ಸ್ಮೃತಿ ಕನೆಕ್ಟ್ ವಿತ್ ಅಚೀವರ್ಸ್ ಕಾರ್ಯಕ್ರಮ; ಮಕ್ಕಳಿಗೆ ಜೀವನದ ಕುರಿತು ಉಪನ್ಯಾಸ ನೀಡಿದ ಸಂಗಮೇಶ್ ಉಪಾಸೆ
ವಿದ್ಯಾರ್ಥಿಗಳು ಕೇವಲ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಎಂಬುದಿಲ್ಲ. ಅವರು ಶ್ರಮಪಟ್ಟರೆ ತಮ್ಮ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಅನೇಕ ಅವಕಾಶಗಳು ಲಭ್ಯವಿವೆ. ಸಿನಿಮಾ, ಕಿರುತೆರೆ, ಯೂಟ್ಯೂಬ್, ಮಾಧ್ಯಮ, ಕ್ರೀಡೆ, ಸ್ವಂತ ಉದ್ಯಮ ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ಅಪಾರ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದು ಲೇಖಕ ಹಾಗೂ ಕೆಎಎಸ್ ಅಧಿಕಾರಿ ಸಂಗಮೇಶ್ ಉಪಾಸೆ ಹೇಳಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ವಿದ್ಯಾರ್ಥಿಗಳು ಕೇವಲ ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಎಂಬುದಿಲ್ಲ. ಅವರು ಶ್ರಮಪಟ್ಟರೆ ತಮ್ಮ (Sangamesh Upase) ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಅನೇಕ ಅವಕಾಶಗಳು ಲಭ್ಯವಿವೆ. ಸಿನಿಮಾ, ಕಿರುತೆರೆ, ಯೂಟ್ಯೂಬ್, ಮಾಧ್ಯಮ, ಕ್ರೀಡೆ, ಸ್ವಂತ ಉದ್ಯಮ ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ಅಪಾರ ಯಶಸ್ಸು ಸಾಧಿಸಲು ಸಾಧ್ಯವಿದೆ. ಯಾವುದೇ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗುತ್ತದೆ ಎಂದು ಖ್ಯಾತ ನಟ, ನಿರ್ದೇಶಕ, ಲೇಖಕ ಹಾಗೂ ಕೆಎಎಸ್ ಅಧಿಕಾರಿ ಸಂಗಮೇಶ್ ಉಪಾಸೆ ಹೇಳಿದರು. ಶನಿವಾರ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹುಸ್ಕೂರಿನ ಸ್ಮೃತಿ ಅಕಾಡೆಮಿ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ್ದ ‘ಸ್ಮೃತಿ ಕನೆಕ್ಟ್ ವಿತ್ ಅಚೀವರ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳು ಕೆಎಎಸ್ ಹಾಗೂ ಐಎಎಸ್ ಅಧಿಕಾರಿಗಳಾಗಬಹುದು. ಆದರೆ ಅದಕ್ಕಾಗಿ ಕಠಿಣ ಅಧ್ಯಯನ ಅಗತ್ಯ. ದಿನಕ್ಕೆ ಎಂಟು ಗಂಟೆ ಓದುತ್ತಿರುವವರು ಹದಿನಾರು ಗಂಟೆ ಓದಲು ಸಿದ್ಧರಾಗಬೇಕು. ಆ ರೀತಿಯಲ್ಲಿ ಓದಿದರೆ ಕೆಎಎಸ್, ಐಎಎಸ್ ಕನಸನ್ನು ನನಸು ಮಾಡಬಹುದು. ನಿಮ್ಮ ಪರಿಸ್ಥಿತಿ ಏನೇ ಇರಲಿ, ಧೈರ್ಯ, ಸಮರ್ಪಣೆ, ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಓದಿದರೆ ಯಶಸ್ಸು ಖಚಿತ. ನಾನು ಕೂಡ ನಿಮ್ಮಂತೆಯೇ ಬಾಲ್ಯದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಬೆಳೆದವನು. ನಾನು ಸಾಮಾನ್ಯ ಗ್ರಾಮೀಣ ರೈತ ಕುಟುಂಬದಿಂದ ಬಂದಿದ್ದೇನೆ. ಚಿಕ್ಕವಯಸ್ಸಿನಲ್ಲಿ ಧರಿಸಲು ಸಾಕಷ್ಟು ಬಟ್ಟೆಯೂ ಇರಲಿಲ್ಲ. ಶಾಲೆಗೆ ಹೋಗಲು ಹದಿನೈದು ಕಿಲೋಮೀಟರ್‌ಗಿಂತ ಹೆಚ್ಚು ನಡೆದು ಹೋಗಬೇಕಾಗುತ್ತಿತ್ತು. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡಿದ್ದೇನೆ. ಜೊತೆಗೆ ನಾಟಕ, ಕಲೆ ಮತ್ತು ಸಾಹಿತ್ಯದ ಮೇಲೂ ಆಸಕ್ತಿ ಇತ್ತು. ಇವೆಲ್ಲವೂ ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಯಿತು,” ಎಂದು ಹೇಳಿದ್ದಾರೆ.
ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿರಬೇಕು. ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸಾಧನೆ ಮಾಡಲು ಗುರಿ ಹೊಂದಿರಬೇಕು. ಶಿಕ್ಷಕರ ಮಾರ್ಗದರ್ಶನವನ್ನು ತಪ್ಪದೇ ಅನುಸರಿಸಬೇಕು. ಪೋಷಕರು ಹಾಗೂ ಹಿರಿಯರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಕುತೂಹಲಭರಿತ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಕಾರ್ಯಕ್ರಮದಲ್ಲಿ ಸ್ಮೃತಿ ಅಕಾಡೆಮಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ. ಅಮುದಾ ಸಿ. ಮುನಿರಾಜ್, ಸಹ ಸಂಸ್ಥಾಪಕರಾದ ರವಿ ರಾಮಚಂದ್ರ ಹಾಗೂ ಸಂಯೋಜಕಿ ಮೇಘಲಾ ದೇವಿ ಬಾಲಮುರುಗನ್ ಉಪಸ್ಥಿತರಿದ್ದರು.