ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಭಾಗ್ಯನಗರದಲ್ಲಿ ಆರಂಭವಾಗಿದೆ ಆರೋಗ್ಯ ಸೇವೆಯ ಹೊಸ ಅಧ್ಯಾಯ!

Chikkaballapur News: ಚಿಕ್ಕಬಳ್ಳಾಪುರ ಜಿಲ್ಲೆ ಭಾಗ್ಯನಗರದಲ್ಲಿ ಸೋಮವಾರ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಮತ್ತು ಶಾಹ್ ಹ್ಯಾಪಿನೆಸ್ ತುರ್ತು ಆರೈಕೆ ಕೇಂದ್ರವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು. ಎಲ್ಲ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡುವ ಈ ಕೇಂದ್ರವು ರೋಗ ನಿರ್ಣಯ (ಡಯಾಗ್ನಸ್ಟಿಕ್) ಮತ್ತು ಔಷಧಾಲಯವನ್ನೂ ಹೊಂದಿದೆ.

ಭಾಗ್ಯನಗರದಲ್ಲಿ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಲೋಕಾರ್ಪಣೆ

-

Profile Siddalinga Swamy Sep 1, 2025 6:38 PM

ಚಿಕ್ಕಬಳ್ಳಾಪುರ: ಭಾಗ್ಯನಗರ (ಬಾಗೇಪಲ್ಲಿ) ಪಟ್ಟಣದ ಡಿವಿಜಿ ರಸ್ತೆಯಲ್ಲಿ ಸೋಮವಾರ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರ ಮತ್ತು ಶಾಹ್ ಹ್ಯಾಪಿನೆಸ್ ತುರ್ತು ಆರೈಕೆ ಕೇಂದ್ರವನ್ನು 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಸೇವಾ ಅಭಿಯಾನ' ದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಲೋಕಾರ್ಪಣೆ ಮಾಡಿದರು. ಎಲ್ಲ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡುವ ಈ ಕೇಂದ್ರವು ರೋಗ ನಿರ್ಣಯ (ಡಯಾಗ್ನಸ್ಟಿಕ್) ಮತ್ತು ಔಷಧಾಲಯವನ್ನೂ ಹೊಂದಿದೆ. ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿಯಲ್ಲಿರುವ ಶ್ರೀಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಥಮಿಕ ಆರೋಗ್ಯ ಸೇವಾ ವಿಸ್ತರಣೆಯಾಗಿ ಈ ಕೇಂದ್ರವು ಕಾರ್ಯನಿರ್ವಹಿಸಲಿದೆ.

Chikkaballapur News 1

ಸ್ವಾಸ್ಥ್ಯ ಕ್ಷೇಮ ಕೇಂದ್ರ ಲೋಕಾರ್ಪಣೆ ಮಾಡಿ ಮಾತನಾಡಿದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, 'ಭಾರತದ ಮೊದಲ ತುರ್ತು ಆರೈಕೆ ಕೇಂದ್ರವನ್ನು ಭಾಗ್ಯನಗರದಲ್ಲಿ ಆರಂಭಿಸಿದ್ದೇವೆ. ಇದು ಎಮರ್ಜೆನ್ಸಿ ಮತ್ತು ಸಾಮಾನ್ಯ ಓಪಿಡಿ ಸೇವೆಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸಲಿದೆ. ಇಲ್ಲಿ ರೋಗಪತ್ತೆಯಾದವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ನಮ್ಮದೇ ಆಂಬುಲೆನ್ಸ್‌ಗಳಲ್ಲಿ ಮುದ್ದೇನಹಳ್ಳಿಗೆ ಕರೆದೊಯ್ದು ಅಗತ್ಯ ಸೇವೆ ಒದಗಿಸುತ್ತೇವೆ. ಈ ಭಾಗದ ಸುಮಾರು 2 ಲಕ್ಷ ಜನರಿಗೆ ಸ್ವಾಸ್ಥ್ಯ ಕೇಂದ್ರದಿಂದ ಅನುಕೂಲವಾಗಲಿದೆ' ಎಂದು ತಿಳಿಸಿದರು.

ಮುದ್ದೇನಹಳ್ಳಿಯಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈವರೆಗೆ ಸುಮಾರು 10 ಲಕ್ಷ ಜನರಿಗೆ ಉಚಿತ ಚಿಕಿತ್ಸೆ ಕೊಟ್ಟಿದೆ. 30 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಾಗಿವೆ. 6 ಸಾವಿರಕ್ಕೂ ಹೆಚ್ಚು ಮಕ್ಕಳು ಹುಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಹುಟ್ಟಿದ ಮೊದಲ ಮಗು 'ಸಾಯಿಶ್ರೀ' ಇಲ್ಲಿಯೇ ಇದ್ದಾರೆ ಎಂದು ಮಗುವನ್ನು ಎಲ್ಲರಿಗೂ ಪರಿಚಯಿಸಿದರು.

'ದೊಡ್ಡವರಾದ ಮೇಲೆ ಏನು ಮಾಡುತ್ತೀರಿ' ಎಂದು ಪುಟಾಣಿ ಸಾಯಿಶ್ರೀಯನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಶ್ನಿಸಿದರು. ಆ ಮಗು 'ಡಾಕ್ಟರ್ ಆಗ್ತೀನಿ' ಎಂದು ಉತ್ತರಿಸಿತು. ಅಲ್ಲಿದ್ದವರೆಲ್ಲರೂ ಈ ಉತ್ತರ ಕೇಳಿ ಹರ್ಷಚಿತ್ತರಾದರು. 'ನೀವು ದೊಡ್ಡವರಾದ ಮೇಲೆ ನಮ್ಮ ಕಾಲೇಜಿಗೇ ಬನ್ನಿ, ಅಲ್ಲಿಯೇ ಎಂಬಿಬಿಎಸ್ ಓದಿ, ಅಲ್ಲಿಯೇ ಸೇವೆ ಸಲ್ಲಿಸಿ. ಜನರ ಸೇವೆ ಮಾಡಿ' ಎಂದು ಮಗುವನ್ನು ಸದ್ಗುರು ಆಶೀರ್ವದಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎನ್ನುವ ನಮ್ಮ ಆಶಯಕ್ಕೆ ಅಮೆರಿಕದ ಶಾಹ್ ಹ್ಯಾಪಿನೆಸ್‌ ಫೌಂಡೇಶನ್‌ ಸಹ ಕೈಜೋಡಿಸಿದೆ. ಇಂಥ ಒಟ್ಟು 20 ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಿಸಲು ಫೌಂಡೇಶನ್ ಸಂಕಲ್ಪ ಮಾಡಿದೆ. ಎಲ್ಲ ಕೇಂದ್ರಗಳೂ ಗ್ರಾಮೀಣ ಪ್ರದೇಶಗಳಲ್ಲಿಯೇ ಕಾರ್ಯನಿರ್ವಹಿಸಲಿವೆ. ಎಲ್ಲ ಕೇಂದ್ರಗಳೂ ಮುದ್ದೇನಹಳ್ಳಿಯ ನಮ್ಮ ವೈದ್ಯಕೀಯ ಕಾಲೇಜಿಗೆ ಸಂಯೋಜನೆ ಹೊಂದಿರುತ್ತವೆ ಎಂದು ಮುಂದಿನ ಪಯಣದ ಇಣುಕುನೋಟವನ್ನು ಅವರು ನೀಡಿದರು.

ಸತ್ಯ ಸಾಯಿ ಬಾಬಾ ಅವರು ನಮ್ಮ ಗುರು, ದೇವರು. ಅವರ ಪ್ರೇರಣೆಯಿಂದಲೇ ಇಷ್ಟೆಲ್ಲಾ ನಡೆಯುತ್ತಿದೆ. ಸತ್ಯ ಸಾಯಿ ಬಾಬಾ ಅವರ 100 ನೇ ಜನ್ಮದಿನೋತ್ಸವದ ವಿಶೇಷ ಕಾರ್ಯಕ್ರಮಗಳು ಮುದ್ದೇನಹಳ್ಳಿಯಲ್ಲಿ ನಡೆಯುತ್ತಿವೆ. 600 ಬೆಡ್ ಸಾಮರ್ಥ್ಯದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹ ಸಿದ್ಧವಾಗುತ್ತಿದೆ. ಇದೇ ನವೆಂಬರ್‌ನಲ್ಲಿ ನಡೆಯಲಿರುವ ಆಸ್ಪತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಇದೇ ಸಮಯದಲ್ಲಿ ಮುಕ್ತ ಆಮಂತ್ರಣ ನೀಡಿದರು.

'ಆರೋಗ್ಯ ಸೇವೆಯು ಕೇವಲ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದ್ದಲ್ಲ; ಅದನ್ನು ಸಕಾಲದಲ್ಲಿ ಸಿಗುವ ಘನತೆಯ ಭರವಸೆಯಾಗಿ ಮರು ರೂಪಿಸೋಣ' ಎಂದು ಶಾಹ್ ಹ್ಯಾಪಿನೆಸ್ ಫೌಂಡೇಶನ್‌ನ ಡಾ. ನಿತಿನ್ ಶಾಹ್ ಹೇಳಿದರು. ಶಾಹ್ ಹ್ಯಾಪಿನೆಸ್ ಫೌಂಡೇಶನ್‌ನ ಸಂಸ್ಥಾಪಕ ಮನು ಭಾಯ್ ಶಾಹ್ ಮಾತನಾಡಿ, 'ಈ ಸ್ಥಳವು ಕೇವಲ ಕಾಯಿಲೆಗೆ ಮಾತ್ರವಲ್ಲ, ಆರೋಗ್ಯಕ್ಕೆ ಮತ್ತು ಭಾರತದ ಆರೋಗ್ಯ ಸೇವೆಯಲ್ಲಿ ಹೊಸ ಅನುಭೂತಿಗೆ ಪರ್ಯಾಯ ಹೆಸರಾಗಬೇಕು' ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಂಎಸ್ಐ ಸರ್ವೀಸಸ್‌ನ ಅಧ್ಯಕ್ಷರಾದ ಜೀವನ್ ಭಟ್, ಸಾಮಾಜಿಕ ಪರಿಣಾಮ ವಿಭಾಗದ ಸಹಾಯಕ ಮುಸಾಬ್ ಆಲಂ, ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಕಾರ್ಯತಂತ್ರದ ಬೆಳವಣಿಗೆ ಮತ್ತು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ. ಸತೀಶ್ ಬಾಬು, ಶ್ರೀ ಸತ್ಯ ಸಾಯಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.

ಭಾರತದಲ್ಲಿ ಗ್ರಾಮೀಣ ಪ್ರದೇಶದ ರೋಗಿಗಳು ಆರೋಗ್ಯ ಸೇವೆ ಪಡೆಯಲು ಸರಾಸರಿ 69 ಕಿಮೀ ಸಂಚರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸೇವಾ ಕೇಂದ್ರಗಳು ಮಹತ್ವ ಪಡೆಯುತ್ತವೆ. ಈ ಕೇಂದ್ರಗಳಲ್ಲಿ ಪ್ರಾಣಾಪಾಯವಿಲ್ಲದ ಕಾಯಿಲೆಗಳಿಗೆ ರೋಗಿಗಳು ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಭಾಗ್ಯನಗರದ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರವು 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಸೇವಾ ಅಭಿಯಾನ'ದ 35ನೇ ಸ್ವಾಸ್ಥ್ಯ ಕ್ಷೇಮ ಕೇಂದ್ರವಾಗಿದೆ. 'ಯಾರನ್ನೂ ಕೈಬಿಡಬಾರದು' ಎನ್ನುವ ಆಶಯವನ್ನು ಈ ಸ್ವಾಸ್ಥ್ಯ ಕೇಂದ್ರವು ಪ್ರತಿನಿಧಿಸುತ್ತದೆ.

ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರದ ವಿಳಾಸ: ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಲಯ, ಡಿವಿಜಿ ರಸ್ತೆ, ಭಾಗ್ಯನಗರ (ಬಾಗೇಪಲ್ಲಿ), ಮಾಹಿತಿಗೆ 92402 62091, www.saiswasthya.org

ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.

ಈ ಸುದ್ದಿಯನ್ನೂ ಓದಿ | Sri Madhusudan Sai: ಮಧ್ಯಪ್ರಾಚ್ಯದ ಸಂಕಟಕ್ಕೆ ಮಿಡಿದ ಸದ್ಗುರು ಶ್ರೀ ಮಧುಸೂದನ ಸಾಯಿ