ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shakti sangam 2026: ಗ್ರಾಮೀಣ ಪ್ರದೇಶದಲ್ಲೂ ಮಹಿಳಾ ಉದ್ಯಮಿಗಳು ಹೆಚ್ಚಬೇಕು: ಶ್ರೀ ಶ್ರೀ ರವಿಶಂಕರ್‌ ಗುರೂಜಿ

Women Entrepreneurs Conclave: ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ ಕೇಂದ್ರದಲ್ಲಿ ಸ್ವಕೃತ ಚಾರಿಟೇಬಲ್‌ ಟ್ರಸ್ಟ್‌ ಸಹಭಾಗಿತ್ವದಲ್ಲಿ ಮಹಿಳಾ ಉದ್ಯಮಿಗಳ ಸಮಾವೇಶ ʼಶಕ್ತಿ ಸಂಗಮʼ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ನಾನಾ ರಾಜ್ಯಗಳ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು ಹಾಗೂ ಮಳಿಗೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.

ಗ್ರಾಮೀಣ ಪ್ರದೇಶದಲ್ಲೂ ಮಹಿಳಾ ಉದ್ಯಮಿಗಳು ಹೆಚ್ಚಬೇಕು: ರವಿಶಂಕರ್‌ ಗುರೂಜಿ

-

Prabhakara R
Prabhakara R Nov 27, 2026 8:14 PM

ಬೆಂಗಳೂರು: ರಾಜ್ಯದ ನಗರಗಳು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಳವಾಗಬೇಕು ಎಂದು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್‌ ಗುರೂಜಿಯವರು ಹೇಳಿದರು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ ಕೇಂದ್ರದಲ್ಲಿ ಸ್ವಕೃತ ಚಾರಿಟೇಬಲ್‌ ಟ್ರಸ್ಟ್‌ ಸಹಭಾಗಿತ್ವದಲ್ಲಿ ನಡೆದ ಮಹಿಳಾ ಉದ್ಯಮಿಗಳ ಸಮಾವೇಶ ʼಶಕ್ತಿ ಸಂಗಮʼವನ್ನು (Shakti sangam 2026) ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮಹಿಳೆಯರೂ ಉದ್ಯಮಶೀಲರಾಗಿ ಅಭಿವೃದ್ಧಿಯಾಗುತ್ತಿರುವುದು ಉತ್ತಮ ಬೆಳವಣಿಗೆ. ಇದು ಬೆಂಗಳೂರು ಮೊದಲಾದ ನಗರಗಳಿಗೆ ಸೀಮಿತವಾಗದೆ ಎರಡನೇ ಸ್ತರದ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶದಲ್ಲೂ ಕಂಡು ಬರಬೇಕು. ಇದರಿಂದ ಆರ್ಥಿಕ ಸ್ವಾವಲಂಬನೆ, ಉದ್ಯೋಗ ಸೃಷ್ಟಿಗೆ ಹಾದಿ ಸುಗಮವಾಗುತ್ತದೆ ಎಂದರು.

ಉದ್ಯಮಿಗಳು ಈಗ ದೇಶ-ವಿದೇಶಗಳಲ್ಲಿ ಮಾರುಕಟ್ಟೆಯನ್ನು ಹೊಂದಲು ವಿಫುಲವಾದ ಅವಕಾಶಗಳು ಇವೆ. ರಫ್ತು ವೃದ್ಧಿಸುತ್ತಿದೆ. ಇಂಥ ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಸನ್ನಿವೇಶದಲ್ಲಿ ಸ್ಥಳೀಯ ಸಂಸ್ಕೃತಿ- ಭಾಷೆ-ಕಲೆಗಳ ಸಂರಕ್ಷಣೆಗೂ ಉದ್ಯಮಿಗಳು ಆದ್ಯತೆ ನೀಡಬೇಕು. ಆದ್ದರಿಂದ ಕರ್ನಾಟಕದಲ್ಲಿ ಕನ್ನಡವನ್ನು ಹೆಚ್ಚು ಬಳಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಶ್ರೀ ಶ್ರೀ ರವಿಶಂಕರ್‌ ಗುರೂಜಿಯವರ ಸೋದರಿ ಭಾನುಮತಿ ನರಸಿಂಹನ್‌ ಅವರು, ಮಹಿಳಾ ಉದ್ಯಮಿಗಳಿಗೆ ಧ್ಯಾನದ ನೆರವು ಹೇಗೆ ಒತ್ತಡ, ಸವಾಲುಗಳನ್ನು ಎದುರಿಸಲು ಪ್ರಯೋಜನಕಾರಿಯಾಗುತ್ತದೆ ಎಂಬುದನ್ನು ವಿವರಿಸಿದರು. ಅದಮ್ಯ ಚೇತನ ಫೌಂಡೇಷನ್‌ನ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್‌ ಅವರು ಮಹಿಳೆಯರು ಹೇಗೆ ತಮ್ಮ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಪರಿಸರಸ್ನೇಹಿಯಾಗಿ ಉದ್ಯಮವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ವಿವರಿಸಿದರು.

ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮಾತನಾಡಿ, ನಿವೃತ್ತರಾದ ಮೇಲೆಯೂ ಜಾಲತಾಣ, ತಂತ್ರಜ್ಞಾನದ ನೆರವಿನಿಂದ ಮಹಿಳಾ ಉದ್ಯಮಿಗಳನ್ನು ಸಂಘಟಿಸುತ್ತಿರುವುದಾಗಿ ಹಾಗೂ ಮಾರ್ಗದರ್ಶನ ನೀಡುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ವಕೃತ ಚಾರಿಟೇಬಲ್‌ ಟ್ರಸ್ಟ್‌ನ ಸ್ಥಾಪಕಿ ಮಾಣಿಕ್‌ ಪಟವರ್ಧನ್‌ ಉಪಸ್ಥಿತರಿದ್ದರು. ಸಮಾವೇಶದಲ್ಲಿ ನಾನಾ ರಾಜ್ಯಗಳ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು ಹಾಗೂ ಮಳಿಗೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು.