Premji Invest: ರಫೇಲ್, ಇಸ್ರೋಗೆ ಬಿಡಿಭಾಗ ಪೂರೈಸುವ ಬೆಂಗಳೂರಿನ 'ಹೈಕ್ಯಾಲ್'ನಲ್ಲಿ ಪ್ರೇಮ್ಜಿ ಇನ್ವೆಸ್ಟ್ನಿಂದ ಭಾರೀ ಹೂಡಿಕೆ
ಸುಮಾರು 4 ದಶಕಗಳ ಸುದೀರ್ಘ ಇತಿಹಾಸವಿರುವ ಹೈಕ್ಯಾಲ್ ಕಂಪನಿಗೆ ಸಿಕ್ಕ ಮೊದಲ ಸಾಂಸ್ಥಿಕ ಹೂಡಿಕೆ ಇದಾಗಿದ್ದು, ಜಾಗತಿಕ ಮಟ್ಟದಲ್ಲಿ ಕಂಪನಿಯ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಲು ಈ ಹಣ ಬಳಕೆಯಾಗಲಿದೆ. ಡೆಲಾಯ್ಟ್ ಕಾರ್ಪೊರೇಟ್ ಫೈನಾನ್ಸ್ ಸಂಸ್ಥೆಯು ಹೈಕ್ಯಾಲ್ ನ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ, ಈ ಹೂಡಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ.
-
ಬೆಂಗಳೂರು: ಏರೋಸ್ಪೇಸ್(Aerospace) ಮತ್ತು ರಕ್ಷಣಾ ವಲಯದ ಬಿಡಿಭಾಗಗಳ ತಯಾರಿಕೆ ಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ 'ಹೈಕ್ಯಾಲ್ ಟೆಕ್ನಾಲಜೀಸ್', 'ಪ್ರೇಮ್ಜಿ ಇನ್ವೆಸ್ಟ್'(Premji Invest)ನಿಂದ 30 ರಿಂದ 40 ಮಿಲಿಯನ್ ಡಾಲರ್ (ಅಂದಾಜು 300 ರಿಂದ 400 ಕೋಟಿ ರೂ.) ಬಂಡವಾಳ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.
ಸುಮಾರು 4 ದಶಕಗಳ ಸುದೀರ್ಘ ಇತಿಹಾಸವಿರುವ ಹೈಕ್ಯಾಲ್ ಕಂಪನಿಗೆ ಸಿಕ್ಕ ಮೊದಲ ಸಾಂಸ್ಥಿಕ ಹೂಡಿಕೆ ಇದಾಗಿದ್ದು, ಜಾಗತಿಕ ಮಟ್ಟದಲ್ಲಿ ಕಂಪನಿಯ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಲು ಈ ಹಣ ಬಳಕೆಯಾಗಲಿದೆ. ಡೆಲಾಯ್ಟ್ ಕಾರ್ಪೊರೇಟ್ ಫೈನಾನ್ಸ್ ಸಂಸ್ಥೆಯು ಹೈಕ್ಯಾಲ್ ನ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ, ಈ ಹೂಡಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ.
ರಫೇಲ್ನಿಂದ ಇಸ್ರೋವರೆಗೆ ಹೈಕ್ಯಾಲ್ ಹೆಜ್ಜೆ
1986ರಲ್ಲಿ ಆರಂಭವಾದ ಹೈಕ್ಯಾಲ್ ಟೆಕ್ನಾಲಜೀಸ್, ರಕ್ಷಣಾ ಮತ್ತು ಏರೋಸ್ಪೇಸ್ ವಲಯದಲ್ಲಿ ದಶಕಗಳ ಅನುಭವ ಹೊಂದಿದೆ. ಫ್ರಾನ್ಸ್ನ ಪ್ರಸಿದ್ಧ ರಫೇಲ್ ಯುದ್ಧವಿಮಾನಗಳು, ಬೋಯಿಂಗ್ ಮತ್ತು ಏರ್ಬಸ್ನ ವಾಣಿಜ್ಯ ವಿಮಾನಗಳು, ಹಡಗು ಮತ್ತು ಜಲಾಂತರ್ಗಾಮಿಗಳು, ಇಸ್ರೋದ ಉಡಾವಣಾ ವಾಹಕಗಳು ಹಾಗೂ ಉಪಗ್ರಹಗಳಿಗೆ ಅಗತ್ಯವಿರುವ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಎಲೆಕ್ಟ್ರೋ-ಮೆಕ್ಯಾನಿಕಲ್ ಬಿಡಿಭಾಗಗಳನ್ನು ಈ ಕಂಪನಿ ವಿನ್ಯಾಸಗೊಳಿಸಿ, ಪೂರೈಸುತ್ತದೆ.
ವಿಶೇಷವೆಂದರೆ, ಹೈಕ್ಯಾಲ್(Hical)ನ ಒಟ್ಟು ವ್ಯವಹಾರದಲ್ಲಿ ಶೇ. 90ರಷ್ಟು ಪಾಲು ರಫ್ತಿನಿಂದಲೇ ಬರು ತ್ತಿದ್ದು, ಜಾಗತಿಕ ಏರೋಸ್ಪೇಸ್ ಪೂರೈಕೆ ಸರಪಳಿಯಲ್ಲಿ ಪ್ರಬಲ ಉಪಸ್ಥಿತಿ ಹೊಂದಿದೆ.
ಇದನ್ನೂ ಓದಿ: LIC All-India Sports : ಬೆಂಗಳೂರಿನಲ್ಲಿ ಎಲ್ಐಸಿ ಅಖಿಲ ಭಾರತ ಕ್ರೀಡಾಕೂಟಕ್ಕೆ ಚಾಲನೆ
ವಿಸ್ತರಣೆಗೆ ವೇಗ: ದಕ್ಷಿಣ ಭಾರತದಲ್ಲಿ ಪ್ರಾಬಲ್ಯ
ಈ ಹೊಸ ಬಂಡವಾಳದ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಹೈಕ್ಯಾಲ್ ಮುಂದಾಗಿದೆ. ಕಂಪನಿಯು ಈಗಾಗಲೇ, ದೇವನಹಳ್ಳಿಯಲ್ಲಿ ಹೊಸ ಘಟಕ ಆರಂಭಿಸಿದ್ದು, ಇದೀಗ ಹೊಸೂರಿನಲ್ಲಿ ಮತ್ತೊಂದು ಬೃಹತ್ ಉತ್ಪಾದನಾ ಘಟಕವನ್ನು ನಿರ್ಮಿಸು ತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳ ಖರೀದಿ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಈ ವಲಯಕ್ಕೆ ಅಗತ್ಯವಿರುವ ನುರಿತ ತಜ್ಞರ ನೇಮಕಾತಿಗಾಗಿ ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.
ಭಾರತದಿಂದಲೇ ಜಗತ್ತಿಗೆ ತಂತ್ರಜ್ಞಾನ ಪೂರೈಕೆ
ಈ ಹೂಡಿಕೆಯ ಕುರಿತು ಪ್ರತಿಕ್ರಿಯಿಸಿರುವ ಹೈಕ್ಯಾಲ್ ಟೆಕ್ನಾಲಜೀಸ್ನ ಎಂಡಿ ಯಶಸ್ ಜೈವೀರ್, "ಕಳೆದ 40 ವರ್ಷಗಳಿಂದ ನಾವು ಅತ್ಯುನ್ನತ ಗುಣಮಟ್ಟದ ಇಂಜಿನಿಯರಿಂಗ್ ಉತ್ಪಾದನೆಗೆ ಒತ್ತು ನೀಡಿದ್ದೇವೆ. ಪ್ರೇಮ್ಜಿ ಇನ್ವೆಸ್ಟ್ನ ಬೆಂಬಲವು ನಮ್ಮ ಮುಂದಿನ ಹಂತದ ಬೆಳವಣಿಗೆಗೆ ವೇಗ ನೀಡಲಿದೆ. ನಮ್ಮ ಗುರಿ ಕೇವಲ ಉತ್ಪಾದನೆಯನ್ನು ಹೆಚ್ಚಿಸುವುದಲ್ಲ, ಬದಲಾಗಿ ಭಾರತದಿಂದಲೇ ಜಗತ್ತಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವುದಾಗಿದೆ. ಜಾಗತಿಕ ಕಂಪನಿಗಳ ಬೇಡಿಕೆ ಪೂರೈಸಲು ಭಾರತೀಯ ಪೂರೈಕೆದಾರರಿಗೆ ಈಗ ವಿಪುಲ ಅವಕಾಶಗಳಿವೆ," ಎಂದು ವಿಶ್ಲೇಷಿಸಿದರು.
"ಭಾರತವು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಅತ್ಯಾಧುನಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುತ್ತಿರುವುದಕ್ಕೆ ಹೈಕ್ಯಾಲ್ ಅತ್ಯುತ್ತಮ ಉದಾಹರಣೆ," ಎಂದಿರುವ ಪ್ರೇಮ್ಜಿ ಇನ್ವೆಸ್ಟ್ನ ಪಾಲುದಾರ ಮನೋಜ್ ಜೈಸ್ವಾಲ್, "ಜಾಗತಿಕ ಕಂಪನಿಗಳು ಭಾರತದಲ್ಲಿ ಉತ್ತಮ ಗುಣಮಟ್ಟದ ಇಂಜಿನಿಯರಿಂಗ್ ಪಾಲುದಾರರಿಗಾಗಿ ಹುಡುಕುತ್ತಿದ್ದು, ಹೈಕ್ಯಾಲ್ ಈ ಬೇಡಿಕೆಯನ್ನು ಪೂರೈಸುವ ಅಪಾರ ಸಾಮರ್ಥ್ಯ ಹೊಂದಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಪ್ರೇಮ್ಜಿ ಇನ್ವೆಸ್ಟ್' ಅಜೀಮ್ ಪ್ರೇಮ್ಜಿ ಅವರು 2006ರಲ್ಲಿ ಸ್ಥಾಪಿಸಿದ ಜಾಗತಿಕ ಹೂಡಿಕೆ ಸಂಸ್ಥೆ ಯಾಗಿದ್ದು, 15 ಬಿಲಿಯನ್ ಡಾಲರ್ಗೂ ಅಧಿಕ ಬಂಡವಾಳವನ್ನು ಹೊಂದಿದೆ. ಈ ಸಂಸ್ಥೆ ಇದುವರೆಗೆ 160ಕ್ಕೂ ಹೆಚ್ಚು ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಈ ಹೂಡಿಕೆಗಳಿಂದ ಬರುವ ಆದಾಯವು ಮುಖ್ಯವಾಗಿ 'ಅಜೀಮ್ ಪ್ರೇಮ್ಜಿ ಫೌಂಡೇಶನ್'ನ ಸಮಾಜಮುಖಿ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಬಳಕೆಯಾಗುತ್ತದೆ. ಭವಿಷ್ಯದ ದೃಷ್ಟಿಕೋನವುಳ್ಳ ಈ ಎರಡು ಸಂಸ್ಥೆಗಳ ಒಪ್ಪಂದವು, 'ಆತ್ಮನಿರ್ಭರ್ ಭಾರತ್'(Atmanirbhar Bharat) ಕನಸಿಗೆ ಮತ್ತಷ್ಟು ಬಲ ತುಂಬಲಿದೆ.