ಗಿಳಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ; ಏನಿದು ಹೃದಯ ವಿದ್ರಾವಕ ಘಟನೆ?
ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಗಿಳಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೆಂಗಳೂರಿನ ಗಿರಿನಗರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಈ ದುರಂತ ಸಂಭವಿಸಿದ್ದು, ಮೃತನನ್ನು ಅರುಣ್ ಕುಮಾರ್ (32) ಎಂದು ಗುರುತಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಡಿ. 12: ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿದ್ದ ಗಿಳಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೆಂಗಳೂರಿನ ಗಿರಿನಗರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಈ ದುರಂತ ಸಂಭವಿಸಿದ್ದು, ಮೃತನನ್ನು ಅರುಣ್ ಕುಮಾರ್ (32) ಎಂದು ಗುರುತಿಸಲಾಗಿದೆ (Bengaluru News). ಗಿರಿನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅರುಣ್ ಅವರಿಗೆ ಸೇರಿದ, ವಿದೇಶದಿಂದ ತರಿಸಿದ, ಬರೋಬ್ಬರಿ 2 ಲಕ್ಷ ರೂ. ಬೆಲೆಯ ಗಿಳಿ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಗಿಳಿಯನ್ನು ಅಲ್ಲಿಂದ ರಕ್ಷಿಸಲು ಹೋಗಿ ಯುವಕನೇ ವಿದ್ಯುತ್ ಶಾಕ್‌ಗೆ ಗುರಿಯಾಗಿ ಅಸು ನೀಗಿದ್ದು, ಸ್ಥಳೀಯರಿಗೆ ಆಘಾತ ತಂದಿದೆ. 66 ಸಾವಿರ ಕೆವಿ ವಿದ್ಯುತ್ ವೈರ್ನಿಂದ ಹೊಡೆದ ಶಾಕ್‌ಗೆ ಅರುಣ್ ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಘಟನೆ ವಿವರ
ಅರುಣ್ ಅವರ ಗಿಳಿ ಗಿರಿನಗರದ ಖಾಸಗಿ ಅಪಾರ್ಟ್‌ಮೆಂಟ್ ಒಳಭಾಗದಲ್ಲಿರುವ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು. ಇದನ್ನು ನೋಡಿದ ಅರುಣ್ ಕುಮಾರ್, ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ ಮೂಲಕ ಅದನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯುತ್ ವೈರ್‌ಗೆ ಪೈಪ್ ತಗುಲಿ ಶಾಕ್ ಹೊಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಬೆಸ್ಕಾಂ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗೆ 66 ಸಾವಿರ ಕೆವಿ ಸಾಮರ್ಥ್ಯದ ವೈರ್ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಗ್ರ ತನಿಖೆ ನಡೆಯುವಂತೆ ಆಗ್ರಹಿಸಿದ್ದಾರೆ.
ಇಂಡಿಗೋ ಬಿಕ್ಕಟ್ಟಿನ ನಡುವೆ ಫ್ಲೈಟ್ ಒಳಗೆ ಪಾರಿವಾಳ ನುಗ್ಗಿ ಅವಾಂತರ: ವಿಡಿಯೊ ವೈರಲ್
ಪಾರಿವಾಳ ಬೆಟ್ಟಿಂಗ್ ವಿಚಾರಕ್ಕೆ ಗಲಾಟೆ; 13 ವರ್ಷದ ಬಾಲಕ ಆತ್ಮಹತ್ಯೆ
ತುಮಕೂರು: ಪಾರಿವಾಳ ಬೆಟ್ಟಿಂಗ್ ವಿಚಾರಕ್ಕೆ 7ನೇ ತರಗತಿ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಕೆಲವು ತಿಂಗಳ ಹಿಂದೆ ತುಮಕೂರಿನಲ್ಲಿ ನಡೆದಿತ್ತು. ವಿಜಯನಗರ 2ನೇ ಮುಖ್ಯ ರಸ್ತೆಯಲ್ಲಿ ನಡೆದಿತ್ತು. ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕಿ ಶಕುಂತಲಾ ನಟರಾಜ್ ಅವರ ಪುತ್ರ ತ್ರಿಶಾಲ್ (13) ಆತ್ಮಹತ್ಯೆಗೆ ಶರಣಾದ ಬಾಲಕ. ಈತ ವಿಶಾಲ್ ಸರ್ವೋದಯ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಾಲಾ ಸಮವಸ್ತ್ರದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಅದೇ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.