ತಿಂಗಳ ಅಂತರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಪ್ರಧಾನಿ ಮೋದಿ; ಮೇ 10ರಂದು ಬೆಂಗಳೂರಿಗೆ ಭೇಟಿ
Narendra Modi: ಕಳೆದ ತಿಂಗಳು ಮಂಡ್ಯ ಜಿಲ್ಲೆಗೆ ಆಗಮಿಸಿ ಆದಿ ಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರಮೈಕ್ಯ ಮಂದಿರವನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ತಿಂಗಳ ಅಂತರದಲ್ಲಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೇ 10ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀ ರವಿಶಂಕರ್ (ಸಂಗ್ರಹ ಚಿತ್ರ) -
ಬೆಂಗಳೂರು, ಮೇ 6: ಏಪ್ರಿಲ್ 15ರಂದು ಮಂಡ್ಯ ಜಿಲ್ಲೆಗೆ ಆಗಮಿಸಿ ಆದಿ ಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರಮೈಕ್ಯ ಮಂದಿರವನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ತಿಂಗಳ ಅಂತರದಲ್ಲಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೇ 10ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ (Art Of Living) ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸದ್ಯ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೆ, ಈ ಸಂಸ್ಥೆಯ ಸಂಸ್ಥಾಪಕ ಗುರುದೇವ ಶ್ರೀ ರವಿಶಂಕರ್ 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಮುದಾಯದ ಯೋಗಕ್ಷೇಮಕ್ಕಾಗಿ ಆಶ್ರಮದ ವತಿಯಿಂದ ಹಲವು ಸೇವಾ ಕಾರ್ಯಕ್ರಮಗಳನ್ನು ಪರಿಚಯಿಸಲಾಗುತ್ತಿದ್ದು, ಇವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ಮೋದಿ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಆಶ್ರಮದ ಆವರಣದಲ್ಲಿ ನಿರ್ಮಿಸಲಾದ ಹೊಸ ಧ್ಯಾನ ಮಂದಿರವನ್ನೂ ಉದ್ಘಾಟಿಸಲಿದ್ದಾರೆ. ಈ ಧ್ಯಾನ ಮಂದಿರವು ಯೋಗ ಮತ್ತು ಧ್ಯಾನ ಅಭ್ಯಾಸಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಎಎನ್‌ಐ ವರದಿ ಇಲ್ಲಿದೆ:
As the Art of Living celebrates its 45th anniversary and Gurudev Sri Sri Ravi Shankar turns 70, Prime Minister Narendra Modi will visit the Art of Living International Centre to offer his wishes and launch various service initiatives: Art of Living
— ANI (@ANI) May 5, 2026
ಆರ್ಟ್ ಆಫ್ ಲಿಂವಿಂಗ್ ಫೌಂಡೇಷನ್ ಕಳೆದ 45 ವರ್ಷಗಳಲ್ಲಿ ಯೋಗ, ಧ್ಯಾನ ಹಾಗೂ ಆಧ್ಯಾತ್ಮಿಕ ಶಿಕ್ಷಣದ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಮಹತ್ವದ ಪಾತ್ರವಹಿಸಿದೆ. 150ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಚಟುವಟಿಕೆಗಳನ್ನು ಸಂಸ್ಥೆ ವಿಸ್ತರಿಸಿದೆ. ಶ್ರೀ ರವಿಶಂಕರ್ ಅವರೊಂದಿಗೆ ಮೋದಿ ಆತ್ಮೀಯ ಸಂಬಂಧ ಹೊಂದಿದ್ದು, ಅವರ ಸಾಮಾಜಿಕ ಸೇವೆಗೆ ಹಲವು ಬಾರಿ ಮೆಚ್ಚುಗೆಯನ್ನೂ ಸೂಚಿಸಿದ್ದರು. ಇದೀಗ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಭಾರತದ ಶ್ರೇಷ್ಠ ಪುತ್ರ ಎಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ವೈರಲ್ ಆಗಿದ್ದ ಮೋದಿ-ಸಿದ್ದರಾಮಯ್ಯ ಫೋಟೊ
ಕಳೆದ ತಿಂಗಳು ಮಂಡ್ಯಕ್ಕೆ ಭೇಟಿ ನೀಡಲು ಬೆಂಗಳೂರಿಗೆ ಬಂದಿಳಿದ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮೀಯವಾಗಿ ಸ್ವಾಗತಿಸಿದ್ದರು. ಆತ್ಮೀಯವಾಗಿ ಸ್ವಾಗತಿಸಿದ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಮೋದಿ ಪಿಸುಗುಟ್ಟಿದ್ದು ಗಮನ ಸೆಳೆದಿತ್ತು. ಪ್ರಧಾನಿ ಮತ್ತು ಮುಖ್ಯಮಂತ್ರಿಯ ಆತ್ಮೀಯ ಸಂಭಾಷಣೆಯ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾಜಕೀಯ ವೈರತ್ವ ಹೊಂದಿರುವ ಇಬ್ಬರು ನಾಯಕರು ನಗು ನಗುತ್ತ ಮಾತನಾಡಿದ್ದು ನೆಟ್ಟಿಗರನ್ನು ಆಕರ್ಷಿಸಿತ್ತು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಪವಿತ್ರ ಕ್ಷೇತ್ರ ಆದಿಚುಂಚನಗಿರಿ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿ ಮೋದಿ ಬಳಿಕ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಅವರು ಕನ್ನಡದಲ್ಲೇ ಮಾತು ಆರಂಭಿಸಿದ್ದು ವಿಶೇಷ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.