿ ಹೆಚ್ಚು ವೈದ್ಯರನ್ನು ತಯಾರು ಮಾಡಿದೆ. ನಮ್ಮ ರಾಜ್ಯದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಷ್ಟು ಮೆಡಿಕಲ್ ಕಾಲೇಜುಗಳಿಲ್ಲ. ಈ ರಾಜೀವ್ ಗಾಂಧಿ ವಿವಿಯನ್ನು ಆರಂಭಿಸಿದ ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದರು.

ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರಂಗಕ್ಕೆ ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ; ಸಂಸದ ಕ್ಯಾ. ಬ್ರಿಜೇಶ್‌ ಚೌಟ ಪತ್ರಕ್ಕೆ ಮನ್ನಣೆ

ಕರ್ನಾಟಕ ದೇಶದ ವೈದ್ಯಕೀಯ ರಾಜಧಾನಿ

"ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಸಿಗುವಂತೆ ಆಗಬೇಕು. ಬೆಂಗಳೂರಿನ ಹವಾಮಾನ ದೇಶದ ಬೇರೆ ಯಾವುದೇ ಭಾಗದಲ್ಲಿ ಇಲ್ಲ. ಹೀಗಾಗಿ ಇದನ್ನು ಹವಾನಿಯಂತ್ರಿತ ನಗರ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಇರುವಷ್ಟು ಆಸ್ಪತ್ರೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಕರ್ನಾಟಕ ದೇಶದಲ್ಲಿ ವೈದ್ಯಕೀಯ ರಾಜಧಾನಿಯೂ ಆಗಿದೆ. ಈ ವಿವಿ ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಕ್ಯಾಂಪಸ್ ಗೆ ಸ್ಥಳಾಂತರವಾಗಲಿದೆ" ಎಂದು ತಿಳಿಸಿದರು.