ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್ ವೇಳೆ ದುರಂತ; ಓಡುತ್ತಿದ್ದಾಗಲೇ ಕುಸಿದು ಬಿದ್ದು ಕ್ರೀಡಾಪಟು ಸಾವು
ಭಾನುವಾರ ನಡೆದ ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿ ಕೂಡ 21 ಕಿ.ಮೀ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಅರ್ಧ ಭಾಗದಷ್ಟು ಓಟವನ್ನು ಪೂರ್ಣಗೊಳಿಸಿದ್ದ ವೇಳೆ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು, ಮೃತಪಟ್ಟಿದ್ದಾರೆ.
-
ಚಿಕ್ಕಬಳ್ಳಾಪುರ: ನಂದಿ ಹಿಲ್ಸ್‌ನಲ್ಲಿ ನಡೆದ ಮಾನ್ಸೂನ್ ಮ್ಯಾರಥಾನ್ (Nandi Hills Monsoon Marathon) ವೇಳೆ ದುರಂತ ಸಂಭವಿಸಿದ್ದು, 21 ಕಿ.ಮೀ ಓಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಓಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ (31) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಅಮನ್ ದೀಪ್ ಸಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಂದಿದೆ.
ಭಾನುವಾರ ನಡೆದ ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಅಮನ್ ದೀಪ್ ಸಿಂಗ್ ಅವರು 21 ಕಿ.ಮೀ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ನಂದಿ ಬೆಟ್ಟದ ಅರ್ಧ ಭಾಗದಷ್ಟು ಓಟವನ್ನು ಪೂರ್ಣಗೊಳಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಮುದ್ದೇನಹಳ್ಳಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಾಥಮಿಕವಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಮ್ಯಾರಥಾನ್‌ಗೆ ಮುನ್ನ ಅಮನ್ ದೀಪ್ ಸಿಂಗ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ದೇವರು ನನ್ನ ಜೊತೆ ಇದ್ದಾನೆ' ಎಂದು ಬರೆದುಕೊಂಡಿದ್ದರು ಎನ್ನಲಾಗಿದೆ. ಇದೀಗ ಮ್ಯಾರಥಾನ್ ವೇಳೆ ಸಂಭವಿಸಿದ ಈ ದುರಂತ ಸಹಭಾಗಿಗಳು ಹಾಗೂ ಕ್ರೀಡಾಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.