Telangana Rising Global Summit-2025: ಹೈದರಾಬಾದ್, ಬೆಂಗಳೂರು ಪರಸ್ಪರ ಸ್ಪರ್ಧಿಗಳಲ್ಲ: ಡಿ.ಕೆ.ಶಿವಕುಮಾರ್
ನಾವು ಬೆಂಗಳೂರು, ಹೈದರಾಬಾದ್ ನಗರಗಳನ್ನು ಬಿಟ್ಟು ಭಾರತದ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ನಾವು ಸ್ಪರ್ಧಿಗಳಲ್ಲ, ಪರಸ್ಪರ ಸ್ನೇಹ, ಸಹಕಾರದಿಂದ ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಸಾಗುವ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ತೆಲಂಗಾಣ ರೈಸಿಂಗ್ ಜಾಗತಿಕ ಶೃಂಗಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ತೆಲಂಗಾಣ ರೈಸಿಂಗ್ ಜಾಗತಿಕ ಶೃಂಗಸಭೆಯಲ್ಲಿ ಡಿ.ಕೆ.ಶಿವಕುಮಾರ್. -
ಹೈದರಾಬಾದ್, ಡಿ.8: "ಅಭಿವೃದ್ಧಿ ಎಂಬುದು ಮ್ಯಾಜಿಕ್ ಮೂಲಕ ಸಾಧಿಸುವುದಲ್ಲ, ಸುಸ್ಥಿರ ಯೋಜನೆ, ಪರಿಶ್ರಮ, ಪ್ರಾಮಾಣಿಕತೆಯಿಂದ ಸಾಧಿಸುವುದಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಹೈದರಾಬಾದ್‌ನಲ್ಲಿ ಸೋಮವಾರ ನಡೆದ ತೆಲಂಗಾಣ ರೈಸಿಂಗ್ ಜಾಗತಿಕ ಸಮ್ಮೇಳನದ ಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
"ತೆಲಂಗಾಣವು ಬೆಂಗಳೂರು ಹಾಗೂ ಕರ್ನಾಟಕದ ಜತೆ ಸ್ಪರ್ಧಿಸುತ್ತಿದೆಯೇನೋ ಅಂತ ಅಂದುಕೊಂಡಿದ್ದೆ. ಆದರೆ ಜಾಗತಿಕ ಮಟ್ಟದಲ್ಲಿ ತೆಲಂಗಾಣ ಗುರುತಿಸಿಕೊಳ್ಳುತ್ತಿದೆ. ತೆಲಂಗಾಣ ಸರ್ಕಾರ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸಂತಸದ ವಿಚಾರ. ಈ ಸಂದರ್ಭದಲ್ಲಿ ಇಂತಹ ಪ್ರಯತ್ನಕ್ಕೆ ಮುಂದಾಗಿರುವ ತೆಲಂಗಾಣ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಇಂದು ನನ್ನ ಸ್ನೇಹಿತರಾದ ರೇವಂತ್ ರೆಡ್ಡಿ ಅವರಿಗಾಗಿ ಬಂದಿದ್ದೇನೆ" ಎಂದರು.
"ಹೈದರಾಬಾದ್ ದೊಡ್ಡ ನಗರ, 2047ರ ವೇಳೆಗೆ ಇದು ಯಾವ ಮಟ್ಟಕ್ಕೆ ಬೆಳೆಯಲಿದೆ ಎಂಬುದರ ಚಿತ್ರಣ ಕೊಡುತ್ತಿದೆ. "ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು." ಮುಂದಿನ ಪೀಳಿಗೆಗೆ ನೀವು ರೂಪಿಸುತ್ತಿರುವ ಯೋಜನೆ ಉತ್ತಮವಾಗಿದೆ" ಎಂದು ತಿಳಿಸಿದರು.
ಮಾತೃಭಾಷೆ ಮರೆತವನು ತನ್ನ ಸಂಸ್ಕೃತಿ ಉಳಿಸಲಾರ: ಡಿಸಿಎಂ ಡಿ.ಕೆ. ಶಿವಕುಮಾರ್
ಒಟ್ಟಿಗೆ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ
"ಈ ಸಮ್ಮೇಳನವು ಇವತ್ತಿನ ಬಗ್ಗೆ ಆಲೋಚನೆಮಾಡುತ್ತಿಲ್ಲ. ಭವಿಷ್ಯದ ಬಗ್ಗೆ ಚಿಂತನೆ ನಡೆಸಿದೆ. 10 ವರ್ಷಗಳ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿ, ಈ ಸರ್ಕಾರಕ್ಕೆ ವಿಶ್ವಾಸ ತುಂಬಿದ ಜನರಿಗೆ ಅಭಿನಂದನೆಗಳು. ಸಿಎಂ ರೇವಂತ್ ರೆಡ್ಡಿ ಹಾಗೂ ಅವರ ಸಂಪುಟ ಸಚಿವರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ" ಎಂದರು.
"ನಮ್ಮ ರಾಜ್ಯದಲ್ಲಿ ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದರೂ ಇಲ್ಲಿಗೆ ಬಂದಿದ್ದೇನೆ. ಇಡೀ ದಕ್ಷಿಣ ಭಾರತ ತೆಲಂಗಾಣ ರಾಜ್ಯದ ಬೆನ್ನಿಗೆ ನಿಲ್ಲುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಲಿದೆ. ನಾನು ಇಲ್ಲಿ ಕರ್ನಾಟಕದ ಡಿಸಿಎಂ ಆಗಿ ಮಾತ್ರ ಬಂದಿಲ್ಲ. ದಕ್ಷಿಣ ಭಾರತದ ಧ್ವನಿಯಾಗಿ ಬಂದಿದ್ದೇನೆ. ದೇಶದ ಪ್ರಗತಿಯಲ್ಲಿ ದಕ್ಷಿಣ ಭಾರತದ ಕೊಡುಗೆ ಅಪಾರ" ಎಂದು ತಿಳಿಸಿದರು.
ಐಟಿ ರಫ್ತಿನಲ್ಲಿ ಬೆಂಗಳೂರು ಶೇ.43 ಪಾಲು
"ತೆಲಂಗಾಣ ರಾಜ್ಯದ ಜಾಗತಿಕ ದೃಷ್ಟಿಕೋನವನ್ನು ಗಮನಿಸಿದೆ. ತೆಲಂಗಾಣ ಚಿಕ್ಕ ರಾಜ್ಯ. ದೇಶದ ಐಟಿ ರಫ್ತಿನಲ್ಲಿ ಬೆಂಗಳೂರು 43% ಪಾಲು ಹೊಂದಿದೆ. ತೆಲಂಗಾಣ ಈ ವಿಚಾರದಲ್ಲಿ ಕಡಿಮೆ ಇದ್ದರೂ ಈ ರಾಜ್ಯದ ದೂರದೃಷ್ಟಿ, ಆಲೋಚನೆ ಬಹಳ ದೊಡ್ಡದಾಗಿದೆ. ನಿಮಗೆ ಬೆಂಬಲ ನೀಡಲು ನಾನು ಈ ಕಾರ್ಯಕ್ರಮಕ್ಕೆ ಬಂದಿರುವೆ. ದೇಶದ ಪ್ರಗತಿಯ ಬಗ್ಗೆ ಚರ್ಚೆ ಮಾಡುವಾಗ ಬೆಂಗಳೂರು ಹಾಗೂ ಹೈದರಾಬಾದ್ ಕೊಡುಗೆ ಸ್ಮರಿಸದೆ ಚರ್ಚೆ ಪೂರ್ಣವಾಗುವುದಿಲ್ಲ. ಕೆಲವರು, ಬೆಂಗಳೂರಿಗೆ ಹೈದರಾಬಾದ್ ಪ್ರತಿಸ್ಪರ್ಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸತ್ಯ ಬೇರೆಯದೆ ಇದೆ. ನಾವು ಸ್ಪರ್ಧಿಗಳಲ್ಲ. ಪರಸ್ಪರ ಸಹಕಾರ ನೀಡಿ, ಜತೆಯಾಗಿ ಪ್ರಗತಿ ಸಾಧಿಸುವ ಮೂಲಕ ಭವಿಷ್ಯ ಭಾರತ ನಿರ್ಮಾಣಕ್ಕೆ ಕೊಡುಗೆಯಾಗೋಣ. ನಾನು ರತನ್ ಟಾಟಾ ಅವರನ್ನು ಭೇಟಿಯಾದಾಗ ಅವರು ನನಗೆ ಒಂದು ಮಾತು ಹೇಳಿದರು. "ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ಬಹುದೂರ ಸಾಗಬೇಕಾದರೆ ಒಟ್ಟಿಗೆ ಸಾಗಿ" ಎಂದು ಸಲಹೆ ನೀಡಿದ್ದರು. ಅದರಂತೆ ನಾವು ಒಟ್ಟಾಗಿ ಸಾಗೋಣ. ಈ ಎರಡು ನಗರಗಳ ಪ್ರಗತಿಗೆ ಸಹಕರಿಸೋಣ" ಎಂದರು.
ಬೆಂಗಳೂರಿನಲ್ಲಿ 25 ಲಕ್ಷ ಎಂಜಿನಿಯರ್‌ಗಳು
"ದಕ್ಷಿಣ ಭಾರತವು ದೇಶದ ಜಿಡಿಪಿಯಲ್ಲಿ 31% ಕೊಡುಗೆ ನೀಡಿದೆ. ಮುಂದೆ ಇದು 43% ಏರಿಕೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನ ಬಗ್ಗೆ ನಾನು ಹೆಚ್ಚು ಮಾತನಾಡಿದರೆ ನಿಮಗೆ ಸ್ಪರ್ಧೆ ನೀಡುತ್ತಿರುವಂತೆ ಭಾಸವಾಗುತ್ತದೆ. ಹೀಗಾಗಿ ಬೆಂಗಳೂರಿನ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಎಂಜಿನಿಯರ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್ ಕೂಡ ಉತ್ತಮ ಸಾಮರ್ಥ್ಯ ಹೊಂದಿದೆ. ನಾವು ಒಟ್ಟಾಗಿ ಶ್ರಮಿಸೋಣ" ಎಂದು ಕರೆ ನೀಡಿದರು.
"ಇಲ್ಲಿ ಪಾರದರ್ಶಕವಾದ ಮಾದರಿ ಪರಿಚಯಿಸಲಾಗುತ್ತಿದ್ದು, ಈ ನಗರ ಆರೋಗ್ಯ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕ್ಷಮತೆ ಹೊಂದಿದೆ. ದಕ್ಷಿಣ ಭಾರತದಲ್ಲಿರುವ ಮಾನವ ಸಂಪನ್ಮೂಲ ಬೇರೆ ಯಾವುದೇ ರಾಜ್ಯ ಅಥವಾ ದೇಶದಲ್ಲಿಲ್ಲ. ಈ ಕಾರ್ಯಕ್ರಮಕ್ಕೆ ಜಗತ್ತಿನ ಪ್ರಮುಖ ಕೈಗಾರಿಕೋದ್ಯಮಿಗಳು ಬಂದಿದ್ದು, ತೆಲಂಗಾಣ ರಾಜ್ಯ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಉತ್ತಮ ದೂರದೃಷ್ಟಿ ಹೊಂದಿದೆ" ಎಂದು ತಿಳಿಸಿದರು.
"ರೇವಂತ್ ರೆಡ್ಡಿ ಅವರ ನಾಯಕತ್ವದಲ್ಲಿ ಸಚಿವರು, ಅಧಿಕಾರಿಗಳು ಒಟ್ಟಿಗೆ ಶ್ರಮಿಸಿ, ತೆಲಂಗಾಣ ರಾಜ್ಯವನ್ನು ಜಾಗತಿಕ ಮಟ್ಟಕ್ಕೆ ಮುನ್ನಡೆಸಲಿದ್ದಾರೆ. ಇವರ ಬೆಂಬಲವಾಗಿ ಕರ್ನಾಟಕ ಸರ್ಕಾರ ನಿಲ್ಲಲಿದೆ. ಇಲ್ಲಿಗೆ ಆಗಮಿಸಿರುವ ಹೂಡಿಕೆದಾರರು ನಮ್ಮ ಮೇಲೆ ವಿಶ್ವಾಸವಿಡಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ" ಎಂದರು.
ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ: ತಜ್ಞರ ಸಮಿತಿ ರಚನೆಗೆ ಡಿಕೆಶಿ ಸೂಚನೆ
"ರೇವಂತ್ ರೆಡ್ಡಿ ಹಾಗೂ ಅವರ ಸರ್ಕಾರ ಇದನ್ನು ಸಾಧಿಸಲಿದೆ. ಈ ಸರ್ಕಾರದ ಪ್ರತಿ ಯೋಜನೆ, ಪ್ರತಿ ನಿರ್ಧಾರ ಜನರು ಹಾಗೂ ಮುಂದಿನ ಪೀಳಿಗೆಗಾಗಿ. ನಾವು ಪರಸ್ಪರ ಸ್ಪರ್ಧಿಸದೆ ಒಟ್ಟಾಗಿ ಉಜ್ವಲ ಭವಿಷ್ಯ ರೂಪಿಸಬೇಕಿದೆ" ಎಂದು ತಿಳಿಸಿದರು.
"ಇಲ್ಲಿ ಕೇಂದ್ರ ಸಚಿವರಿದ್ದು, ಭಾರತದ ಭವಿಷ್ಯ ರೂಪಿಸಲು ನಾವು ಇನ್ನಷ್ಟು ಹೆಚ್ಚಿನ ಸಹಕಾರ ನಿರೀಕ್ಷೆಸುತ್ತಿದ್ದೇವೆ" ಎಂದು ತಿಳಿಸಿದರು.