ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Budget 2026: ಸಿದ್ದರಾಮಯ್ಯ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?; ಯೋಜನೆ, ಅನುದಾನದ ಮಾಹಿತಿ ಇಲ್ಲಿದೆ

ಸಂಪುಟದ ಸಚಿವರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ರೈತ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ನೀಡಿರುವ ಅನುದಾನ, ಕೊಡುಗೆಗಳ ಕುರಿತ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯ ಬಜೆಟ್‌ನಲ್ಲಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?; ಇಲ್ಲಿದೆ ಮಾಹಿತಿ

ಸಿಎಂ ಸಿದ್ದರಾಮಯ್ಯ. -

Prabhakara R
Prabhakara R Mar 6, 2026 8:19 PM

ಬೆಂಗಳೂರು: ರಾಜ್ಯ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ್ದು, ಇದರಲ್ಲಿ ರಾಜ್ಯದ 31 ಜಿಲ್ಲೆಗಳಿಗೂ ವಿವಿಧ ಯೋಜನೆಗಳು, ಅನುದಾನ ನೀಡಲಾಗಿದೆ. ಜಿಲ್ಲೆಗಳಲ್ಲಿ ಆರೋಗ್ಯ, ನೀರಾವರಿ, ಸಾರಿಗೆ ಸೇರಿ ಮೂಲಸೌಕರ್ಯಕ್ಕೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಯಾವ ಜಿಲ್ಲೆಗೆ ಏನು ಸಿಕ್ಕಿದೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆ

  • ಸಂಚಾರ ದಟ್ಟಣೆ ನಿವಾರಣೆಗೆ 40,000 ಕೋಟಿ ರೂ. ವೆಚ್ಚದಲ್ಲಿ 40 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಅನುಮೋದನೆ.
  • ನಗರದ ರಸ್ತೆಗಳ ಬಾಳಿಕೆಗಾಗಿ ಮುಂದಿನ 3 ವರ್ಷಗಳಲ್ಲಿ 450 ಕಿ.ಮೀ ರಸ್ತೆಗಳನ್ನು 3,000 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್‌ಗೆ ನಿರ್ಧಾರ.
  • ನಮ್ಮ ಮೆಟ್ರೋ ಜಾಲವನ್ನು 2026-27ರ ವೇಳೆಗೆ ಹೆಚ್ಚುವರಿಯಾಗಿ 41 ಕಿ.ಮೀ ವಿಸ್ತರಣೆ ಮಾಡಿ ಲೋಕಾರ್ಪಣೆಗೆ ನಿರ್ಧಾರ.
  • ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿ.
  • ನಗರದ ಪೊಲೀಸಿಂಗ್ ಸವಾಲುಗಳನ್ನು ಎದುರಿಸಲು 'ನಗರ ಪೊಲೀಸಿಂಗ್ ನಾವೀನ್ಯತೆ ಸಂಸ್ಥೆ' ಸ್ಥಾಪನೆ.
  • ಬೆಂಗಳೂರು ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಮತ್ತು ಬಿಡಿಎಸ್ ವಿದ್ಯಾರ್ಥಿಗಳಿಗಾಗಿ 10 ಕೋಟಿ ರೂ. ವೆಚ್ಚದಲ್ಲಿ ನೂತನ ಬಾಲಕರ ಹಾಸ್ಟೆಲ್ ನಿರ್ಮಾಣ.
  • ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ.

ಬೆಂಗಳೂರು ಗ್ರಾಮಾಂತರ

  • ದೊಡ್ಡಬಳ್ಳಾಪುರದಲ್ಲಿ ನೂತನ ಸಂಚಾರ ಪೊಲೀಸ್‌ ಠಾಣೆ ಸ್ಥಾಪನೆ.
  • ದೇವನಹಳ್ಳಿಯ ಕಾರಹಳ್ಳಿ ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯಡಿ ಅಭಿವೃದ್ಧಿ.
  • ನೆಲಮಂಗಲ ತಾಲೂಕಿನ ಹಕ್ಕಿನಾಳು ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ.
  • ಹೊಸಕೋಟೆ ತಾಲೂಕಿನ 59 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ 140 ಕೋಟಿ ರೂ. ಮೀಸಲು.

ಚಿಕ್ಕಬಳ್ಳಾಪುರಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

  • ಡ್ರೋನ್ ತಂತ್ರಜ್ಞಾನದ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕಾಗಿ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ.
  • ಹಳೆಯ ವಾಹನಗಳ ವೈಜ್ಞಾನಿಕ ವಿಲೇವಾರಿಗಾಗಿ 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಘಟಕ.
  • ಚಿಂತಾಮಣಿ ತಾಲೂಕಿನ ಭಕ್ತರಹಳ್ಳಿ ಬಳಿ ಹೊಸ ಕೆರೆ ನಿರ್ಮಾಣ.
  • ಬಾಗೇಪಲ್ಲಿ ತಾಲೂಕಿನ ಮುದ್ದಹಳ್ಳಿ ಕುಂಟೆ ಕೆರೆಯನ್ನು ಮರುನಿರ್ಮಾಣ.

ರಾಮನಗರ (ಬೆಂಗಳೂರು ದಕ್ಷಿಣ)

  • ಜಿಲ್ಲಾ ನ್ಯಾಯಾಲಯದ ಸುಗಮ ಕಾರ್ಯನಿರ್ವಹಣೆಗೆ ರಾಮನಗರದಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ.
  • ರೇಷ್ಮೆ ಉದ್ದಿಮೆಗೆ ಉತ್ತೇಜನ ನೀಡಲು ರಾಮನಗರದಲ್ಲಿ ಅತ್ಯಾಧುನಿಕ ಸಿಲ್ಕ್ ಪಾರ್ಕ್ ಸ್ಥಾಪನೆ.
  • ಕನಕಪುರ ಪಟ್ಟಣದಲ್ಲಿ ಅರ್ಕಾವತಿ ನದಿ ತೀರ ಅಭಿವೃದ್ಧಿ.
  • ಕನಕಪುರ ತಾಲೂಕಿನ ಹೊಸದೊಡ್ಡಿಯಲ್ಲಿ ನೂತನ ಚೆಕ್ ಡ್ಯಾಂ ನಿರ್ಮಾಣ.

Karnataka Budget 2026: ನಗರಾಭಿವೃದ್ಧಿ ಇಲಾಖೆಗೆ ಭರಪೂರ ಅನುದಾನ; ಈ ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?

ಕೋಲಾರ

  • ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ (DPR) ಸಿದ್ಧತೆಗೆ ಕ್ರಮ.
  • ನರಸಾಪುರ ಕೈಗಾರಿಕಾ ವಲಯದ ಭದ್ರತೆಗಾಗಿ ನೂತನ ಪೊಲೀಸ್‌ ಠಾಣೆ ಮಂಜೂರು.
  • ರೈತರಿಗೆ ಕೃಷಿ ಪರಿಕರಗಳು ಒಂದೇ ಸೂರಿನಡಿ ಸಿಗುವಂತೆ ಪ್ರತಿಯೊಂದು ತಾಲೂಕಿನಲ್ಲಿ ರೈತ ಮಾಲ್‌ಗಳನ್ನು ಸ್ಥಾಪನೆ.
  • ಅಮಾನಿಕೆರೆಗೆ ಕಾಲುವೆ ತಡೆಗೋಡೆ ಮತ್ತು ಗೇಟ್ ನಿರ್ಮಾಣ ಸೇರಿದಂತೆ ಜಲಮೂಲಗಳ ಅಭಿವೃದ್ಧಿ.

ತುಮಕೂರು:

  • ಜಿಲ್ಲೆಯ ಕ್ರೀಡಾ ಮೂಲಸೌಕರ್ಯಗಳನ್ನು 3 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ.
  • ಸಾರಿಗೆ ಇಲಾಖೆಯ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ಸೀಜಿಂಗ್ ಯಾರ್ಡ್‌ ನಿರ್ಮಾಣ.
  • ಚಿಕ್ಕನಾಯಕನಹಳ್ಳಿ ಮತ್ತು ಶಿರಾ ತಾಲೂಕುಗಳಲ್ಲಿ ಹೊಸ ಚೆಕ್ ಡ್ಯಾಂಗಳನ್ನು ನಿರ್ಮಾಣಕ್ಕೆ ನಿರ್ಧಾರ.
  • ಗೂಳೂರು-ಹೆಬ್ಬೂರು ಭಾಗಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಠಾನ.

ಚಿತ್ರದುರ್ಗ

  • ಬಬ್ಬೂರಿನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ತರಬೇತಿ ಕೇಂದ್ರʼವನ್ನಾಗಿ ಉನ್ನತೀಕಣ
  • ಹಿರಿಯೂರು ಪಟ್ಟಣದಲ್ಲಿ ಸಂಚಾರ ಸುಗಮಗೊಳಿಸಲು ನೂತನ ಸಂಚಾರ ಪೊಲೀಸ್‌ ಠಾಣೆ ಸ್ಥಾಪನೆ.
  • ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ನೂತನ ತಾರಾಲಯ ನಿರ್ಮಾಣ.
  • ಮೊಳಕಾಲ್ಮೂರು ತಾಲೂಕಿನ ವೆಂಕಾಟಪುರ ಡೈಕ್ ಪಾಥ್ ವೇ ದುರಸ್ತಿ ಕಾರ್ಯ.

ದಾವಣಗೆರೆ

  • ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ಹೊನ್ನಾಳಿ ತಾಲೂಕಿನಲ್ಲಿ ಬೃಹತ್ ಶೀತಲಗೃಹ ನಿರ್ಮಾಣ.
  • ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲು.
  • ಆನಗೋಡು ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನೂತನ ಪೊಲೀಸ್‌ ಠಾಣೆ.
  • ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲಾಗುವುದು.
  • ಹೊನ್ನಾಳಿ ಪಟ್ಟಣದಲ್ಲಿ ಹೊಸ KSRTC ಬಸ್‌ ನಿಲ್ದಾಣ ಅಭಿವೃದ್ಧಿ.
  • ದಾವಣಗೆರೆಯಲ್ಲಿ ಮೀನು ಮಾರಾಟ ಪ್ರೋತ್ಸಾಹಿಸಲು ಮತ್ಸ್ಯದರ್ಶಿನಿ ಆರಂಭ.

ಶಿವಮೊಗ್ಗ

  • ಶಿವಮೊಗ್ಗ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನಗಳ ತಯಾರಿಕೆ ಮತ್ತು ಜೋಡಣೆ ಚಟುವಟಿಕೆಗಳ ಪ್ರಾರಂಭ.
  • ತೀರ್ಥಹಳ್ಳಿ ತಾಲೂಕಿನ ಕೋಡೂರು ಗ್ರಾಮದಲ್ಲಿ ಹಳ್ಳಕ್ಕೆ ತಡೆಗೋಡೆ ಮತ್ತು ರಿವಿಟ್ಮೆಂಟ್ ನಿರ್ಮಾಣ.
  • ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಹೊಳೆಗೆ ಬ್ಯಾರೇಜ್ ನಿರ್ಮಾಣ ಕಾಮಗಾರಿ.

ಮಂಡ್ಯ

  • ಪಾಂಡವಪುರ ತಾಲೂಕನ್ನು ರಾಜ್ಯದ ಪ್ರಥಮ ಸಂಪೂರ್ಣ ಸಾವಯವ ತಾಲೂಕಾಗಿ ಪರಿವರ್ತನೆ.
  • ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆಗಳ ಪರೀಕ್ಷಾ ಘಟಕ ಸ್ಥಾಪನೆಗೆ 100 ಎಕರೆ ಜಮೀನು ಮಂಜೂರು.
  • ಜಿಲ್ಲೆಯ ಕಬ್ಬು ಬೆಳೆಗಾರರಿಗೆ ನೆರವಾಗಲು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 50 ರೂ. ಪಾವತಿಸಲು ಕ್ರಮ.
  • ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಬಳಿಯ 12 ಕೆರೆಗಳಿಗೆ ಏತ ನೀರಾವರಿ ಸೌಲಭ್ಯ.

ಮೈಸೂರು

ಬೆಂಗಳೂರಿನ ದಟ್ಟಣೆ ತಗ್ಗಿಸಲು ಮೈಸೂರನ್ನು ರಾಜ್ಯದ ೨ನೇ ಐಟಿ ಸಿಟಿಯಾಗಿ ಅಭಿವೃದ್ಧಿ

ದಟ್ಟಗಳ್ಳಿಯಲ್ಲಿ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ಆಧುನಿಕ ಸೈಕ್ಲಿಂಗ್ ವೆಲೋಡ್ರೋಮ್‌ ನಿರ್ಮಾಣ.

ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 180 ಕೋಟಿ ರೂ. ವೆಚ್ಚದಲ್ಲಿ 600 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗುವುದು.

ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ವಿಮಾನ ನಿಲ್ದಾಣದ ಬಳಿ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿ.

ಉದಯಗಿರಿ ದಕ್ಷಿಣ ಭಾಗದಲ್ಲಿ ಭದ್ರತೆಗಾಗಿ ನೂತನ ಪೊಲೀಸ್‌ ಠಾಣೆ ಸ್ಥಾಪನೆ.

ಲಿಂಗಾಂಬುಧಿ ಸಸ್ಯ ತೋಟವನ್ನು ಪ್ರವಾಸಿ ತಾಣವನ್ನಾಗಿ ಸಮಗ್ರವಾಗಿ ಅಭಿವೃದ್ಧಿ.

ಚಾಮರಾಜನಗರ

  • ಹನೂರು ತಾಲೂಕಿನ 12 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲು 490 ಕೋಟಿ ರೂ. ವೆಚ್ಚದ ಉಡುತೊರೆಹಳ್ಳ ಯೋಜನೆ.
  • ಗುಂಡ್ಲುಪೇಟೆ ಪಟ್ಟಣದಲ್ಲಿ ಸಂಚಾರ ಸುಗಮಗೊಳಿಸಲು ನೂತನ ಸಂಚಾರ ಪೊಲೀಸ್‌ ಠಾಣೆ.
  • ಜಿಲ್ಲೆಯ ಒಣಗಿದ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ.
  • ಕೊಳ್ಳೇಗಾಲ ತಾಲೂಕಿನ ಸತ್ತೆಗಾಲಾ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ.

ಹಾಸನ

  • ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
  • ಜಿಲ್ಲೆಯ ಬಾಗೂರು ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯಡಿ ಅಭಿವೃದ್ಧಿಪಡಿಸಲಾಗುವುದು.
  • ಅರಸೀಕೆರೆ ತಾಲೂಕಿನ ಜಾವಗಲ್ ಭಾಗದಲ್ಲಿ ಎರಡು ಕಡೆ ಹೊಸ ಚೆಕ್ ಡ್ಯಾಂ ನಿರ್ಮಾಣ.
  • ಸಕಲೇಶಪುರ ತಾಲೂಕಿನ ಐಗೂರು ಕೆರೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
  • ಜಿಲ್ಲೆಯ ಪ್ರಸಿದ್ಧ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಸ್ಮಾರಕ ನಿರ್ಮಾಣ.

ಕೊಡಗು

  • ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿರಾಜಪೇಟೆಯಲ್ಲಿ ಸುಸಜ್ಜಿತ ಕ್ರೀಡಾ ತರಬೇತಿ ವಸತಿ ನಿಲಯ ನಿರ್ಮಾಣ.
  • ಮಡಿಕೇರಿ ಮತ್ತು ಕುಶಾಲನಗರ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆಗಾಗಿ ಚೆಕ್ ಡ್ಯಾಂ ಮತ್ತು ನಾಲೆ ನಿರ್ಮಾಣ.
  • ಸೋಮವಾರಪೇಟೆ ತಾಲೂಕಿನ ಕಿರಿಕೊಡ್ಲಿ ಕೆರೆ ಅಭಿವೃದ್ಧಿ ಕಾಮಗಾರಿ.
  • ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ತೋಡಿಗೆ ತಡೆಗೋಡೆ ನಿರ್ಮಿಸಿ ಕೃಷಿ ಭೂಮಿ ಸಂರಕ್ಷಣೆ.

ದಕ್ಷಿಣ ಕನ್ನಡ

  • ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಸಮುದ್ರ ಕೃಷಿ ಪ್ರೋತ್ಸಾಹಿಸಲು ಸೆಂಟರ್ ಆಫ್‌ ಎಕ್ಸ್‌ಲೆನ್ಸ್‌ ಸ್ಥಾಪನೆ.
  • ಮಾಣಿ ಮತ್ತು ಸಜಿಪನಡು ಗ್ರಾಮಗಳಲ್ಲಿ ಭದ್ರತೆಗಾಗಿ ನೂತನ ಪೊಲೀಸ್‌ ಠಾಣೆಗಳ ಸ್ಥಾಪನೆ.
  • ಮಂಗಳೂರು ಕೇಂದ್ರ ಕಾರಾಗೃಹದ ಎರಡನೇ ಹಂತದ ಕಾಮಗಾರಿ ಪ್ರಾರಂಭ.
  • ಉಳ್ಳಾಲದಲ್ಲಿ ನೇತ್ರಾವತಿ ನದಿಯ ಎಡದಂಡೆ ಸಂರಕ್ಷಣೆಗಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಉಡುಪಿ

  • ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ಕಾಯ್ದುಕೊಳ್ಳಲು ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ನಿಯೋಜನೆ.
  • ಬ್ರಹ್ಮಾವರ ತಾಲೂಕಿನ ಶಿರಿಯಾರದಲ್ಲಿ ಹೊಳೆ ಹೂಳು ತೆರವು ಮತ್ತು ಸಂರಕ್ಷಣೆ ಕಾಮಗಾರಿ.
  • ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಗಳ ನಿರ್ಮಾಣ.

ಉತ್ತರ ಕನ್ನಡ

  • ಕಾರವಾರದಲ್ಲಿ 198 ಕೋಟಿ ರೂ. ವೆಚ್ಚದ 450 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ.
  • ಕಾರವಾರದಲ್ಲಿ 100 ಕೋಟಿ ರೂ. ವೆಚ್ಚದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ.
  • ತದಡಿ ಪ್ರದೇಶದಲ್ಲಿ ಪರಿಸರ ಸ್ನೇಹಿ ಪ್ರವಾಸಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
  • ಸಿದ್ದಾಪುರ ಮತ್ತು ಶಿರಸಿ ತಾಲೂಕುಗಳಲ್ಲಿ ಸೇತುವೆ ಸಹಿತ ಬಾಂದಾರ ನಿರ್ಮಾಣ .

ಬೆಳಗಾವಿ

  • ಜಿಲ್ಲೆಯ ಸುಮಾರು 1,000 ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿ.
  • ಬೆಳಗುಂದಿಯಲ್ಲಿ ಕುಸ್ತಿ ಪಟುಗಳ ಉತ್ತೇಜನಕ್ಕಾಗಿ ನೂತನ ಕುಸ್ತಿ ಅಖಾಡ ನಿರ್ಮಾಣ.
  • ಬೆಳಗಾವಿ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
  • ಯರಗಟ್ಟಿ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆಗಾಗಿ ನೂತನ ಪೊಲೀಸ್‌ ಠಾಣೆ ಸ್ಥಾಪನೆ.
  • ಸವದತ್ತಿ ಮತ್ತು ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ನೂತನ ಶ್ರಮಿಕ ವಸತಿ ಶಾಲೆಗಳ ಪ್ರಾರಂಭ.

ಬಾಗಲಕೋಟೆ

  • ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ ಕಾಲೇಜು ಸ್ಥಾಪನೆ.
  • ಮುಧೋಳ ತಾಲ್ಲೂಕಿನಲ್ಲಿ ನೀರಿನ ಸಂರಕ್ಷಣೆಗಾಗಿ ಚೆಕ್ ಡ್ಯಾಂ ಹಾಗೂ ಬಿ.ಸಿ.ಬಿ ನಿರ್ಮಾಣ.
  • ಕೆರೂರು ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮೀನು ಮಾರಾಟಕ್ಕಾಗಿ ಸುಸಜ್ಜಿತ ಮಾರುಕಟ್ಟೆಗಳ ನಿರ್ಮಾಣ.

ವಿಜಯಪುರ

  • ವಿಜಯಪುರ ವಿಮಾನ ನಿಲ್ದಾಣದ ಆವರಣದಲ್ಲಿ ಪೈಲಟ್‌ಗಳ ತರಬೇತಿಗಾಗಿ ವಿಮಾನ ಹಾರಾಟ ತರಬೇತಿ ಶಾಲೆ ಪ್ರಾರಂಭ.
  • ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ ತಯಾರಿ.
  • ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ 1,000 ಬಂದಿಗಳ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣ.
  • ಮುದ್ದೇಬಿಹಾಳ ಗ್ರಾಮಾಂತರ ಭಾಗದಲ್ಲಿ ಭದ್ರತೆಗಾಗಿ ನೂತನ ಪೊಲೀಸ್‌ ಠಾಣೆ.
  • ಬಬಲೇಶ್ವರ ತಾಲ್ಲೂಕಿನ ಹಲವು ಹಳ್ಳಗಳಿಗೆ ಸರಣಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ.

ಧಾರವಾಡ

  • ಕಾರ್ಮಿಕರ ಮಕ್ಕಳ ನೈಪುಣ್ಯತೆ ಹೆಚ್ಚಿಸಲು 200 ಕೋಟಿ ರೂ. ವೆಚ್ಚದ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ.
  • ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆ.
  • ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯಲ್ಲಿ ನಾಲ್ಕು ʻವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ʼಗಳ ಪ್ರಾರಂಭ.
  • ಧಾರವಾಡ ಕೈಗಾರಿಕಾ ನೋಡ್ ಅಭಿವೃದ್ಧಿಗೆ 600 ಕೋಟಿ ರೂ. ವೆಚ್ಚದಲ್ಲಿ ಭೂಸ್ವಾಧೀನ ಪ್ರಕ್ರಿಯೆ.

ಹಾವೇರಿ

  • ತಿಳುವಳ್ಳಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನೂತನ ಪೊಲೀಸ್‌ ಠಾಣೆ ಸ್ಥಾಪನೆ.
  • ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ ಚಾಲನೆ.
  • ಹಾನಗಲ್ ಭಾಗದ 111 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆ.
  • ರಟ್ಟಿಹಳ್ಳಿ ತಾಲೂಕಿನಲ್ಲಿ ಚೆಕ್ ಡ್ಯಾಂ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ.

ಗದಗ

  • ಗದಗ-ಕಪ್ಪತಗುಡ್ಡ-ಲಕ್ಕುಂಡಿ ಪ್ರದೇಶಗಳನ್ನು ಒಳಗೊಂಡ ಪ್ರವಾಸೋದ್ಯಮ ಸರ್ಕ್ಯೂಟ್‌ ಅಭಿವೃದ್ಧಿ.
  • ಪಟ್ಟಣದ ಸಾರಿಗೆ ವ್ಯವಸ್ಥೆ ಸುಧಾರಿಸಲು ನೂತನ ಬಸ್ಸು ನಿಲ್ದಾಣ ನಿರ್ಮಾಣ.
  • ರೋಣ ತಾಲೂಕಿನ ಕೆರೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆ.
  • ಜಿಲ್ಲೆಯ ನೇಕಾರರ ಏಳಿಗೆಗಾಗಿ ವಿದ್ಯುತ್ ಸಹಾಯಧನ ಮುಂದುವರಿಕೆ.

ಕಲಬುರಗಿ

  • ಹಜ್ ಯಾತ್ರಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಹಜ್ ಭವನ ನಿರ್ಮಾಣ.
  • ಕ್ರೀಡಾಪಟುಗಳಿಗೆ ಉತ್ತಮ ಸೇವೆ ಒದಗಿಸಲು ಕಲಬುರಗಿಯಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ.
  • ಪಿ.ಎಂ. ಮಿತ್ರ ಮೆಗಾ ಜವಳಿ ಪಾರ್ಕ್‌ನಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 390 ಕೋಟಿ ರೂ.
  • ಕಲಬುರಗಿ ನಗರಕ್ಕೆ 24/7 ಶಾಶ್ವತ ಕುಡಿಯುವ ನೀರು ಒದಗಿಸಲು 1,863 ಕೋಟಿ ರೂ. ವೆಚ್ಚದ ಯೋಜನೆ.
  • ಜೇವರ್ಗಿಯಲ್ಲಿ ವಿದ್ಯಾರ್ಥಿಗಳ ಜ್ಞಾನವೃದ್ಧಿಗಾಗಿ ನಾಲೆಡ್ಜ್‌ ಪಾರ್ಕ್‌ ಸ್ಥಾಪನೆ.

ಯಾದಗಿರಿ

  • ಜಿಲ್ಲಾ ಕೇಂದ್ರದಲ್ಲಿ 100 ಕೋಟಿ ರೂ. ವೆಚ್ಚದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ.
  • ಕಕ್ಕೇರಾ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆಗಾಗಿ ನೂತನ ಪೊಲೀಸ್‌ ಠಾಣೆ.
  • ಕಕ್ಕೇರಾ ಗ್ರಾಮದಲ್ಲಿ ನೂತನ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ.
  • ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಮೂಡಿಸಲು ನೂತನ ತಾರಾಲಯ ನಿರ್ಮಾಣ.

ಬೀದರ್‌

  • ಹಜ್ ಯಾತ್ರಿಕರ ಮತ್ತು ಸಂಬಂಧಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಹಜ್ ಭವನ ನಿರ್ಮಾಣ.
  • ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದಲ್ಲಿ ಜ್ಞಾನ ಪ್ರಸಾರಕ್ಕಾಗಿ ಗ್ರಂಥಾಲಯ ಸ್ಥಾಪನೆ.
  • ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ 1,000 ಬಂದಿಗಳ ಸಾಮರ್ಥ್ಯದ ನೂತನ ಕಟ್ಟಡ.
  • ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆ.

ರಾಯಚೂರು

  • ರಾಯಚೂರಿನಲ್ಲಿ 10 ಕೋಟಿ ರೂ. ವೆಚ್ಚದ ಸುಸಜ್ಜಿತ ಟ್ರಾಮಾ ಕೇರ್ ಕೇಂದ್ರ ಲೋಕಾರ್ಪಣೆ.
  • ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ.
  • IIIT ರಾಯಚೂರಿನಲ್ಲಿ ಕೃತಕ ಬುದ್ಧಿಮತ್ತೆ (AI) ಶ್ರೇಷ್ಠತಾ ಕೇಂದ್ರ ಸ್ಥಾಪನೆ.
  • ಜಿಲ್ಲೆಯ ಮುದ್ಲಾಪೂರ ಮತ್ತು ದದ್ದಲ್ ಗ್ರಾಮಗಳಲ್ಲಿ ಏತ ನೀರಾವರಿ ಯೋಜನೆಗಳ ಪುನರುಜ್ಜೀವನ.

ಕೊಪ್ಪಳ

  • ಅಂಜನಾದ್ರಿ ಬೆಟ್ಟವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡಲು 100 ಕೋಟಿ ರೂ. ವೆಚ್ಚದ ಯೋಜನೆ.
  • ಜಿಟಿಟಿಸಿ ಕೇಂದ್ರದಲ್ಲಿ Precision Tool Engineering ತಂತ್ರಜ್ಞಾನ ಕೇಂದ್ರ ಸ್ಥಾಪನೆ.
  • ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿ ಅಂತರ್ಜಲ ವೃದ್ಧಿಗೆ ಕೆರೆಗಳ ಆಧುನೀಕರಣ.
  • ನವಲಿ ಬಳಿ ತುಂಗಭದ್ರಾ ನೀರಿನ ಕೊರತೆ ನೀಗಿಸಲು ಸಮತೋಲನಾ ಜಲಾಶಯ ನಿರ್ಮಾಣದ ಪ್ರಯತ್ನ.

ಬಳ್ಳಾರಿ

  • ಬಳ್ಳಾರಿ ನಗರದಲ್ಲಿ ನೂತನ ತಾರಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
  • ಸಿರಗುಪ್ಪ ಪಟ್ಟಣದಲ್ಲಿ ಸಾರ್ವಜನಿಕ ಸೇವೆಗಳ ಸುಗಮ ನಿರ್ವಹಣೆಗೆ ʻಪ್ರಜಾಸೌಧʼ ನಿರ್ಮಾಣ.
  • ಜಿಲ್ಲೆಯ ಗಣಿಬಾಧಿತ ತಾಲೂಕುಗಳಲ್ಲಿ ಸಮಗ್ರ ಆರೋಗ್ಯ ಸೇವೆಗಳ ವಿಸ್ತರಣೆ.
  • ಹರಪನಹಳ್ಳಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗಳ ಅನುಷ್ಠಾನ.

ವಿಜಯನಗರ

  • ಮುನಿರಾಬಾದ್-ಟಿ.ಬಿ.ಡ್ಯಾಂನಲ್ಲಿ ತೃತೀಯ ಹಂತದ ಕ್ಯಾನ್ಸರ್ ಆರೈಕೆ ಆಸ್ಪತ್ರೆ ಸ್ಥಾಪನೆ.
  • ಜಿಲ್ಲಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗಾಗಿ ನೂತನ ತಾರಾಲಯ ನಿರ್ಮಾಣ.
  • ಕೂಡ್ಲಿಗಿ ತಾಲ್ಲೂಕಿನ ತಿಪ್ಪೇಹಳ್ಳಿ ಬಳಿ ಕೆರೆ ಅಭಿವೃದ್ಧಿ ಕಾಮಗಾರಿ.
  • ಜಿಲ್ಲಾ ಕ್ರೀಡಾಂಗಣವನ್ನು ಮೂಲಭೂತ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೆ.

Karnataka Budget 2026: ವಿತ್ತೀಯ ಶಿಸ್ತು ಉಲ್ಲಂಘಿಸಿಲ್ಲ, ಸಾಲ ಮಾಡದೇ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದ ಸಿಎಂ

ಚಿಕ್ಕಮಗಳೂರು

  • ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ಪಿಪಿಪಿ ಮಾದರಿಯಲ್ಲಿ ರೋಪ್‌-ವೇ ನಿರ್ಮಾಣ.
  • ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮತ್ಸ್ಯದರ್ಶಿನಿಗಳ ಸ್ಥಾಪನೆ.
  • ಸಾರಿಗೆ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ.
  • ಕಡೂರು ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಅನುಷ್ಠಾನ .