ನಾವೆಲ್ಲರೂ ಒಂದೇ ದೇವರ ಮಕ್ಕಳು, ಒಂದೇ ಕುಟುಂಬಕ್ಕೆ ಸೇರಿದವರು: ಶ್ರೀ ಮಧುಸೂದನ ಸಾಯಿ
Sadguru Sri Madhusudan Sai: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆದ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ 100ನೇ ದಿನವಾದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, ಭಗವಾನ್ ಶ್ರೀ ಸತ್ಯ ಸಾಯಿ ಅವರ 100 ದಿನಗಳ ಜನ್ಮ ಶತಮಾನೋತ್ಸವವು ಅಂತ್ಯವಲ್ಲ, ಮತ್ತೊಂದು ಶತಮಾನದ ಆರಂಭವಾಗಿದೆ ಎಂದು ತಿಳಿಸಿದರು.
ಶ್ರೀ ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವದಲ್ಲಿ ಶ್ರೀ ಮಧುಸೂದನ ಸಾಯಿ ಅವರು ಕೇಕ್ ಕತ್ತರಿಸಿದರು. -
ಚಿಕ್ಕಬಳ್ಳಾಪುರ, ನ.24: ಭಗವಾನ್ ಶ್ರೀ ಸತ್ಯ ಸಾಯಿ ಅವರ 100 ದಿನಗಳ ಜನ್ಮ ಶತಮಾನೋತ್ಸವವು ಅಂತ್ಯವಲ್ಲ, ಮತ್ತೊಂದು ಶತಮಾನದ ಆರಂಭವಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಘೋಷಿಸಿದ್ದಾರೆ. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya sai grama) ನಡೆದ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ 100ನೇ ದಿನವಾದ ಭಾನುವಾರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸದ್ಗುರು ಅವರು, ನಾವು ನಮ್ಮ ಜೀವನದ ಮೂಲಕ ಭಗವಾನ್ ಅವರನ್ನು ಸಂಭ್ರಮಿಸುವುದನ್ನು ಮುಂದುವರಿಸುತ್ತೇವೆ. ಅವರ ಸಂದೇಶವು ಈಗ ನಮ್ಮ ಜೀವನವಾಗಿವೆ. ವಿಶೇಷ ಆಶೀರ್ವಾದದ ಮಾತುಗಳೊಂದಿಗೆ ಪ್ರತಿದಿನ ಅವರ ಪ್ರತಿಬಿಂಬದಂತೆ ಯೋಗ್ಯವಾಗಿ ಬದುಕಬಹುದು ಎಂದು ಪ್ರತಿಪಾದಿಸಿದರು.
ಸಿಂಫನಿ ಆರ್ಕೆಸ್ಟ್ರಾದ ಅದ್ಭುತವಾದ ಸಂಗೀತವು ನಮ್ಮೆಲ್ಲರ ಹೃದಯಗಳಿಗೆ ನೇರವಾಗಿ ಕಂಡ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ. ತುಂಬಾ ಪ್ರೀತಿ ಮತ್ತು ಸಾಮರಸ್ಯ, ಶಾಂತಿಯಿಂದ ಒಂದಕ್ಕಿಂತ ಇನ್ನೊಂದು ಉತ್ತಮವಾಗಿದ್ದವು. ಇದರಲ್ಲಿ ಯಾವುದೇ ಸ್ಪರ್ಧೆ ಇರಲಿಲ್ಲ. ನಾವು ಯಾವಾಗಲೂ ಕನಸು ಕಂಡ ಒಂದೇ ಜಗತ್ತು ಇದೇ ಎಂದು ನಾನು ಭಾವಿಸುತ್ತೇನೆ. ನಾವೆಲ್ಲರೂ ಒಂದೇ ದೇವರ ಮಕ್ಕಳು, ಒಂದೇ ಕುಟುಂಬಕ್ಕೆ ಸೇರಿದವರು. ಅದು ಮಾನವೀಯತೆಯ ಕುಟುಂಬವಾಗಿದೆ ಎಂದು ಹೇಳಿದರು.
100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ವಿಶ್ವದಾಖಲೆಯನ್ನಾಗಿ ಮಾಡಲಾಗಿದೆ. ಪ್ರಪಂಚದಾದ್ಯಂತ 65 ದೇಶಗಳಿಂದ ಬಂದ ಎಲ್ಲಾ ಅದ್ಭುತ ಸಂಗೀತಗಾರರ ಜತೆಗೆ ನಮ್ಮ ಸಂಸ್ಥೆಯ ಮಕ್ಕಳು ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ಇವರಲ್ಲಿ ಹಲವರು ಬಹುಶಃ ಒಂದು ವರ್ಷದ ಹಿಂದೆ ಈ ಆರ್ಕೆಸ್ಟ್ರಾಕ್ಕೆ ಸೇರಿದ್ದರು. ಅವರೆಲ್ಲರೂ ಈಗಾಗಲೇ ತರಬೇತಿ ಪಡೆದಿದ್ದಾರೆ. ನಿಜವಾಗಿಯೂ ಅದ್ಭುತವಾದ ಸಂಗೀತಗಾರರು, ಅದ್ಭುತವಾದ ಮಕ್ಕಳು. ಇಂತಹ ದೊಡ್ಡ ಸಂಗೀತ ಸಮಾರಂಭವು 100 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಸೇರಿ ನಿಜವಾಗಿಯೂ ಶತಮಾನದ ಘಟನೆಯನ್ನಾಗಿ ಮಾಡಿದ್ದೀರಿ. ಎಲ್ಲಾ ಸಂಗೀತ ಕಲಾವಿದರು, ಸಂಸ್ಥೆಯ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹೆಚ್ಚಿನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ ಎಂದು ಸದ್ಗುರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಖ್ಯಾತ ಗಾಯಕಿ ಕವಿತಾ, ಪ್ರಸಿದ್ಧ ಪಿಟೀಲು ವಾದಕ ಎಲ್. ಸುಬ್ರಹ್ಮಣ್ಯಂ, ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಪದ್ಮಭೂಷಣ ಪುರಸ್ಕೃತರಾದ ಸುನಿಲ್ ಗವಾಸ್ಕರ್ ದಂಪತಿ, ಶ್ರೀಲಂಕಾದ ಮಾಜಿ ಕ್ರಿಕೆಟರ್ ಮತ್ತು ಉದ್ಯಮಿ ಅರವಿಂದ್ ಡಿಸಿಲ್ವಾ, ಸತ್ಯ ಸಾಯಿ ಹೆಲ್ತ್ ಅಂಡ್ ಎಜುಕೇಶನ ಟ್ರಸ್ಟ್‌ನ ಅಧ್ಯಕ್ಷ ಡಾ ಶ್ರೀನಿವಾಸ್, ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಅಧ್ಯಕ್ಷ ಡಾ ಬಿಎನ್ ನರಸಿಂಹ ಮೂರ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ: ಶ್ರೀ ಮಧುಸೂದನ ಸಾಯಿ
ಆಕಾಶದಲ್ಲಿ ಡ್ರೋನ್ ಪ್ರದರ್ಶನ, ಪಟಾಕಿ ಬೆಳಕಿನ ಚಿತ್ತಾರ
ಸಾಯಿ ಸಿಂಫನಿ ಆಕ್ರೆಸ್ಟ್ರಾ ಮುಗಿಯುತ್ತಿದ್ದಂತೆ ವೇದಿಕೆಯ ಬಲಭಾಗದಿಂದ ಆಕಾಶದಲ್ಲಿ ಅತ್ಯಾಕರ್ಷಕವಾಗಿ ಬಂದ ಡ್ರೋನ್ ಪ್ರದರ್ಶನ ನೋಡಗರಲ್ಲಿ ವಿಸ್ಮಯ ಎನಿಸಿತು. 600 ಡ್ರೋಣ್‌ಗಳನ್ನು ಬಳಸಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ, ಸದ್ಗುರು ಶ್ರೀ ಮಧುಸೂದನ ಸಾಯಿ, ಸತ್ಯ ಸಾಯಿ ಸಂಸ್ಥೆಯ ಪ್ರಮುಖ ಸೇವೆಗಳಾಗಿರುವ ಆಹಾರ, ಆರೋಗ್ಯ ರಕ್ಷಣೆ, ಪೌಷ್ಟಿಕ ಆಹಾರ, ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ, ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಒನ್ ವರ್ಲ್ಡ್ ಒನ್ ಫ್ಯಾಮಿಲಿ ವರ್ಲ್ಡ್ ಕಲ್ಚರಲ್ ಫೆಸ್ಟಿವಲ್, ವಸುದೈವಕ ಕುಟುಂಬಕಂ ಹೆಸರಿನ ಚಿತ್ರಗಳನ್ನು ಆಕಾಶದಲ್ಲೇ ಡ್ರೋಣ್ ಬೆಳಕಿನಲ್ಲಿ ಅನಾವರಣಗೊಳಿಸಲಾಯಿತು. ಇದರ ಜತೆಗೆ ಆಕಾಶದಲ್ಲಿ ಸಿಡಿದ ಪಟಾಕಿಗಳ ಬೆಳಕಿನ ಚಿತ್ತಾರವು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.
ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿರುವ ಸಾಯಿ ಕೃಷ್ಣನ್ ಕ್ರೀಡಾಂಗಣದಲ್ಲಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕೇಕ್ ಕತ್ತರಿಸಿದರು. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್, ಮತ್ತವರ ಪತ್ನಿ ಮಾರ್ಷಲೀನ್ ಮಲ್ಹೋತ್ರಾ, ಖ್ಯಾತ ಪಿಟೀಲು ವಾದಕ ಎಲ್.ಸುಬ್ರಹ್ಮಣ್ಯಂ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ಉಪಸ್ಥಿತರಿದ್ದರು.
ಎರಡು ಗಿನ್ನಿಸ್ ದಾಖಲೆ
60 ದೇಶಗಳ ಕಲಾವಿದರಿದ್ದ 450 ಕಲಾವಿದರ ಆರ್ಕೆಸ್ಟ್ರಾ ತಂಡವು ಅತಿಹೆಚ್ಚು ದೇಶಗಳ ನಾಗರಿಕರು ಪಾಲ್ಗೊಂಡಿದ್ದ ವಾದ್ಯಗೋಷ್ಠಿ ಎಂಬ ಗಿನ್ನಿಸ್ ದಾಖಲೆ ಬರೆಯಿತು. ಸತ್ಯ ಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ನಡೆದ 100 ದಿನ ಸಾಂಸ್ಕೃತಿಕ ಮಹೋತ್ಸವವು ಅತಿದೀರ್ಘ ಅವಧಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಗಿನ್ನಿಸ್ ದಾಖಲೆಯಲ್ಲಿ ನಮೂದಾಯಿತು. ವೇದಿಕೆಯಲ್ಲಿ ಗಿನ್ನಿಸ್ ಪ್ರಶಸ್ತಿ ನೀಡುವ ಸಂಸ್ಥೆಯ ಪ್ರತಿನಿಧಿ ಸದ್ಗುರುಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು.