ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಷ್ಯಾದಿಂದ ಭಾರತಕ್ಕೆ ರೈಲು ಮಾರ್ಗ! 4 ದೇಶಗಳ ಮೂಲಕ ಹಾದು ಬರುವ ಟ್ರೈನ್‌ನಿಂದ ಸೃಷ್ಟಿಯಾಗಲಿದೆ ಸಂಪರ್ಕ ಕ್ರಾಂತಿ

Marat Khusnullin: ಭಾರತದ ಜತೆ ನೇರ ಸಂಪರ್ಕ ಸಾಧಿಸಲು ರೈಲು ಮಾರ್ಗ ನಿರ್ಮಿಸುವ ಸಾಧ್ಯತೆ ಬಗ್ಗೆ ರಷ್ಯಾ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ʼʼರಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲವನ್ನು ನಿರ್ಮಿಸುವ ಅಗತ್ಯವಿದೆʼʼ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ ಪ್ರತಿಪಾದಿಸಿದ್ದಾರೆ. ಒಂದುವೇಳೆ ಈ ಯೋಜನೆ ಸಾಕಾರಗೊಂಡರೆ ಹೊರ್ಮುಜ್‌ ಜಲಸಂಧಿಯ ಮೇಲಿನ ಅವಲಂಬನೆ ತಪ್ಪಲಿದೆ.

ರಷ್ಯಾದಿಂದ ಭಾರತಕ್ಕೆ ಬರಲಿದೆ ರೈಲು! ತಪ್ಪಲಿದೆ ಹೊರ್ಮುಜ್‌ ಜಲಸಂಧಿ ಅವಲಂಬನೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Aug 9, 2026 9:08 PM

ಮಾಸ್ಕೋ, ಆ. 9: ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಸಂಘರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ವ್ಯಾಪಾರ-ವಹಿವಾಟುಗಳ ಮೇಲೆ ಕರಿ ನೆರಳು ಬಿದ್ದಿದೆ. ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ಸ್ಥಗಿತಗೊಳಿಸಿದ್ದು, ಇಂಧನಕ್ಕಾಗಿ ಆಮದನ್ನೇ ಅವಲಂಬಿಸಿರುವ ಭಾರತದಂತಹ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಮಧ್ಯೆ ಭಾರತದ ಜತೆ ನೇರ ಸಂಪರ್ಕ ಸಾಧಿಸಲು ರೈಲು ಮಾರ್ಗ ನಿರ್ಮಿಸುವ ಸಾಧ್ಯತೆ ಬಗ್ಗೆ ರಷ್ಯಾ ಚಿಂತನೆ ನಡೆಸುತ್ತಿದೆ (Russia To India Train Link). ʼʼರಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲವನ್ನು ನಿರ್ಮಿಸುವ ಅಗತ್ಯವಿದೆʼʼ ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ (Marat Khusnullin) ಪ್ರತಿಪಾದಿಸಿದ್ದಾರೆ. ಒಂದುವೇಳೆ ಈ ಯೋಜನೆ ಸಾಕಾರಗೊಂಡರೆ ಸಂಪರ್ಕ ಕ್ರಾಂತಿಯೇ ಆಗಲಿದೆ.

ಟಾಸ್ (TASS) ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ʼ‘ಬಾಸ್ಫರಸ್ ಮತ್ತು ಹೊರ್ಮುಜ್ ಜಲಸಂಧಿಗಳ ಮೂಲಕ ನಡೆಯುವ ಸರಕು ಸಾಗಣೆ ಮಾರ್ಗದ ಮೇಲೆ ಅಪಾಯ ಹೆಚ್ಚುತ್ತಿದೆ. ಹೀಗಾಗಿ ರಷ್ಯಾಕ್ಕೆ ಪರ್ಯಾಯ ಮತ್ತು ಸುರಕ್ಷಿತ ಭೂಸಾರಿಗೆ ಮಾರ್ಗಗಳ ತುರ್ತು ಅಗತ್ಯವಿದೆ. ಹೊಸ ರೈಲ್ವೆ ಯೋಜನೆಯ ಭಾಗವಾಗಿ ವಿವಿಧ ದೇಶಗಳ ಮೂಲಕ ಭಾರತಕ್ಕೆ ತಲುಪುವ ಮಾರ್ಗಗಳನ್ನು ರಷ್ಯಾ ಪರಿಶೀಲಿಸುತ್ತಿದೆʼʼ ಎಂದಿದ್ದಾರೆ.

ರಷ್ಯಾದಿಂದ ಭಾರತಕ್ಕೆ ರೈಲು ಮಾರ್ಗದ ಪ್ರಸ್ತಾವ:



ಸಂಭಾವ್ಯ ಕಾರಿಡಾರ್‌ಗಳ ಕುರಿತು ವಿವರಿಸಿದ ಅವರು, ಇದು ತುರ್ಕಮೆನಿಸ್ತಾನ್, ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮೂಲಕ ಭಾರತಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತಾವಿತ ಜಾಲವು ಕಾರ್ಯರೂಪಕ್ಕೆ ಬಂದರೆ, ರಷ್ಯಾ ಮತ್ತು ಭಾರತದ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾಗಲಿದೆ. "ಹಿಂದೂ ಮಹಾಸಾಗರಕ್ಕೆ ರೈಲು ಸಂಪರ್ಕದ ಸಾಧ್ಯತೆಯತ್ತಲೂ ಗಮನ ಹರಿಸಬೇಕು. ಬಾಸ್ಫರಸ್ ಮತ್ತು ಹೊರ್ಮುಜ್ ಜಲಸಂಧಿಗಳ ಮೂಲಕ ಸರಕು ಸಾಗಣೆಗೆ ಅಪಾಯಗಳಿವೆ. ಹೀಗಾಗಿ, ಪರ್ಯಾಯ ಮಾರ್ಗಗಳ ಅನ್ವೇಷಣೆ ಅನಿವಾರ್ಯ. ಭಾರತ ಪ್ರವೇಶಿಸಲು ಇರುವ ಯಾವುದೇ ಆಯ್ಕೆಗಳು ಸ್ವೀಕಾರಾರ್ಹ" ಎಂದು ಖುಸ್ನುಲ್ಲಿನ್ ವಿವರಿಸಿದ್ದಾರೆ.

ರಷ್ಯಾಗೆ ಮತ್ತೊಂದು ಶಾಕ್ ನೀಡಿದ ಟ್ರಂಪ್; ರಷ್ಯಾದ ಎರಡು ತೈಲ ಕಂಪನಿಗಳಿಗೆ ನಿರ್ಬಂಧ ವಿಧಿಸಿದ ಅಮೆರಿಕ

ಪರ್ಯಾಯ ಮಾರ್ಗಗಳತ್ತ ರಷ್ಯಾ ಗಮನ ಹರಿಸಿದ್ದೇಕೆ?

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ನಂತರ ಹೊರ್ಮುಜ್ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಬೆದರಿಕೆ ನಡುವೆ ಈ ಪ್ರಸ್ತಾವ ಬಂದಿದೆ. ಫೆಬ್ರವರಿ 28ರಂದು ಟೆಹರಾನ್‌ ಸೇರಿ ಪ್ರಮುಖ ನಗರ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ವಿರುದ್ಧ ಇಸ್ರೇಲ್‌ ಮತ್ತು ಅಮೆರಿಕ ಜಂಟಿ ಮಿಲಿಟರಿ ದಾಳಿಗಳನ್ನು ಪ್ರಾರಂಭಿಸಿದವು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಹ್ರೇನ್, ಜೋರ್ಡಾನ್, ಇರಾಕ್, ಕತಾರ್, ಕುವೈತ್, ಯುಎಇ ಮತ್ತು ಸೌದಿ ಅರೇಬಿಯಾದಾದ್ಯಂತ ಇರುವ ಇಸ್ರೇಲ್‌ ಹಾಗೂ ಅಮೆರಿಕ ಮಿಲಿಟರಿ ನೆಲೆಗಳ ವಿರುದ್ಧ ಪ್ರತೀಕಾರದ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಭುಗಿಲೆದ್ದಿತು.

ಈ ಹಿನ್ನೆಲೆಯಲ್ಲಿ ರಷ್ಯಾವು ಪರ್ಯಾಯ ಮಾರ್ಗಗಳತ್ತ ಮನಸ್ಸು ಮಾಡಿದೆ. ಪ್ರಸ್ತಾವಿತ ರೈಲು ಕಾರಿಡಾರ್ ಹಿಂದೂ ಮಹಾಸಾಗರ ಮತ್ತು ಆ ಮೂಲಕ ಭಾರತವನ್ನು ತಲುಪಲಿದೆ. ಇದು ಸರಕು ಸಾಗಣೆಗೆ ಪರ್ಯಾಯ ಭೂಮಾರ್ಗ ತೆರೆಯಲಿದೆ.

ರಷ್ಯಾ ತೈಲ ಖರೀದಿಸುವ ಭಾರತದ ವಿರುದ್ಧ ಅಮೆರಿಕ ಕೆಂಡ; ಶೇಕಡಾ 100 ಸುಂಕ ವಿಧಿಸುವ ಸೆನೆಟರ್ ಲಿಂಡ್ಸೆ ಗ್ರಹಾಂ ಮಸೂದೆಗೆ ಅಂಗೀಕಾರ

ಸದ್ಯ ವಿಶ್ವದ ಅತೀ ದೊಡ್ಡ ರೈಲು ಮಾರ್ಗ ರಷ್ಯಾದಲ್ಲಿದೆ. ಟ್ರಾನ್ಸ್-ಸೈಬೀರಿಯನ್ ವಿಶ್ವದ ಅತಿ ಉದ್ದದ ರೈಲ್ವೆ ಮಾರ್ಗವಾಗಿದ್ದು, ಇದು ಮಾಸ್ಕೋದಿಂದ ರಷ್ಯಾದ ವ್ಲಾಡಿವೋಸ್ಟಾಕ್‌ ಅನ್ನು ಸಂಪರ್ಕಿಸುತ್ತದೆ. ಇದು ಸುಮಾರು 9,289 ಕಿಲೋ ಮೀಟರ್ ಉದ್ದಕ್ಕೆ ಚಾಚಿಕೊಂಡಿದ್ದು, ಸಂಪೂರ್ಣ ಪ್ರಯಾಣಕ್ಕೆ 7 ದಿನ ತೆಗೆದುಕೊಳ್ಳುತ್ತದೆ. ಒಂದು ವೇಳೆ ರಷ್ಯಾ-ಭಾರತ ರೈಲು ಸಂಪರ್ಕ ಯೋಜನೆ ಜಾರಿಯಾದರೆ ಇದೂ ಕೂಡ ವಿಶ್ವದ ಅತೀ ಉದ್ದದ ರೈಲು ಮಾರ್ಗಗಳಲ್ಲಿ ಒಂದೆನಿಸಿಕೊಳ್ಳಲಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.