Bengaluru Rains: ಬೆಂಗಳೂರಿನ ವಿವಿಧೆಡೆ ಬಿರುಸಿನ ಮಳೆ; ರಸ್ತೆಗಳು ಜಲಾವೃತವಾಗಿ ಭಾರಿ ಸಂಚಾರ ದಟ್ಟಣೆ!
ರಾಜ್ಯದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳು 25ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಮಳೆಯು ಅಬ್ಬರಿಸಲಿದೆ.
ಬೆಂಗಳೂರಿನ ದೇವಾಂಗ ಜಂಕ್ಷನ್ ಬಳಿ ರಸ್ತೆ ಜಲಾವೃತವಾಗಿರುವುದು. -
ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಸಂಜೆ ಮಳೆ (Bengaluru Rains) ಅಬ್ಬರಿಸಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದರು. ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು, ಸಂಜೆಯಾಗುತ್ತಿದ್ದಂತೆ ಭಾರಿ ಮಳೆಯಾಗಿದೆ.
ನಗರದ ಮೆಜೆಸ್ಟಿಕ್, ಕಾರ್ಪೋರೇಷನ್, ಕೆ.ಆರ್. ಮಾರ್ಕೆಟ್, ಯುಬಿ ಸಿಟಿ, ರಿಚ್ಮಂಡ್ ಸರ್ಕಲ್, ಶಿವಾನಂದ ಸರ್ಕಲ್, ಜಯನಗರ ಹಾಗೂ ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ, ಯಲಹಂಕ, ಹೆಬ್ಬಾಳ, ಆರ್‌ಟಿ ನಗರ, ಸಹಕಾರನಗರ, ವಿದ್ಯಾರಣ್ಯಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ, ಮಾಗಡಿ ರಸ್ತೆ, ದಾಸರಹಳ್ಳಿ ಭಾಗದಲ್ಲೂ ಬಿರುಸಿನ ಮಳೆಯಾಗಿದೆ.

ಸಂಜೆ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ವರುಣ ಆರ್ಭಟದಿಂದ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಧಾರಾಕಾರ ಮಳೆಗೆ ಬೆಂಗಳೂರಿನ ತಗ್ಗು ಪ್ರದೇಶಗಳು ಸಂಪೂರ್ಣ ಹೊಳೆಯಂತಾಗಿ ಮಾರ್ಪಟ್ಟಿವೆ. ರಸ್ತೆಗಳ ಮೇಲೆ ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಮಂದಗತಿಯಲ್ಲಿ ಸಾಗಿದೆ. ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ.