Chikkaballapur News: ಹೋರಾಟದಿಂದ ಉಳಿದ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ; ವಿದ್ಯಾರ್ಥಿಗಳಿಂದ ಪ್ರತಿಜ್ಞೆ
ಸರ್ಕಾರದ ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯಡಿ ಮುಚ್ಚುವ ಭೀತಿಯಲ್ಲಿದ್ದ ಸರ್ಕಾರಿ ಶಾಲೆಗಳನ್ನು ಸಾರ್ವಜನಿಕರು ಹಾಗೂ ಎಐಡಿಎಸ್‌ಒ ನಡೆಸಿದ ಹೋರಾಟದ ಫಲವಾಗಿ ಉಳಿಸಿಕೊಂಡಿರುವ ಹಿನ್ನೆಲೆ ಯಲ್ಲಿ, ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಯ ಅಂಗವಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು
-
ಚಿಕ್ಕಬಳ್ಳಾಪುರ: ಸರ್ಕಾರದ ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆಯಡಿ ಮುಚ್ಚುವ ಭೀತಿಯಲ್ಲಿದ್ದ ಸರ್ಕಾರಿ ಶಾಲೆಗಳನ್ನು ಸಾರ್ವಜನಿಕರು ಹಾಗೂ ಎಐಡಿಎಸ್‌ಒ ನಡೆಸಿದ ಹೋರಾಟದ ಫಲವಾಗಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ, ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಗೌರಿಬಿದನೂರು ತಾಲೂಕಿನ ಮುದುಗೆರೆ, ಹಳೇ ಉಪ್ಪಾರಹಳ್ಳಿ, ರಂಗಪ್ಪನ ಪಾಳ್ಯ, ಗುರಪನಹಳ್ಳಿ ಹಾಗೂ ಭಕ್ತರಹಳ್ಳಿ ಮತ್ತು ಬಾಗೇಪಲ್ಲಿ ತಾಲೂಕಿನ ಪಾತಬಾಗೇಪಲ್ಲಿ, ದೇವರಗುಡಿಪಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಸ್ಮರಿಸಿ ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ: Chikkaballapur News: ಮಳೆ ಕೊರತೆಯಿಂದ ಬಿತ್ತನೆ ವೈಫಲ್ಯ: ಬೆಳೆ ವಿಮೆಗೆ ರೈತರ ನೋಂದಣಿ ಹೆಚ್ಚಳ: ಜಿ.ಪ್ರಭು
“ವಿದ್ಯಾಸಾಗರರ ವೈಜ್ಞಾನಿಕ ಮನೋಧರ್ಮ, ಖುದೀರಾಮರ ಕೆಚ್ಚೆದೆ, ಶರತ್‌ಚಂದ್ರರ ಸಾಹಿತ್ಯಿಕ ಮೌಲ್ಯಗಳು, ವಿವೇಕಾನಂದರ ಉದಾತ್ತ ದೇಶಪ್ರೇಮ, ನೇತಾಜಿಯವರ ಧರ್ಮನಿರಪೇಕ್ಷತೆ ಹಾಗೂ ಭಗತ್‌ಸಿಂಗ್ ಕಂಡ ಕನಸಿನಂತೆ, ಯಾವ ಕಂದನೂ ಹಸಿವಿನಿಂದ ನರಳದ, ಯಾವ ಹೆಣ್ಣೂ ಅಭದ್ರತೆಯಿಂದ ರೋಧಿಸದ, ಎಲ್ಲರಿಗೂ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ದೊರೆಯುವ ಸಮಾಜವಾದಿ ಭಾರತವನ್ನು ನಿರ್ಮಿಸುವ ಸಂಕಲ್ಪ ತೊಡುತ್ತೇವೆ” ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಸಂಚಾಲಕ ತುಳಸಿ, ಜನಹೋರಾಟದ ಫಲವಾಗಿಯೇ ಇಂದು ಈ ಸರ್ಕಾರಿ ಶಾಲೆಗಳು ಜೀವಂತವಾಗಿವೆ. ಹುತಾತ್ಮರು ಕಂಡ ಕನಸಿನಂತೆ ಪ್ರತಿಯೊಬ್ಬರಿಗೂ ಉಚಿತ ಹಾಗೂ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ದೊರೆಯುವವರೆಗೆ ಎಐಡಿಎಸ್‌ಒ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.