Munirathna: ಶಾಸಕ ಮುನಿರತ್ನರಿಂದ ಅತ್ಯಾಚಾರ ಯತ್ನ, ಏಡ್ಸ್ ಹರಡಲು ಯತ್ನ: ಎಸ್‌ಐಟಿ ಚಾರ್ಜ್‌ಶೀಟ್
Munirathna: ಶಾಸಕ ಮುನಿರತ್ನರಿಂದ ಅತ್ಯಾಚಾರ ಯತ್ನ, ಏಡ್ಸ್ ಹರಡಲು ಯತ್ನ: ಎಸ್‌ಐಟಿ ಚಾರ್ಜ್‌ಶೀಟ್
ಹರೀಶ್ ಕೇರ
December 28, 2024
ಬೆಂಗಳೂರು: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ (Munirathna) ಲೈಂಗಿಕ ಕಿರುಕುಳ (Physical Abuse) ನೀಡಿರುವುದು ಹಾಗೂ ಹೆಚ್ಐವಿ ಪೀಡಿತರನ್ನು ಬಳಸಿ ವಿರೋಧಿಗಳಿಗೆ ಏಡ್ಸ್ ಹರಡಲು ಯತ್ನಿಸಿದ್ದು ನಿಜ ಎಂದು ಎಸ್ಐಟಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (Charge sheet) ಸಲ್ಲಿಸಿದೆ. ಇದರೊಂದಿಗೆ ಮುನಿರತ್ನ ಅವರ ಸಂಕಷ್ಟ ಬಿಗಡಾಯಿಸಿದೆ.
ಮುನಿರತ್ನ ಅವರಿಂದ ನಿರಂತರ ಅತ್ಯಾಚಾರ, ಅಪಾಯಕಾರಿ ರೋಗ ಹರಡುವಿಕೆ ಸೆಕ್ಷನ್ ಅಡಿ ಎಸ್‌ಐಟಿ ಕೇಸ್ ದಾಖಲಿಸಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವ ಎಸ್ಐಟಿ ಅಧಿಕಾರಿಗಳು, ಅದರಲ್ಲಿ ಐಪಿಸಿ 270ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಇನ್ನೂ ಐಪಿಸಿ 354ಎ ಲೈಂಕಿಕ ಕಿರುಕುಳ, 354ಸಿ ಅನುಮತಿ ಇಲ್ಲದೇ ಮಹಿಳೆಯ ಅಶ್ಲೀಲ ದೃಶ್ಯಾವಳಿ ಚಿತ್ರೀಕರಣ, 376(2) ಎನ್ ನಿರಂತರ ಅತ್ಯಾಚಾರ, 308 ಸಂತ್ರಸ್ತೆಯ ಕೊಲ್ಲುವ ಉದ್ದೇಶ, 120ಬಿ ಅಪರಾಧಿಕ ಸಂಚು, 504 ಉದ್ದೇಶ ಪೂರ್ವಕ ಅವಮಾನ, 506 ಜೀವ ಬೆದರಿಕೆ, 270 ಅಪಾಯಕಾರಿ ರೋಗ ಹರಡುವಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೇರಿದಂತೆ ಇತರೆ ಕಾಯ್ದೆಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
ಸೆಪ್ಟೆಂಬರ್ ನಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಗೆ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದರು. ತನ್ನ ಮೇಲೆ ಶಾಸಕ ಮುನಿರತ್ನ, ಸಹಚರರು ಅತ್ಯಾಚಾರ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ರಾಮನಗರ ಪೊಲೀಸರು ಮುನಿರತ್ನ ಅವರನ್ನು ಕೋಲಾರದ ಬಳಿ ಬಂಧಿಸಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿತ್ತು.
ಇತ್ತೀಚೆಗೆ ಮುನಿರತ್ನ ಅವರ ತಲೆಗೆ ಮೊಟ್ಟೆ ಎಸೆಯಲಾಗಿತ್ತು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಇದರ ಕುರಿತು ಮುನಿರತ್ನ 150ಕ್ಕೂ ಅಧಿಕ ಮಂದಿಯ ಮೇಲೆ ದೂರು ನೀಡಿದ್ದಾರೆ.