ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SIR ಅಲೆ: ಕಮಲ, ತೆನೆ ತರಗೆಲೆ

ಎಸ್‌ಐಆರ್ ಪ್ರಕ್ರಿಯೆಯಿಂದಲೇ ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಭಾರೀ ಬಹುಮತ ಬಂದು ಅಲ್ಲಿನ ಸರಕಾರಗಳನ್ನು ಬೀಳಿಸಿ ಬಿಜೆಪಿ ತನ್ನದೇ ಆದ ಸರಕಾರ ರಚಿಸಿದೆ. ಆದರೆ ಕೇಂದ್ರದ ಈ ನಡೆಯನ್ನು ರಾಷ್ಟ್ರೀಯ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಎಸ್‌ಐಆರ್ ಅನ್ನು ವಿರೋಧಿಸಿತ್ತು. ಈಗ ಇದರ ಲಾಭವನ್ನು ರಾಜ್ಯ ಕಾಂಗ್ರೆಸ್ ಪಡೆದುಕೊಳ್ಳುತ್ತಿದ್ದು, ರಾಜ್ಯ ಬಿಜೆಪಿ ಇನ್ನೂ ಎಚ್ಚೆತ್ತು ಕೊಂಡಿಲ್ಲ ದಿರುವುದು ಕೇಂದ್ರದ ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿದೆ.

SIR ಅಲೆ: ಕಮಲ, ತೆನೆ ತರಗೆಲೆ

-

Profile
Ashok Nayak Jul 5, 2026 9:11 AM

ಕಾರ‍್ಯಕರ್ತರಲ್ಲಿ ಗೊಂದಲ, ಕಾಂಗ್ರೆಸ್ ಸಿದ್ದತೆ ಮುಂದೆ ಮಂಕಾದ ಪ್ರತಿಪಕ್ಷ

ಮತದಾನ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಸಂದರ್ಭದಲ್ಲೇ ರಾಜ್ಯ ಬಿಜೆಪಿ ಸುಖ ನಿದ್ದೆ ಯಿಂದ ಎದ್ದಂತಿದ್ದು, ಜೆಡಿಎಸ್ ಕುಂಭಕರ್ಣ ನಿದ್ದೆಯಲ್ಲಿದೆ. ಅತ್ತ ಮೊದಲೇ ಯೋಜಿಸಿದಂತೆ ಕಾಂಗ್ರೆಸ್ ತನ್ನ ಬುಟ್ಟಿಗೆ ಮತ್ತಷ್ಟು ಮತಗಳನ್ನು ಸೇರಿಸಿಕೊಂಡು ವಿರೋಧ ಪಕ್ಷಗಳಿಗಿಂತ ಭಾರೀ ಮುಂದೆ ಕಾರ್ಯಾರಂಭ ಮಾಡಿದೆ.

ಎಸ್‌ಐಆರ್ ಪ್ರಕ್ರಿಯೆಯಿಂದಲೇ ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಭಾರೀ ಬಹುಮತ ಬಂದು ಅಲ್ಲಿನ ಸರಕಾರಗಳನ್ನು ಬೀಳಿಸಿ ಬಿಜೆಪಿ ತನ್ನದೇ ಆದ ಸರಕಾರ ರಚಿಸಿದೆ. ಆದರೆ ಕೇಂದ್ರದ ಈ ನಡೆಯನ್ನು ರಾಷ್ಟ್ರೀಯ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಎಸ್‌ಐಆರ್ ಅನ್ನು ವಿರೋಧಿಸಿತ್ತು. ಈಗ ಇದರ ಲಾಭವನ್ನು ರಾಜ್ಯ ಕಾಂಗ್ರೆಸ್ ಪಡೆದುಕೊಳ್ಳುತ್ತಿದ್ದು, ರಾಜ್ಯ ಬಿಜೆಪಿ ಇನ್ನೂ ಎಚ್ಚೆತ್ತು ಕೊಂಡಿಲ್ಲದಿರುವುದು ಕೇಂದ್ರದ ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿದೆ.

ಎಸ್‌ಐಆರ್ ಸಂಬಂಧಿಸಿದಂತೆ ಕಾಂಗ್ರೆಸ್ ಈ ಮೊದಲೇ ತನ್ನ ಕಾರ್ಯಕರ್ತರಿಗೆ ಬಹು ವಿಧದ ತರಬೇತಿಯನ್ನು ನೀಡಿತ್ತು. ಅಲ್ಲದೆ, ಗ್ಯಾರಂಟಿ ಅನುಷ್ಠಾನ ಸಮಿತಿಗೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಕ್ಷದ ಮತದಾರರಿಗೆ ಸಹಕರಿಸುವಂತೆ ಮೊದಲೇ ತಿಳಿಸಲಾಗಿತ್ತು. ಹೀಗಾಗಿ ಈಗ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಕಾಂಗ್ರೆಸ್ʼಗೆ ಅನುಕೂಲವಾಗಿದೆ.

ಇದನ್ನೂ ಓದಿ: BJP-JDS alliance: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ

ಎಸ್‌ಐಆರ್ ಸಂಬಂಧ ಪ್ರತಿ ವಾರ್ಡ್, ಪ್ರತಿ ಬಿಎಲಒಗಳ ಜತೆಯಲ್ಲಿ ಕಾಂಗ್ರೆಸ್‌ನ ಎರಡು ಮೂರು ಜನ ಕಾರ್ಯಕರ್ತರು ಇದ್ದು, ಪ್ರತಿ ಮನೆಯಲ್ಲೂ ಒಂದು ಮತವೂ ಕೈಬಿಟ್ಟು ಹೋಗದ ಹಾಗೆ, ಜನರಿಗೆ ಎನ್ಯುಮರೇಶನ್ ಫಾರ್ಮ್ ಕೊಡಿಸಿ, ಈ ಏರಿಯಾದಲ್ಲಿ ಈಗ ವಾಸಿಸುತ್ತಿಲ್ಲದ, ಬೇರೆ ಏರಿಯಾಗೆ ಮನೆ ಬದಲಿಸಿಕೊಂಡಿರುವವರನ್ನೂ ಕರೆಸಿ ಅವರಿಗೂ ಎನ್ಯುಮರೇಶನ್ ಫಾರ್ಮ್ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ.

ಆದರೆ, ಬಿಎಲ್ಒಗಳ ಜತೆಗೆ ಬಿಜೆಪಿಯ ಕಾರ್ಯಕರ್ತರು ಅಲ್ಲಲ್ಲಿ ಕಂಡು ಬರುತ್ತಿದ್ದರೂ, ಇವರಿಗೆ ಮತದಾರರ ಬಗ್ಗೆ ಮಾಹಿತಿಯೂ ಇಲ್ಲ.‌ ಅವರು ಸಕ್ರಿಯವಾಗಿ ಇದರಲ್ಲಿ ಭಾಗವಹಿಸುತ್ತಲೂ ಇಲ್ಲ. ಈ ಬಗ್ಗೆ ಪಕ್ಷದಿಂದ ಅವರಿಗೆ ಯಾವುದೇ ತಿಳಿವಳಿಕೆ, ಮಾಹಿತಿ, ತರಬೇತಿ ಏನನ್ನೂ ನೀಡಿದಂತಿಲ್ಲ. ರಾಜ್ಯಾಧ್ಯಕ್ಷರ ಹುದ್ದೆಯೂ ಸೇರಿದಂತೆ ನಿರಂತರ ಕಚ್ಚಾಟಗಳಲ್ಲೇ ಮುಳುಗಿದ್ದ ಪಕ್ಷ ನಾಯಕರು, ತಮ್ಮ ಪ್ರಕೋಷ್ಠ, ಇಲ್ಲವೇ ಇನ್ನಿತರ ಕಾರ್ಯಕ್ರಮಗಳ ಮೂಲಕ ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಮಾಡಿದ್ದರೂ ಕಾರ್ಯಕರ್ತರು ಪ್ರಕ್ರಿಯೆಯಲ್ಲಿ ಕಾಣಿಸಿ ಕೊಂಡಿಲ್ಲ.

ರಾಜ್ಯದ ಬಿಜೆಪಿ ಮುಖಂಡರು ಎಸ್‌ಐಆರ್ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬಂದ ಘಟನಾವಳಿಗಳ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆಯೇ ಹೊರತು ಎಸ್ ಐಆರ್‌ನಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದರ ಕುರಿತು ಸಂಪುರ್ಣ ಮಾಹಿತಿ ಇದ್ದಂತಿಲ್ಲ.

ಮತದಾನ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಪ್ರಕ್ರಿಯೆ ಕೈಗೊಂಡಿದ್ದರೂ ಪ್ರಜಾಪ್ರಭುತ್ವದ ಅಡಿಪಾಯ ಮೈದಾನ ಮಟ್ಟದಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳು ಆಯಾ ತರಬೇತಿಯ ಕೊರತೆ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಮೇಲಿರುವ ನಂಬಿಕೆ ಅಲುಗಾಡಿಸುತ್ತಿವೆ.

ಪ್ರಜಾ ಮಹೋತ್ಸವಕ್ಕೆ ಮತದಾರರ ಪಟ್ಟಿಯೇ ಬುನಾದಿ. ಈ ಬುನಾದಿಯಲ್ಲಿ ಏರುಪೇರಾದರೆ, ಭವಿಷ್ಯದ ಚುನಾವಣೆಗಳ ವಿಶ್ವಾಸ ಮಣ್ಣುಪಾಲಾಗಲಿದೆ. ಆಯೋಗ ಕಾಲಹರಣ ಮಾಡದೆ ತಕ್ಷಣ ಎಚ್ಚೆತ್ತುಕೊಂಡು ವ್ಯವಸ್ಥೆ ಸರಿಪಡಿಸಬೇಕು ಎಂಬುದು ಮತ್ತು ಜೆಡಿಎಸ್ ನಾಯಕರ ಆಗ್ರಹ ವಾಗಿದ್ದರೂ, ಪಕ್ಷದ ಕಾರ್ಯಕರ್ತರಿಗೆ ಈ ಬಗ್ಗೆ ಅರಿವು ಮೂಡಿಸುವ ಒಂದಿನಿತೂ ತರಬೇತಿ ಯಾಗಲಿ, ಕಾರ್ಯಕ್ರಮವಾಗಲಿ ನಡೆದಿಲ್ಲ. ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿಯೂ ಇಲ್ಲದಂತಾಗಿದೆ.

ಕಾರ್ಯಕರ್ತರಿಂದಲೇ ಟ್ರೋಲ್

ಬಿಜೆಪಿಯಲ್ಲಿನ ಬಣ ಬಡಿದಾಟದಿಂದ ಎಸ್‌ಐಆರ್ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ‘ಚಕಾರ ವೆತ್ತದ ಬಿಜೆಪಿ ಶಾಸಕರು, ಟ್ರೋಲ್‌ನಲ್ಲಿ ಮಗ್ನ ಬಿಜೆಪಿ ಕಾರ್ಯಕರ್ತರು’ ಎಂದು ಪಕ್ಷದ ಕಟ್ಟಾ ಅನುಯಾಯಿಗಳಿಂದ ಅಣಕ ಆರಂಭವಾಗಿದೆ. ‘ಸುಖ ನಿದ್ದೆಯಲ್ಲಿರುವ ನಮ್ಮ ನಾಯಕರು’ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಕೆಣಕಿದರೆ, ಮತ್ತೆ ಹಲವರು ನಮ್ಮ ಬಿಜೆಪಿಯ ಶಾಸಕರು, ಸಂಸದರನ್ನು ಹುಡುಕಿ ಕೊಟ್ಟವರಿಗೆ ಅಲ್ಲಿಯೇ ಈ ಪುಸ್ತಕ ಬಹುಮಾನವಾಗಿ ಕೊಡಲಾಗುವುದು ಎಂದು ಲೇವಡಿ ಮಾಡುತ್ತಿದ್ದಾರೆ. ಜೆಡಿಎಸ್‌ನ ಮತದಾರರಿಗೆ ಮಾಹಿತಿ ನೀಡುವವರೇ ಇಲ್ಲಂದಂತಾಗಿದೆ.