ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka CET Exam 2026: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ಸಚಿವ ಎಂ.ಸಿ.ಸುಧಾಕರ್‌

Janivara Row: ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ. ಈ ವಿಷಯ ಇನ್ನೂ ಕೆಇಎ ಗಮನಕ್ಕೆ ಬಂದಿಲ್ಲ. ಆ ರೀತಿ ಏನಾದರೂ ಸಂಭವಿಸಿದ್ದರೆ ವರದಿ ಕೇಳಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಎಂದ ಸಚಿವ

ಸಚಿವ ಎಂ.ಸಿ. ಸುಧಾಕರ್‌ -

Prabhakara R
Prabhakara R Apr 24, 2026 4:23 PM

ಬೆಂಗಳೂರು: ಸಿಇಟಿ ಪರೀಕ್ಷೆ (Karnataka CET Exam 2026) ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಘಟನೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ (Janivara) ತೆಗೆಸಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು, ಈ ವಿಷಯ ಇನ್ನೂ ಕೆಇಎ ಗಮನಕ್ಕೆ ಬಂದಿಲ್ಲ. ಆ ರೀತಿ ಏನಾದರೂ ಸಂಭವಿಸಿದ್ದರೆ ವರದಿ ಕೇಳಲಾಗುತ್ತದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪರೀಕ್ಷಾ ವಸ್ತ್ರಸಂಹಿತೆಯ ಬಗ್ಗೆ ಈಗಾಗಲೇ ವೆಬ್‌ಸೈಟ್ ಮೂಲಕ ಮಾಹಿತಿ ನೀಡಲಾಗಿದೆ. ಕೃಪಾನಿಧಿ ಕಾಲೇಜಿನಲ್ಲಿ ನಡೆದ ಘಟನೆ ಕೆಇಎ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಂಪೂರ್ಣ ವರದಿ ಪಡೆದು ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಏನಿದು ಘಟನೆ?

ಗುರುವಾರ (ಏ.23) ನಡೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಜನಿವಾರವನ್ನು ತೆಗೆಯುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಸೂಚಿಸಿದ್ದಾರೆ. ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಜನಿವಾರ ತೆಗೆಯದಿದ್ದರೆ ಮನೆಗೆ ವಾಪಸ್ ಹೋಗಿ ಎಂದು ಸಿಬ್ಬಂದಿ ಕಟ್ಟುನಿಟ್ಟಾಗಿ ಹೇಳಿದ್ದರು ಎನ್ನಲಾಗಿದೆ. ಅಂತಿಮವಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಅನಿವಾರ್ಯವಾಗಿ ಜನಿವಾರ ತೆಗೆಸಿ ಪರೀಕ್ಷೆಗೆ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕಾಲೇಜಿಗೆ ತಹಸೀಲ್ದಾರ್, ಶಿಕ್ಷಣಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾಲೇಜು ಆಡಳಿತ ಮಂಡಳಿಯು ಪೋಷಕರ ಮನವೊಲಿಸಿ, ಘಟನೆಯ ಬಗ್ಗೆ ಎಲ್ಲಿಯೂ ಹೇಳಿಕೆ ನೀಡದಂತೆ ಪತ್ರ ಬರೆಯಿಸಿಕೊಂಡು ಪ್ರಕರಣವನ್ನು ಹತ್ತಿಕ್ಕಲು ಪ್ರಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಇಂದು (ಶುಕ್ರವಾರ) ಕಾಲೇಜು ಸಿಬ್ಬಂದಿ ಪೋಷಕರ ಕ್ಷಮೆಯಾಚಿಸಿದ್ದು, ಜನಿವಾರ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ.

ಕಳೆದ ವರ್ಷ ಬೀದರ್ ಜಿಲ್ಲೆಯ ಸುಚಿವ್ರತ್ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಜನಿವಾರದ ಕಾರಣಕ್ಕೆ ಗಣಿತ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿತ್ತು. ಆ ಘಟನೆಯ ನಂತರ ಪರೀಕ್ಷಾ ಪ್ರಾಧಿಕಾರವು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿತ್ತು. ಆದರೂ, ಈ ವರ್ಷ ಮತ್ತೆ ಬೆಂಗಳೂರಿನಲ್ಲಿ ಇಂತಹ ಘಟನೆ ನಡೆದಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.

CET Exam: ಸಿಇಟಿ ಪರೀಕ್ಷೆಯಲ್ಲಿ ಮತ್ತೆ ಅಭ್ಯರ್ಥಿಯ ಜನಿವಾರ ತೆಗೆಸಿದ ಸಿಬ್ಬಂದಿ!

ಪೋಷಕರಿಂದ ದೂರು

ಕೃಪಾನಿಧಿ ಕಾಲೇಜಿನಲ್ಲಿ ವಿದ್ಯಾರ್ಥಿ ಅನಿವೃದ್ಧ ರಾವ್ ಜನಿವಾರ ತೆಗೆಸಿದ ಹಿನ್ನೆಲೆ ನೊಂದ ಪೋಷಕರು,, ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗನಿಗೆ ಜನಿವಾರ ತೆಗೆಸಿದ ರೀತಿ ಹಲವು ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ. ಈ ಕಾಲೇಜಿನಲ್ಲಿ ಇಂಥ ಹಲವು ಘಟನೆಗಳು ನಡೆದಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ವಿದ್ಯಾರ್ಥಿ ತಂದೆ ರಘು ಆಗ್ರಹಿಸಿದ್ದಾರೆ.