ಫೆ.14, 15ರಂದು ಕೆಂಗೇರಿಯಲ್ಲಿ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಅಭಿನಂದನಾ ಗ್ರಂಥ ಲೋಕಾರ್ಪಣೆ, ಸಾವಯವ ಸಂತೆ ಸೇರಿ ವಿವಿಧ ಕಾರ್ಯಕ್ರಮ
ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಫೆ. 14 ಮತ್ತು 15ರಂದು 2 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಯವರ ಅಭಿನಂದನಾ ಗ್ರಂಥ ಲೋಕಾರ್ಪಣೆ, ಸಾವಯವ ಸಂತೆ, ವಸ್ತು ಪ್ರದರ್ಶನ, ವಧು ವರರ ಮುಖಾ-ಮುಖಿ ಮತ್ತು ಆರೋಗ್ಯ ಶಿಬಿರ, ರೈತರಿಗೆ ಮಲೆನಾಡು ಗಿಡ್ಡಗಳ ವಿತರಣೆ ಮಾಡಲಾಗುತ್ತದೆ.
ಒಕ್ಕಲಿಗ ಯುವ ಬ್ರಿಗೇಡ್ ಕಾರ್ಯಕ್ರಮ. -
ಬೆಂಗಳೂರು: ಒಕ್ಕಲಿಗ ಯುವ ಬ್ರಿಗೇಡ್ (Vokkaliga Yuva Brigade) ವತಿಯಿಂದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಆಶ್ರಯದಲ್ಲಿ ಫೆಬ್ರವರಿ 14 ಮತ್ತು 15ರಂದು 2 ದಿನಗಳ ಕಾಲ ಭೈರವೈಕ್ಯ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಯವರ ಅಭಿನಂದನಾ ಗ್ರಂಥ ಲೋಕಾರ್ಪಣೆ, ರಾಜ್ಯ ಮಟ್ಟದ ಸಾವಯವ ಸಂತೆ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಸರ್ವಜನಾಂಗದ ವಧು ವರರ ಮುಖಾ-ಮುಖಿ ಮತ್ತು ಉಚಿತ ಆರೋಗ್ಯ ಶಿಬಿರ, ಆಯ್ದ ರೈತರಿಗೆ ಉಚಿತ ಮಲೆನಾಡು ಗಿಡ್ಡಗಳ ವಿತರಣಾ ಕಾರ್ಯಕ್ರಮವನ್ನು ನಗರದ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಬಗ್ಗೆ ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಅವರು ಮಾಹಿತಿ ನೀಡಿದ್ದಾರೆ. ಫೆಬ್ರವರಿ 14ರಂದು ಬೆಳಗ್ಗೆ10 ಗಂಟೆಗೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ವಹಿಸಿಕೊಳ್ಳಲಿದ್ದಾರೆ, ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿ, ಶ್ರೀ ಹನುಮಂತನಾಥ ಮಹಾಸ್ವಾಮೀಜಿ, ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಗುರುಮೂರ್ತಿ ಗುರೂಜಿ ಘನ ಸಾನ್ನಿಧ್ಯ ವಹಿಸಲಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಿಎಂ ಸದಾನಂದಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸಂಸ್ಮರಣಾ ಗ್ರಂಥ ಲೋಕಾರ್ಪಣೆ ಮಾಡಲಿದ್ದು, ಶಾಸಕ ಎಚ್.ಡಿ. ರಂಗನಾಥ್ ಅವರು ಮಲೆನಾಡು ಗಿಡ್ಡಗಳ ವಿತರಣೆ ಮಾಡಲಿದ್ದಾರೆ. ಶಾಸಕ ಹುಲ್ಲಹಳ್ಳಿ ಸುರೇಶ ಸಾವಯವ ಸಂತೆ ಉದ್ಘಾಟನೆ, ಶಾಸಕ ಎಸ್ ಟಿ ಸೋಮಶೇಖರ್ ಆರೋಗ್ಯ ಶಿಬಿರ ಉದ್ಘಾಟನೆ ಹಾಗೂ ಶಾಸಕ ರವಿ ಗಣಿಗ ಅವರು ವಧು ವರರ ಸಮಾವೇಶ ಉದ್ಘಾಟಿಸಲಿದ್ದಾರೆ.
ಫೆಬ್ರವರಿ 6,7ಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ
ಫೆಬ್ರವರಿ 15 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ, ಶ್ರೀ ಕೃಷ್ಣ ಯಾದವನಂದ ಮಹಾಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ನಾದಾನಂದ ಸ್ವಾಮೀಜಿಗಳು ಘನ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ಸಂಸದ ಸಿ.ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಪಕ್ಷ ನಾಯಕ ಆರ್.ಅಶೋಕ್, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಅಶ್ವತ್ಥ್ ನಾರಾಯಣ್, ನ್ಯೂಸ್ 18 ಕನ್ನಡ ಮುಖ್ಯಸ್ಥರಾದ ಹರಿಪ್ರಸಾದ್, ಜಿ ನ್ಯೂಸ್ ಕನ್ನಡದ ಮುಖ್ಯಸ್ಥರಾದ ರವಿಗೌಡ, ಎಂಎಲ್‌ಸಿ ಜವರಾಯಿಗೌಡ, ಮಾಜಿ ಶಾಸಕ ಮಸಾಲಾ ಜಯರಾಮ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯದ ಐಎಎಸ್ ಅಧಿಕಾರಿ ಪ್ರದೀಪ್ ಪ್ರಭಾಕರ್ ಮತ್ತು ಪದ್ಮಶ್ರೀ ಪುರಸ್ಕೃತ ಅಂಕೇಗೌಡರಿಗೆ ಸನ್ಮಾನಿಸಲಾಗುವುದು.
ಒಕ್ಕಲಿಗ ಯುವ ಬ್ರಿಗೇಡ್ ಅಂತಾರಾಷ್ಟ್ರೀಯ ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿದ್ದು, ಅನ್ನ, ಅಕ್ಷರ ಮತ್ತು ಅವಕಾಶ ಕಲ್ಪಿಸುವ ಸಂಕಲ್ಪದೊಂದಿಗೆ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಯಕ್ರಮದ ಮಾಹಿತಿಗಾಗಿ ಜಗದೀಶ್ ರವರನ್ನು -9986034734 ಸಂಪರ್ಕಿಸಬಹುದು.