Karnataka SIR: ರಾಜ್ಯದಲ್ಲಿ ನಾಳೆಯಿಂದ ಎಸ್‌ಐಆರ್ ಶುರು; ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
How to fill SIR Enumeration Form: ರಾಜ್ಯದಲ್ಲಿ ಸದ್ಯ ಒಟ್ಟು 5,54,32,314 (5.54 ಕೋಟಿಗೂ ಹೆಚ್ಚು) ಮತದಾರರಿದ್ದಾರೆ. ಈ ಎಲ್ಲಾ ಮತದಾರರು ಈ ಬಾರಿ ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡಲಿದ್ದಾರೆ. ಈ ವಿಶೇಷ ಪರಿಷ್ಕರಣೆಯ ಅಂಗವಾಗಿ ನಿಯೋಜನೆಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು ನಾಳೆಯಿಂದ ಜುಲೈ 29ರವರೆಗೆ ಮನೆ-ಮನೆಗೆ ಖುದ್ದಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಿದ್ದಾರೆ.
-
ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ (ಜೂ.30) ಜುಲೈ 29ರವರೆಗೆ ‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಅರ್) ಪ್ರಕ್ರಿಯೆ ನಡೆಯಲಿದೆ. ಈ ವಿಶೇಷ ಪರಿಷ್ಕರಣೆಯ ಅಂಗವಾಗಿ ನಿಯೋಜನೆಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ-ಮನೆಗೆ ಖುದ್ದಾಗಿ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಿಸಲಿದ್ದು, ಮತದಾರರು ಅಗತ್ಯ ಮಾಹಿತಿ ಭರ್ತಿ ಮಾಡಿ, ಬಿಎಲ್‌ಒಗಳಿಗೆ ನೀಡಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ, ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಮತದಾನದ ಹಕ್ಕು ಉಳಿಸಿಕೊಳ್ಳಲು ಪ್ರತಿಯೊಬ್ಬ ಮತದಾರ, 'ಎನ್ಯುಮರೇಷನ್ ಫಾರ್ಮ್' ಅನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಈ ಎನ್ಯುಮರೇಷನ್ ಫಾರ್ಮ್ (ಗಣತಿ ನಮೂನೆ) ಅನ್ನು ಭರ್ತಿ ಮಾಡುವುದು ಹೇಗೆ? ಎಂಬ ಕುರಿತು ಹಂತ-ಹಂತವಾದ ಮಾಹಿತಿ ಇಲ್ಲಿದೆ.
ಹಂತ -1
ಮೊದಲ ಭಾಗದಲ್ಲಿ ಮತದಾರರ ವಿಳಾಸ, ಹೆಸರು, ಭಾವಚಿತ್ರ, ಮೊಬೈಲ್ ಸಂಖ್ಯೆ, ಎಪಿಕ್ ಸಂಖ್ಯೆ, ಮತಗಟ್ಟೆಯ ವಿಳಾಸವಿರುತ್ತದೆ. ಒಂದು ವೇಳೆ ನಿಮ್ಮ ಭಾವಚಿತ್ರ ಹಳೆಯದಾಗಿದ್ದರೆ, ಅಸ್ಪಷ್ಟವಾಗಿದ್ದರೆ, ಹೊಸ ಭಾವಚಿತ್ರವನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ಹಳೆಯ ಭಾವಚಿತ್ರ ಸರಿಯಾಗಿದ್ದರೆ, ಹೊಸ ಭಾವಚಿತ್ರ ನೀಡದೆಯೇ ಮುಂದುವರಿಯಬಹುದು.
ಹಂತ - 2
2002ರ ಸಾಲಿನ ಮತದಾರರ ಪಟ್ಟಿಯಲ್ಲಿರುವಂತೆ, ಕೇಳಲಾದ ದಾಖಲೆಗಳನ್ನು ಭರ್ತಿ ಮಾಡಬೇಕು. 2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಣಿಯಾಗಿದ್ದರೆ, ಮಾತ್ರ ಮೊದಲ ಪಟ್ಟಿಯಲ್ಲಿ ನಿಮ್ಮ ಮಾಹಿತಿ ಭರ್ತಿ ಮಾಡಬೇಕು.
ಒಂದು ವೇಳೆ 2002ರಲ್ಲಿ ಮತದಾನ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಣಿಯಾಗದಿದ್ದರೆ, 2 ನೇ ಭಾಗದಲ್ಲಿ ನಿಮ್ಮ ಮನೆಯ ಸದಸ್ಯರ ವಿವರವನ್ನು ಭರ್ತಿ ಮಾಡಬೇಕು.
(2002 ರ ಮತದಾನದ ಪಟ್ಟಿಯ ವಿವರಗಳು ನಿಮ್ಮ ಮತಗಟ್ಟೆಯ ಅಧಿಕಾರಿಗಳ ಬಳಿ ಲಭ್ಯವಿರುತ್ತದೆ. ಅಥವಾ ಮುಖ್ಯ ಚುನಾವಣಾಧಿಕಾರಿಯವರ ಅಧಿಕೃತ ಜಾಲತಾಣ 'ceo.karnataka.gov.in' ನಲ್ಲಿ ನಿಮ್ಮ ಮಾಹಿತಿ ಲಭ್ಯವಿರುತ್ತದೆ.)
ಹಂತ 3
ಇದರಲ್ಲಿ ನಿಮ್ಮ ಪ್ರಸ್ತುತ ವಿವರಗಳನ್ನು ನಮೂದಿಸಬೇಕು. ಜನ್ಮ ದಿನಾಂಕವನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಆದರೆ ಮೊಬೈಲ್ ಸಂಖ್ಯೆ ಮತ್ತು ಅಧಾರ್ ಸಂಖ್ಯೆ ನಮೂದಿಸುವುದು ಐಚ್ಛಿಕವಾಗಿರುತ್ತದೆ. ಪೋಷಕರು ಅಥವಾ ಮದುವೆಯಾಗಿದ್ದರೆ, ಗಂಡ ಹೆಂಡತಿಯ ಹೆಸರು ನಮೂದಿಸಿ. ಅವರ ವೋಟರ್ ಐಡಿ ಸಂಖ್ಯೆ ಇದ್ದರೆ ನಮೂದಿಸಬಹುದು.
ಹಂತ 4
ನಮೂದಿಸಿರುವ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ ಸಹಿ ಹಾಕಿ ಅಥವಾ ಹೆಬ್ಬೆರಳಿನ ಗುರುತು ನೀಡಿ. (ನಿಮ್ಮ ಪರವಾಗಿ ನಿಮ್ಮ ಕುಟುಂಬದ ಯಾರಾದರೂ ವಯಸ್ಕ ಸದಸ್ಯರು ನಿಮ್ಮ ಸಂಬಂಧವನ್ನು ನಮೂದಿಸಿ ಸಹಿ ಮಾಡಬಹುದು)
Here is a step-by-step video guide on filling the Enumeration Form for SIR 2026, available in both Kannada and English.#SIR2026#EnumerationForms@ECISVEEP pic.twitter.com/pLMXvl9Qmz
— Chief Electoral Officer, Karnataka (@ceo_karnataka) June 22, 2026
ಭರ್ತಿಯಾದ ಫಾರ್ಮ್ ಅನ್ನು ನಿಮ್ಮ ಸ್ಥಳೀಯ ಮಟ್ಟದ ಮತಗಟ್ಟೆಯ ಅಧಿಕಾರಿಗೆ ನೀಡಬೇಕು. ಅವರು ಅಧಿಕೃತವಾಗಿ ಸಹಿ ಮಾಡುತ್ತಾರೆ. ಬಳಿಕ ದಾಖಲೆಗಾಗಿ ಒಂದು ಫಾರ್ಮ್ ಪ್ರತಿ ಅವರ ಬಳಿ ಇಟ್ಟುಕೊಂಡು, ಮತ್ತೊಂದು ಪ್ರತಿಯನ್ನು ನಿಮಗೆ ನೀಡುತ್ತಾರೆ.
(ವಿಶೇಷ ಸೂಚನೆ: ಎನ್ಯುಮರೇಷನ್ ಫಾರ್ಮ್ ಜೊತೆಗೆ ಯಾವುದೇ ದಾಖಲೆ ಒದಗಿಸುವಂತಿಲ್ಲ.)
ಎಸ್‌ಐಆರ್ ಪ್ರಮುಖ ದಿನಾಂಕಗಳು:
- ಜೂನ್ 30-ಜುಲೈ 29: ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ
- ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ
- ಆಗಸ್ಟ್ 5- ಸೆಪ್ಟೆಂಬರ್ 4: ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಕೆ
- ಆಗಸ್ಟ್ 5 -ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ
- ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟ