ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಗುಡಿಬಂಡೆಯಲ್ಲಿ ಅದ್ದೂರಿ ಅಂಬೇಡ್ಕರ್, ಬಾಬು ಜಗಜೀವನ್ ರಾಂ ಜಯಂತಿ

ಬಾಲ್ಯದಲ್ಲಿ ಅಸ್ಪೃಶ್ಯತೆಯಂತಹ ಅಮಾನವೀಯ ನೋವುಗಳನ್ನು ಅನುಭವಿಸಿದರೂ ಅದನ್ನು ಧೈರ್ಯದಿಂದ ಎದುರಿಸಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸಾಧನೆ ದೊಡ್ಡದು ಎಂದು ಬಣ್ಣಿಸಿದರು. ಇಂದು ನಾವು ಅನುಭವಿಸುತ್ತಿರುವ ಸಮಾನತೆ ಮತ್ತು ನೆಮ್ಮದಿಯ ಬದುಕಿಗೆ ಅವರು ಹಾಕಿಕೊಟ್ಟ ಸಂವಿಧಾನದ ಬುನಾದಿಯೇ ಮುಖ್ಯ ಕಾರಣ ಎಂದು ನೆನಪಿಸಿದ ಅವರು, ಈ ಮೌಲ್ಯಗಳನ್ನು ಯುವ ಪೀಳಿಗೆಗೆ ನಿರಂತರವಾಗಿ ತಿಳಿಸಿಕೊಡುವ ಕೆಲಸ ಆಗಬೇಕು

ಗುಡಿಬಂಡೆಯಲ್ಲಿ ಅದ್ದೂರಿ ಅಂಬೇಡ್ಕರ್, ಬಾಬು ಜಗಜೀವನ್ ರಾಂ ಜಯಂತಿ

-

Profile
Ashok Nayak Apr 18, 2026 10:29 PM

ಗುಡಿಬಂಡೆ: ಸಮಾಜದ ಅಂಕುಡೊಂಕುಗಳನ್ನು ತಿದ್ದಲು ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾಪುರುಷರ ಜಯಂತಿಗಳು ಕೇವಲ ವರ್ಷದ ಒಂದು ದಿನದ ಆಚರಣೆಯಾಗಿ ಸೀಮಿತವಾಗ ಬಾರದು. ಬದಲಾಗಿ ಅವರ ಜೀವನದ ಆದರ್ಶಗಳು ಶಾಲಾ-ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿ ಗಳಿಗೆ ತಲುಪುವಂತಾಗಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA S.N.Subbareddy) ಕಿವಿಮಾತು ಹೇಳಿದ್ದಾರೆ.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಅವರ ಜಯಂತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಹಂತದಲ್ಲೇ ಅರಿವು ಮೂಡಿಸುವ ಅಗತ್ಯ

ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿದ ಶಾಸಕರು, ಬಾಲ್ಯದಲ್ಲಿ ಅಸ್ಪೃಶ್ಯತೆಯಂತಹ ಅಮಾನವೀಯ ನೋವುಗಳನ್ನು ಅನುಭವಿಸಿದರೂ ಅದನ್ನು ಧೈರ್ಯದಿಂದ ಎದುರಿಸಿ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಸಾಧನೆ ದೊಡ್ಡದು ಎಂದು ಬಣ್ಣಿಸಿದರು. ಇಂದು ನಾವು ಅನುಭವಿಸುತ್ತಿರುವ ಸಮಾನತೆ ಮತ್ತು ನೆಮ್ಮದಿಯ ಬದುಕಿಗೆ ಅವರು ಹಾಕಿಕೊಟ್ಟ ಸಂವಿ ಧಾನದ ಬುನಾದಿಯೇ ಮುಖ್ಯ ಕಾರಣ ಎಂದು ನೆನಪಿಸಿದ ಅವರು, ಈ ಮೌಲ್ಯಗಳನ್ನು ಯುವ ಪೀಳಿಗೆಗೆ ನಿರಂತರವಾಗಿ ತಿಳಿಸಿಕೊಡುವ ಕೆಲಸ ಆಗಬೇಕು ಎಂದರು.

ಇದನ್ನೂ ಓದಿ: Gudibande News: ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಣೆ

ಗುಡಿಬಂಡೆಗೆ ನಾಲ್ಕು ಕೋಟಿ ವೆಚ್ಚದ ಅಂಬೇಡ್ಕರ್ ಭವನ

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ ಶಾಸಕರು ಸ್ಥಳೀಯರಿಗೆ ಒಂದು ಮಹತ್ವದ ಮಾಹಿತಿ ನೀಡಿದರು. ದಲಿತ ಮುಖಂಡರ ದಶಕಗಳ ಕನಸಾಗಿದ್ದ ಸುಸಜ್ಜಿತ ಅಂಬೇಡ್ಕರ್ ಭವನವು ಅಮಾ ನಿಬೈರ ಸಾಗರ ಕೆರೆಯ ಏರಿಯ ಬಳಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಲಿದೆ. ಈ ಯೋಜನೆಗಾಗಿ ಈಗಾಗಲೇ ಜಾಗವನ್ನು ಗುರುತಿಸಿ ಗುದ್ದಲಿ ಪೂಜೆ ಕೂಡ ನೆರವೇರಿಸಲಾಗಿದ್ದು, ಶೋಷಿತರ ಮತ್ತು ಬಡವರ ಶ್ರೇಯೋಭಿವೃದ್ಧಿಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಗ್ಯಾರಂಟಿ ಯೋಜನೆಗಳು ಸಂವಿಧಾನದ ಆಶಯ

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪ್ರಗತಿಪರ ಚಿಂತಕ ಡಾ.ಎಚ್.ವಿ.ವಾಸು ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಅಂಬೇಡ್ಕರ್ ಅವರ ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ, ಅದು ಸಾಮಾಜಿಕ ನ್ಯಾಯದ ಗ್ರಂಥವಾಗಿದೆ ಎಂದು ಹೇಳಿದ ಅವರು, ಪ್ರಸ್ತುತ ಸರ್ಕಾರದ ಗ್ಯಾರಂಟಿ ಯೋಜನೆಗಳು ಈ ಸಂವಿಧಾನದ ಆಶಯಗಳ ಪ್ರತಿರೂಪವೇ ಹೊರತು ಬಿಟ್ಟಿ ಭಾಗ್ಯಗಳಲ್ಲ ಎಂದು ವಿಮರ್ಶಿಸಿದರು. ಇವುಗಳನ್ನು ಟೀಕಿಸುವವರು ವಾಸ್ತವದಲ್ಲಿ ಸಂವಿಧಾನ ವಿರೋಧಿಗಳು ಎಂದು ಅವರು ಕಟುವಾಗಿ ಟೀಕಿಸಿದರು.

ಇದೇ ವೇಳೆ ಮಾತನಾಡಿದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎನ್.ಸಂಪಂಗಿ ಅವರು, ಕಾಂಗ್ರೆಸ್ ಪಕ್ಷವು ಸಂವಿಧಾನಬದ್ಧ ಆಡಳಿತದ ಮೂಲಕ ಬಡವರ ಪರವಾಗಿ ನಿಂತಿದೆ. ಭೂ ಸುಧಾರಣಾ ಕಾಯ್ದೆಯಂತಹ ಐತಿಹಾಸಿಕ ಹೆಜ್ಜೆಗಳ ಪರಂಪರೆಯನ್ನು ಇಂದಿನ ಪಂಚ ಗ್ಯಾರಂಟಿಗಳು ಮುಂದು ವರಿಸಿವೆ ಎಂದು ಹೇಳುತ್ತಾ ಶಾಸಕ ಸುಬ್ಬಾರೆಡ್ಡಿ ಅವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.

ಸಂಭ್ರಮದ ಮೆರವಣಿಗೆ ಮತ್ತು ಪುಟಾಣಿ ಕಲಾವಿದನ ಪ್ರತಿಭೆ

ಕಾರ್ಯಕ್ರಮದ ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ದೊಂದಿಗೆ ಪಲ್ಲಕ್ಕಿ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ವೇದಿಕೆ ಕಾರ್ಯಕ್ರಮದ ನಡುವೆ 5 ವರ್ಷದ ಪುಟಾಣಿ ಮನೋಜ್ ಕುಮಾರ್ ಅಂಬೇಡ್ಕರ್ ಕುರಿತ ಕ್ರಾಂತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಸಭಿಕರ ಮೆಚ್ಚುಗೆಗೆ ಪಾತ್ರನಾದನು.

ಈ ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕಾಸ್, ತಹಸೀಲ್ದಾರ್ ಮನೀಷಾ, ತಾಲೂಕು ಪಂಚಾಯಿತಿ ಇಒ ನಾಗಮಣಿ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ನಿರ್ದೇಶಕ ತೇಜ್ ಆನಂದ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ದಲಿತ ಮುಖಂಡರು ಉಪಸ್ಥಿತರಿದ್ದರು.