ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; ನ್ಯಾಯಮಂಡಳಿ ರಚಿಸಲು ಕೇಂದ್ರಕ್ಕೆ 6 ತಿಂಗಳ ಕಾಲಾವಕಾಶ ಕೊಟ್ಟ ಸುಪ್ರೀಂ ಕೋರ್ಟ್‌

Pennar River Dispute: ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಅಂತಾರಾಜ್ಯ ಜಲ ನ್ಯಾಯಮಂಡಳಿ ರಚಿಸಲು ಆರು ತಿಂಗಳ ಕಾಲಾವಕಾಶ ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪುರಸ್ಕರಿಸಿದೆ.

ಪೆನ್ನಾರ್ ನದಿ ವಿವಾದ; ನ್ಯಾಯಮಂಡಳಿ ರಚನೆಗೆ 6 ತಿಂಗಳ ಕಾಲಾವಕಾಶ

ಪೆನ್ನಾರ್‌ ನದಿ (ಸಂಗ್ರಹ ಚಿತ್ರ) -

Prabhakara R
Prabhakara R May 8, 2026 6:35 PM

ನವದೆಹಲಿ: ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ (Pennar River Dispute) ಬಗೆಹರಿಸಲು ಅಂತಾರಾಜ್ಯ ಜಲ ನ್ಯಾಯಮಂಡಳಿ (inter-State water tribunal) ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆರು ತಿಂಗಳ ಸಮಯಾವಕಾಶ ನೀಡಿದೆ.

ನ್ಯಾಯಮಂಡಳಿ ರಚಿಸಲು ಆರು ತಿಂಗಳ ಕಾಲಾವಕಾಶ ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪುರಸ್ಕರಿಸಿದೆ. ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, ಈ ವಿಷಯದಲ್ಲಿ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ಕಾನೂನುಬದ್ಧ ಮತ್ತು ಕಾರ್ಯವಿಧಾನದ ಅವಶ್ಯಕತೆಗಳನ್ನು ಪೂರೈಸಲು ಸಮಂಜಸವಾದ ಸಮಯ ಬೇಕಾಗುತ್ತದೆ. ಅರ್ಜಿದಾರರು ಈ ನ್ಯಾಯಾಲಯದ ನಿರ್ದೇಶನಗಳನ್ನು ಆದಷ್ಟು ಬೇಗ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಅಂತರ-ಸಚಿವಾಲಯದ ಸಮಾಲೋಚನೆಗಳು ಪೂರ್ಣಗೊಂಡಿರುವುದರಿಂದ, ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಜಲಶಕ್ತಿ ಸಚಿವಾಲಯವು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ತಿಳಿಸಿದೆ. ವಿವಿಧ ಸಚಿವಾಲಯಗಳ ಅಭಿಪ್ರಾಯಗಳು ಸೇರಿಸಿದ ನಂತರ, ಸಂಪುಟ ಕರಡು ಟಿಪ್ಪಣಿಯನ್ನು ಜಲಶಕ್ತಿ ಸಚಿವರು ಅನುಮೋದಿಸಿದ್ದಾರೆ ಮತ್ತು ಕರಡು ಟಿಪ್ಪಣಿಯನ್ನು ಕೇಂದ್ರ ಸಚಿವ ಸಂಪುಟದ ಪರಿಗಣನೆಗೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಅರ್ಜಿಯಲ್ಲಿ ತಿಳಿಸಿದೆ.

ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ, 1956 ರ ಪ್ರಕಾರ ಪೆನ್ನೈಯಾರ್ ವಿವಾದ ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳಿಗೆ ನಾಮನಿರ್ದೇಶನ ಕೋರಿಕೆಯನ್ನು ಸಂಪುಟದ ಅನುಮೋದನೆಯ ನಂತರ ಸೇರಿಸಲಾದ ನಿರ್ದೇಶನಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಉಳಿದ ಪ್ರಕ್ರಿಯೆಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುವುದು ಎಂದು ಕೇಂದ್ರ ಹೇಳಿದೆ.

"ಭಾರತದ ಮುಖ್ಯ ನ್ಯಾಯಮೂರ್ತಿಗಳು ಅಧ್ಯಕ್ಷರು ಮತ್ತು ಸದಸ್ಯರನ್ನು ನಾಮನಿರ್ದೇಶನ ಮಾಡಿದ ನಂತರ, ಕರಡು ಅಧಿಸೂಚನೆಯನ್ನು ಕಾನೂನು ವ್ಯವಹಾರಗಳ ಇಲಾಖೆಯಿಂದ ಸಿದ್ಧಪಡಿಸಿ, ಪರಿಶೀಲಿಸಲಾಗುತ್ತದೆ, ನಂತರ, ನ್ಯಾಯಮಂಡಳಿಯನ್ನು ರಚಿಸುವ ಅಧಿಸೂಚನೆಯನ್ನು ಸೂಚಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಏನಿದು ವಿವಾದ?

ದಕ್ಷಿಣ ಪಿನಾಕಿನಿ (ಪೆನ್ನಾರ್‌) ನದಿ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್‌ನಲ್ಲಿ ಮನವಿ ಮಾಡಿತ್ತು.

ಕರ್ನಾಟಕದಲ್ಲಿ ಚೆಕ್‌ಡ್ಯಾಮ್‌ಗಳು ನಿರ್ಮಿಸಿದರೆ ತಮಿಳುನಾಡಿನ ಉತ್ತರ ಜಿಲ್ಲೆಗಳಾದ ಕೃಷ್ಣಗಿರಿ, ಧರ್ಮಪುರಿ ಮುಂತಾದ ಕಡೆ ಪೆನ್ನಾರ್‌ ನದಿ ನೀರಿನ ಹರಿವು ಕುಂಠಿತವಾಗುತ್ತದೆ ಎಂದು ತಮಿಳುನಾಡು ವಾದಿಸಿತ್ತು. 1892ರ ಮೈಸೂರು-ಮದ್ರಾಸ್ ಒಪ್ಪಂದದ ಪ್ರಕಾರ, ಕರ್ನಾಟಕವು ಕೆಳಭಾಗದ ರಾಜ್ಯದ ಅನುಮತಿಯಿಲ್ಲದೆ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ ಎಂದು ತಮಿಳುನಾಡು ಪ್ರತಿಪಾದಿಸಿತ್ತು. ಆದರೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಈ ಯೋಜನೆಗಳು ಇರುವುದರಿಂದ 1892ರ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಮತ್ತು ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಸುವ ಹಕ್ಕಿದೆ ಎಂದು ಕರ್ನಾಟಕ ಹೇಳಿತ್ತು.

ಜಲಶಕ್ತಿ ಸಚಿವಾಲಯವು 2020ರಲ್ಲಿ ನಡೆಸಿದ್ದ ಸಂಧಾನ ವಿಫಲವಾಗಿತ್ತು. ಹೀಗಾಗಿ ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರಲ್ಲಿ ಒತ್ತಾಯಿಸಿತ್ತು. ನಂತರ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ 9 ಸಭೆಗಳನ್ನು ನಡೆಸಿತ್ತು. ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು.

ಜಲ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.

Raghava Sharma Nidle Column: ಪೆನ್ನಾರ್‌ ಜಲವ್ಯಾಜ್ಯಕ್ಕೆ ನ್ಯಾಯಾಧಿಕರಣ: ಸರಕಾರ, ಸಂಸದರ ವೈಫಲ್ಯ ?

ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ, ಪೆನ್ನಾರ್​ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು 2026ರ ಫೆ.2ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.